Friday 4 November 2011

ವ್ಯಾನ್ಗೋನ ಸೂರ್ಯಕಾಂತಿಗಳು


   ವಿನ್ಸೆಂಟ್ ವ್ಯಾನ್ಗೊ  -  ಸಾರ್ವಕಾಲಿಕ ಜನಪ್ರಿಯತೆ ಪಡೆದ, ಬಹುಚರ್ಚಿತ ಕಲಾವಿದರಲ್ಲಿ ಮೊದಲ ಹೆಸರು. ಕಿತ್ತು ತಿನ್ನುವ ಅಸ್ಥಿರತೆ, ತನ್ನನ್ನೇ ಮರೆಸುವ ಭಾವತೀವ್ರತೆಯ ಜೊತೆಗೆ ತಾನು ಕಂಡ ಎಲ್ಲವನ್ನೂ ಉತ್ಕಟವಾಗಿ ಬದುಕಿದವನು,  ಬದುಕಿಸಿದವನು ಈ  ಡಚ್ ಕಲಾವಿದ (1853-1890).
   ಅಂತೆಯೇ ಆತನ ಚಿತ್ರಗಳ ಕಣಕಣದಲ್ಲೂ ಅಸಾಧಾರಣ ಜೀವಂತಿಕೆ ನಿರಂತರವಾಗಿ ಸ್ಫೋಟಗೊಳ್ಳುತ್ತದೆ...ಚಿತ್ರಗಳ ಸುರುಳಿಗಳು ನಮ್ಮನ್ನು ಮತ್ತೆ ಬಿಡದಂತೆ ಸೆಳೆದುಕೊಳ್ಳುತ್ತವೆ....ಕ್ಯಾನ್ವಾಸಿನ ಶುದ್ಧ ಹಳದಿ, ನೀಲಿ, ಕಪ್ಪು, ಕೆಂಪುಗಳು ನಮ್ಮ ಕಣ್ಣುಗಳಲ್ಲಿ ನಿಲ್ಲಲಾರದೆ ಮುಖ, ಮೈಗೆ ಮೆತ್ತಿಕೊಳ್ಳುತ್ತವೆ...

   ಫ್ರಾನ್ಸಿನ  ಆರ್ಲ್ಸ್ ನಲ್ಲಿ ಕಳೆದ ಕೊನೆದಿನಗಳಲ್ಲಿ ವ್ಯಾನ್ಗೋನಿಂದ ರಚಿತವಾದ ಅದ್ಭುತ ಸರಣಿ ಚಿತ್ರ - 'ಸೂರ್ಯಕಾಂತಿಗಳು'    (1887-89). ಲೋಕದ ಅಷ್ಟೂ ಚೈತನ್ಯ ಈ ಹೂಗಳಲ್ಲೇ ಅಡಗಿ ಚಿಮ್ಮುತ್ತಿವೆ!  ತನ್ನನ್ನೂ, ಜನರನ್ನೂ, ಗಿಡ, ಮರ, ಹೂವು, ಸೂರ್ಯ,...ಲೋಕದ ಪ್ರತಿಯೊಂದನ್ನೂ ಒಂದೇ ತೀವ್ರತೆಯಲ್ಲಿ ಕಂಡು, ಉತ್ಕಂಠತೆಯಲ್ಲಿ ಅನುಭವಿಸಿದ ವ್ಯಾನ್ಗೊ,  ತನ್ನ ನೋವು, ಅಸ್ಥಿರತೆ, ಒಂಟಿತನ, ತೀವ್ರ ಪ್ರೀತಿ, ನಿಷ್ಠುರತೆ, ನಿರಾಸೆ...ಎಲ್ಲವುಗಳಲ್ಲಿ ಅದ್ದಿ ತೆಗೆದ ಬಣ್ಣಗಳಲ್ಲಿ ಜೀವಂತೆಕೆಗೆ ಹೊಸ ಪರಿಭಾಷೆ ಒದಗಿಸಿದ ಅದ್ಭುತ ಕಲಾವಿದ .

ವ್ಯಾನ್ಗೋನ 'ಸೂರ್ಯಕಾಂತಿಗಳು' ನಮ್ಮ ಕವಿ ಎಸ್. ಮಂಜುನಾಥ್ ಅವರಿಗೆ ಕಂಡಿದ್ದು ಹೀಗೆ...


ವ್ಯಾನ್ಗೋನ ಸೂರ್ಯಕಾಂತಿಗಳು

ಕಣ್ಣ ತುಂಬಿದ್ದ ಹಲವು ನೋಟಗಳ ಕಸ
ಉರಿದುಹೋದಂತಾಯಿತ್ತು
ಆ ಹೂವುಗಳ ಬಣ್ಣದ ಮಿಂಚು ತಾಗಿ
ಶ್ರೇಷ್ಠ ವ್ಯಾನ್ಗೋನ ಚಿತ್ರಗಳ ಸಂಪುಟದಲ್ಲಿದ್ದ ಸೂರ್ಯಕಾಂತಿಗಳ ಚಿತ್ರ
ಕಾಲದ ಹೃದಯದಂತೆ ಮಿಡಿಯುತ್ತಿತ್ತು ನಮ್ಮ ಕ್ಷಣಗಳನ್ನು
ಕಂಡಷ್ಟೂ ನಿಮಿಷಗಳ ನಮಗೆ ನೀಡುತ್ತಿತ್ತು
ಉಳಿಸಿಕೊಂಡವು ನನ್ನನ್ನು ಆ ಹೂವುಗಳು




ಉಕ್ಕಿ ಬರುವ ಲಾವಾರಸದ ಸುಳಿಗಳಂತೆ ಸುತ್ತಿದ್ದವು
ಎಲ್ಲ; ನಡೆದ ದಾರಿ ಬದಿಯ ಪೈನ್ ಮರ ಸಾಲು ಪೊದೆಗಳು
ನೆರಳು ಮತ್ತು ಆಕಾಶವೂ
ಘೋರ ವ್ಯಗ್ರತೆಯಲ್ಲಿ ನರಳಿದ ಉಗ್ರ ಆತ್ಮದ್ವೇಷಿಗೆ
ತನ್ನ ಕೋಣೆಯೊಳಗಡಿಯಿಟ್ಟದ್ದೇ ಬಡಿದಿತ್ತು
ಹೂದಾನಿಯೊಳಗಿದ್ದ ಜ್ವಾಲಾಮುಖಿಯ ಸ್ತಬ್ಧಸ್ಫೋಟ
ದಂಡಿಸಲು ಎರಗಲಿದ್ದ ಸಿಡಿಲುಗಳಂತೆ
ಡಿಕ್ಕಿ ಹೊಡೆದು ಉರಿದುಹೋಗಲಿದ್ದ ಸೂರ್ಯರುಗಳಂತೆ
ಬಿರಿದು ದಳವುದುರುವುದರಲ್ಲಿದ್ದ ಎದ್ದಿದ್ದ ಬಾಗಿದ್ದ
ಹೂವುಗಳು ದೇಟುಗಳೂ ಬೋಳಾಗಿದ್ದ ದಿಂಡುಗಳೂ
ಕಂಡ ವ್ಯಾನ್ಗೋ ಅವುಗಳನ್ನು
ಪ್ರಳಯವಾಗುವುದರಲ್ಲಿ ಇದ್ದ ತನ್ನನ್ನು



ಮೆಲುಗಾಳಿಯಲ್ಲೀಗ ಮೆಲ್ಲ ಹೊರಳಾಡುತ್ತದೆ ಅದೇ
ಹೊಲದ ನೆತ್ತಿ ಮೇಲೆ
ಬೆಳಗುವ ಹಳದೀ ಮೊಗಗಳ ತೂಗುತ್ತ ಮೂಡುತ್ತದೆ
ಸಂಜೆವಿಹಾರಕ್ಕೆ ಬಂದವನಿಗೆ
ಚಿರಂತನದ ಫಲವತ್ತಾದ ಮಣ್ಣು ಎತ್ತಿ ತೋರಿದ ಒಂದು
ಮೊಗವಷ್ಟೇ-ಮಹಾನ್ ವ್ಯಾನ್ಗೋ
ಭಾವಿಸುತ್ತಿರುವೆ ಕೃತಙ್ಞತೆಯೊಂದಿಗೆ ಇಲ್ಲಿ
ಈ ಹೊಲದ ಅಸಂಖ್ಯ ಸಂಗಾತಿಗಳ ನಡುವೆ ನೀನೊಬ್ಬನಾಗಿ
ಶೂನ್ಯದ ಒಳತಿರುಳ ದೀರ್ಘಸುಶುಪ್ತಿಯಲಿ ಮುಳುಗಿರುವಂತೆ ನಿನ್ನನ್ನೂ


                                                           - ಎಸ್. ಮಂಜುನಾಥ್



Monday 31 October 2011

"ಚಿತ್ರಕಲೆಯ ಹುಟ್ಟು, ಬೆಳವಣಿಗೆಯ ಇತಿಹಾಸ - ಒಂದು ಸಂಕ್ಷಿಪ್ತ ಪರಿಚಯ"





  
   "ಬಾಲ್ಯದಲ್ಲಿ ಪ್ರತಿಯೊಬ್ಬನೂ ಚಿತ್ರಕಲಾವಿದನೇ, ಆದರೆ ಬೆಳೆದು ದೊಡ್ಡವನಾದಮೇಲೂ ಶುದ್ಧ ಗ್ರಹಿಕೆ ಮತ್ತು ಅಪ್ಪಟ ಸೃಜನಶೀಲತೆಯನ್ನು ಉಳಿಸಿಕೊಳ್ಳುವುದೇ ಕಲಾವಿದನಿಗಿರುವ ದೊಡ್ಡ ಸವಾಲು!"- ಹೀಗೆಂದವರು ಖ್ಯಾತ ಫ್ರೆಂಚ್ ಕಲಾವಿದ ಪಿಕಾಸೊ.

    ನಾವೆಲ್ಲ ಕಂಡಂತೆ ಮಕ್ಕಳ ಮೊದಲ ಸೃಜನಶೀಲ ಮಾಧ್ಯಮ ಬಹುಷಃ ಚಿತ್ರಕಲೆಯೇ. ಪುಸ್ತಕದ ಬಿಳಿಹಾಳೆಯಿಂದ ಹೊರಗೆ ಮನೆಯ ಗೋಡೆ, ನೆಲ, ಟೇಬಲ್, ನಿಲುವುಗನ್ನಡಿ,..ಹೀಗೆ ಸಪಾಟಾದ ಎಲ್ಲವೂ ಮಕ್ಕಳ ಚಿತ್ರಪ್ರಪಂಚದ ಕ್ಯಾನ್ವಾಸ್ಗಳಾಗಿಬಿಟ್ಟಿರುತ್ತವೆ!  ಪ್ರಾಯಶಃ ನಿಮ್ಮ ಬಾಲ್ಯ ಕೂಡ ಇದಕ್ಕೆ ಹೊರತಾಗಿರಲಿಕ್ಕಿಲ್ಲ! ಅಂದರೆ, ಮಗುವಿನ ಗ್ರಹಿಕೆ, ಅಭಿವ್ಯಕ್ತಿ ಮೊದಲು ರೂಪುಗೊಳ್ಳುವುದು 'ನೋಟ'ದ ಮೂಲಕ. ತನ್ನ ಸುತ್ತಲ ಪ್ರಪಂಚವನ್ನು ಗ್ರಹಿಸುವುದು, ಅರಿಯುವುದು ಮತ್ತು ಅಭಿಪ್ರಾಯ ರೂಪಿಸಿಕೊಳ್ಳುವುದು ದೃಶ್ಯಗ್ರಹಿಕೆಯಿಂದಲೇ. ಅಂತೆಯೇ ದೃಶ್ಯಮಾಧ್ಯಮ ಮನುಷ್ಯನ ಮೂಲ ಸಂವೇದನೆಯ ಸಹಜ ಅಭಿವ್ಯಕ್ತಿ ಮಾಧ್ಯಮ. ಇದಕ್ಕೆ ಸರಿಸುಮಾರು  35,000 ದಿಂದ 50,000 ವರ್ಷಗಳ ಇತಿಹಾಸವಿದೆ !


       'ಚಿತ್ರಕಲೆ' ಎಂಬುದು ಕೇವಲ ಬಣ್ಣ, ಮೈವಳಿಕೆ ಮುಂತಾದ ಬಾಹ್ಯರೂಪಕ್ಕೆ ಮಾತ್ರ ಸೀಮಿತವಾದುದಲ್ಲ. ಇದು ಮನುಷ್ಯನ ಮನಸ್ಸನ್ನು ಬಿಂಬಿಸುವ ಕನ್ನಡಿಯೂ ಹೌದು. ತನ್ನ ಸುತ್ತಲಿನ ದೃಶ್ಯಜಗತ್ತನ್ನು ಪರಿವೀಕ್ಷಿಸುತ್ತ, ಅವುಗಳ ಮೂಲಕ ತನ್ನನ್ನು ತಾನು ಅರಿತುಕೊಳ್ಳುವ ಸಂವೇದನಾಶೀಲ ಮಾನವನ ಸಹಜ ಅಭಿವ್ಯಕ್ತಿ ಮಾಧ್ಯಮ - 'ಚಿತ್ರಕಲೆ.' ಮನಸ್ಸಿನ ಭಾವಸ್ವರೂಪವನ್ನು ದೃಶ್ಯರೂಪದಲ್ಲಿ  ಕಟ್ಟಿಕೊಡುವ ಈ ವಿಶಿಷ್ಟ ಮಾಧ್ಯಮದ ಹುಟ್ಟು-ಬೆಳವಣಿಗೆಯ ಇತಿಹಾಸವನ್ನು ಸಂಕ್ಷಿಪ್ತರೂಪದಲ್ಲಿ ಇಲ್ಲಿ ಚರ್ಚಿಸಲಾಗಿದೆ. ಚಿತ್ರಕಲೆಯ ಹುಟ್ಟು -ಬೆಳವಣಿಗೆ-ಇಂದಿನ ಸ್ವರೂಪ ಇವುಗಳನ್ನು ನಾಲ್ಕು ಪುಟಗಳಲ್ಲಿ ಚರ್ಚಿಸುವುದು ಕಷ್ಟಸಾಧ್ಯವಾದುದು. ಈ ನಿಟ್ಟಿನಲ್ಲಿ ಭಾರತೀಯ ಚಿತ್ರಕಲಾ ಇತಿಹಾಸವನ್ನು ಮುಂದಿರಿಸಿ, ಅದಕ್ಕೆ ಪೂರಕವಾಗಿ ಜಾಗತಿಕ ಚಿತ್ರಕಲೆಯನ್ನು ಪರಿಚಯಿಸುತ್ತ, ಒಟ್ಟಾರೆ ಸಂಕ್ಷಿಪ್ತನೋಟವನ್ನು ಕೊಡುವ ಪ್ರಯತ್ನ ಇದಾಗಿದೆ. ಓದುಗರನ್ನು ಚಿತ್ರಕಲೆಯ ಕುರಿತು ಮತ್ತಷ್ಟು ಸವಿವರ ಅಧ್ಯಯನದೆಡೆಗೆ ಒಯ್ಯಲು ಈ ಪ್ರಬಂಧ ಸಹಕಾರಿಯಾಗಬಲ್ಲದೆಂಬ ಆಶಯ ನನ್ನದು.


       ಹಳೆ ಶಿಲಾಯುಗದ ಕೊನೆಯ ಹಂತದಲ್ಲಿ, ಅಂದರೆ ಸುಮಾರು 35,000 ವರ್ಷಗಳಷ್ಟು ಹಿಂದೆ ರಚಿಸಲ್ಪಟ್ಟ ಕಲಾಕೃತಿಗಳು ಮೊಟ್ಟಮೊದಲಿಗೆ ದೊರೆತಂಥವು. ಆದರೆ, ಇವೇ ಮೊದಲು ರಚಿಸಲ್ಪಟ್ಟಿವೆ ಎನ್ನಲಾಗದು. ಸಾವಿರಾರು ವರ್ಷಗಳಿಂದ ಹಂತಹಂತವಾಗಿ ರೂಪಾಂತರಗೊಂಡು ರಚಿತವಾದವುಗಳು ಇವು. 19 ನೇ ಶತಮಾನದ ಕೊನೆಯಲ್ಲಿ ಯುರೋಪ್ನ ಪಶ್ಚಿಮ ಭಾಗಗಳಲ್ಲಿ ಗುಹಾಚಿತ್ರಗಳು ಶೋಧಿಸಲ್ಪಟ್ಟವು. ಸ್ಪೇನಿನ ಅಲ್ತಾಮಿರ ಗುಹೆಗಳಲ್ಲಿ ಮೊಟ್ಟಮೊದಲಿಗೆ ಇಂಥ ಚಿತ್ರಗಳು ಕಂಡುಬಂದವು.
ಲಾಸ್ಕಾಕ್ಸ್ ಗುಹಾಚಿತ್ರಗಳು

ಚರಿತ್ರೆಯ ಮೊಟ್ಟಮೊದಲ ಕಲಾಕೃತಿ ಎಂದು ನಂಬಲಾಗಿರುವ ಮತ್ತೊಂದು ಚಿತ್ರವೆಂದರೆ, ಅದು ಮಾನವನ ಮುಂಗೈಯ ಛಾಪು. ಅಂಗೈಯನ್ನು ಕಲ್ಲಿನ ಗೋಡೆಯ ಮೇಲಿರಿಸಿ, ಕೊಳವೆಯ ಮೂಲಕ ಕಡುಹಳದಿ ಬಣ್ಣವನ್ನು ಊದಿ, ಕೈಯನ್ನು ಹೊರತೆಗೆದಾಗ ಕಾಣುವ ಮುಂಗೈಯ ಆಕಾರದ ಚಿತ್ರಗಳಿವು. ಆಗ್ನೇಯ ಫ್ರಾನ್ಸಿನ  ಪೆಕ್-ಮರ್ಲ್ ಎಂಬಲ್ಲಿ 30,000 ವರ್ಷಗಳಷ್ಟು ಹಳೆಯದೆನ್ನಬಹುದಾದ ಇಂಥ ಚಿತ್ರಗಳು ಸಿಕ್ಕಿವೆ.

    ಮಾನವ ಚಿತ್ರಬರೆಯುವುದನ್ನು ಪ್ರಾರಂಭಿಸಿದ್ದು ಅಲಂಕರಣ ಅಥವಾ ಮನರಂಜನೆಗಾಗಿ ಅಲ್ಲ, ಬದಲಿಗೆ ತನ್ನ ಮನೋಬಲ ವೃಧ್ಧಿಸಿಕೊಳ್ಳಲು! ಆದಿಮಾನವನ ಬದುಕಿನ ಅಸ್ತಿತ್ವ ಭಾಗಶಃ ತನ್ನ ಬೇಟೆಯ ಮೇಲೆ ಅವಲಂಬಿಸಿತ್ತು. ಗುಹೆಗಳಲ್ಲಿ ವಾಸಿಸುತ್ತಿದ್ದ ಆತನ ಆಯುಧಗಳೂ ಸೀಮಿತವಾಗಿದ್ದವು. ಸಣ್ಣಪುಟ್ಟ ಹಕ್ಕಿ, ಮೀನುಗಳಿಗಿಂತ ಜಿಂಕೆ, ಕಡವೆ, ಕೋಣಗಳಂಥ ದೊಡ್ಡ ಮಿಕಗಳ ಬೇಟೆ, ಗುಂಪಿನಲ್ಲಿ ವಾಸಿಸುತ್ತಿದ್ದ ಆತನ ಬಹುಮಟ್ಟಿನ ಆಹಾರವನ್ನು ಪೂರೈಸುತ್ತಿತ್ತು. ಸಹಜವಾಗಿ ಆತ ಇಂಥ ಬೇಟೆಗಳ ಕುರಿತು ಹೆಚ್ಚು ಯೋಚಿಸುತ್ತಿದ್ದಿರಬೇಕು. ಹಾಗಾಗಿ ಬಹುಷಃ ಗುಹೆಯ ಗೋಡೆಯ ಮೇಲ್ಮೈಯಲ್ಲಿ ಪ್ರಾಣಿಗಳ ಅಸ್ಪಷ್ಟ ಆಕಾರ ಕಂಡು, ಸುಟ್ಟ ಇದ್ದಲಿನಿಂದ ಹೊರರೇಖೆಗಳನ್ನು ರಚಿಸಿರಬಹುದು. ನಂತರ ಈ ಅಭ್ಯಾಸ ಮುಂದುವರೆದಂತೆ, ಕೊನೆಗೆ ತಾನೇ ಸ್ವತಂತ್ರವಾಗಿ ಚಿತ್ರರಚಿಸಲು ಸಮರ್ಥನಾಗಿರಬಹುದು ಎಂದು ಊಹಿಸಲಾಗಿದೆ. ಬೇಟೆಗಾಗಿ ಗುಂಪಿನಲ್ಲೇ ಹೋಗುತ್ತಿದ್ದನಾದರೂ ಸಾಕಷ್ಟು ಪ್ರಬಲ ಆಯುಧಗಳಿಲ್ಲದಿದ್ದರಿಂದ ಬಲಿಷ್ಠ ಪ್ರಾಣಿಗಳ ಜೊತೆ ಸೆಣಸುವುದೆಂದರೆ ಜೀವನ್ಮರಣದ ಘಟನೆಯೇ ಆಗಿರುತ್ತಿತ್ತು. ಬೇಟೆಯ ಪ್ರಸಂಗಗಳು ಆತನ ಪಾಲಿಗೆ ಅತ್ಯಂತ ಕಠಿಣ ಸವಾಲಿನದ್ದಾಗಿತ್ತು. ಇಂಥ ಸಂದರ್ಭಗಳಲ್ಲಿ ತನ್ನ ಮನೋಬಲವನ್ನು ವೃಧ್ಧಿಸಿಕೊಳ್ಳುವ ಸಲುವಾಗಿ ಅವನು ಮೊರೆಹೋಗಿದ್ದು ಚಿತ್ರಗಳಿಗೆ!


    ತಾನು ಬೇಟೆಯಾಡಬೇಕಾದ ಪ್ರಾಣಿಯ ಚಿತ್ರವನ್ನು ಬರೆಯುತ್ತಿದ್ದ ಆತ, ಬೇಟೆಗೆ ಹೋಗುವ ಮುನ್ನ ಸಾಂಕೇತಿಕವಾಗಿ ಚಿತ್ರದ ಪ್ರಾಣಿಯನ್ನು ಬೇಟೆಯಾಡುತ್ತಿದ್ದ! ಅಂದರೆ, ಚಿತ್ರಿತ ಪ್ರಾಣಿಯನ್ನು ತನ್ನ ಆಯುಧಗಳಿಂದ ಗಾಯಗೊಳಿಸಿ ಕೊಂದರೆ, ಅದನ್ನು ತನ್ನ ವಶಗೊಳಿಸಿಕೊಂಡ ಅನುಭವ ಪಡೆಯುತ್ತಿದ್ದ. ಇದರಿಂದ ಮಾನಸಿಕ ಸ್ಥೈರ್ಯ, ಸ್ಫೂರ್ತಿ ದೊರೆಯುತ್ತಿದ್ದುದರಿಂದ ನಿಜವಾದ ಬೇಟೆ ಆತನಿಗೆ ಸಲೀಸಾಗುತ್ತಿತ್ತು! ಹೀಗೆ ಪ್ರತೀಸಲ ಬೇಟೆಗೆ ಹೊರಡುವ ಮುನ್ನ ಪ್ರಾಣಿಗಳ ಚಿತ್ರರಚನೆ ಮತ್ತು ಅವುಗಳನ್ನು ಚಿತ್ರದಲ್ಲೇ ಕೊಲ್ಲುವ ಪರಿಪಾಠ ರೂಢಿಸಿಕೊಂಡಿರಬೇಕು. ಮನುಷ್ಯಾಕೃತಿಗಿಂತಲೂ ಎತ್ತರವಾದ, ಬೃಹದ್ಗಾತ್ರದ ಕಾಡೆಮ್ಮೆ, ಕಾಡುಕೋಣ, ಕಡವೆ, ಜಿಂಕೆ, ಕಾಡುಹಂದಿ, ಸಾರಂಗ,... ಹೀಗೆ ಹತ್ತುಹಲವು ಪ್ರಾಣಿಗಳ ಚಿತ್ರಗಳು ಅಚ್ಚರಿಹುಟ್ಟಿಸುವಷ್ಟು ಸಹಜವಾಗಿವೆ! ಅಷ್ಟು ಪುರಾತನ ಮಾನವನಿಂದ ಸಾಧ್ಯವಾದ ಅಸಾಧಾರಣ ರಚನೆ ನಿಜಕ್ಕೂ ಅದ್ಭುತವಾದುದು!
ಅಲ್ತಾಮಿರ ಗುಹಾಚಿತ್ರ

   ಚಿತ್ರರಚನೆ ಎಂಬುದು 'ಕಲೆ'ಯಾಗಿ ರೂಪುಗೊಂಡು, ಅಲಂಕಾರಿಕ ಮಾಧ್ಯಮವಾಗಿ ಮಾರ್ಪಡುವ ಮೊದಲು ಚಾಲ್ತಿಯಲ್ಲಿದ್ದುದು ಇಂಥ, ಮನೋಬಲವೃಧ್ಧಿಗೆ ಪೂರಕವಾದ ಆಚರಣೆಗಳಲ್ಲಿ. ಈ ಹಿನ್ನೆಲೆಯಲ್ಲಿ ಇವನ್ನು 'ಮಾಂತ್ರಿಕ ಚಿತ್ರಗಳು' ಎಂದೂ ಕರೆಯಬಹುದು. ಇಂದಿಗೂ ಭಾರತದಲ್ಲಿ 'ತಾಂತ್ರಿಕ ಕಲೆ' ಎಂದು ಕರೆಯಲ್ಪಡುವ ಕಲಾಪ್ರಕಾರವೂ ಇಂಥ ಆಚರಣೆಗಳಿಗೆ ಪೂರಕವಾಗಿಯೇ ಉಳಿದುಬಂದಿದೆ. ಪೂಜೆ ಪುನಸ್ಕಾರಗಳಲ್ಲಿ ಅಥವಾ ಸಾಂಪ್ರದಾಯಿಕ ಆಚರಣೆಗಳಲ್ಲಿ ರಚಿಸಲ್ಪಡುವ ಕೆಲವು ರಂಗೋಲಿಗಳು, ರೇಖಾಚಿತ್ರಗಳೂ ಕೂಡ ಸಾಂಕೇತಿಕ ಚಿತ್ರಗಳಾಗಿ ಇಂದಿಗೂ ಚಾಲ್ತಿಯಲ್ಲಿರುವುದನ್ನು ನೀವು ಕಂಡಿರಬಹುದು.

    ಆದಿಮಾನವನು ಚಿತ್ರರಚನೆಗೆ ಭೂಮಿಯಲ್ಲಿ ಸಿಗುವ ಹಳದಿ, ಕೆಂಪು ಮಣ್ಣಿನ ಗಟ್ಟಿ, ಕಲ್ಲಿದ್ದಲಿನ ಕಪ್ಪು, ಹಸಿರು ಕಲ್ಲು - ಇವುಗಳಿಂದ ಬಣ್ಣ ತಯಾರಿಸಿಕೊಂಡಿರಬಹುದು.  ಇವುಗಳೊಂದಿಗೆ ಪ್ರಾಣಿಗಳ ರಕ್ತವನ್ನೊ, ಕೊಬ್ಬನ್ನೊ ಬೆರೆಸಿ ಬಳಸಿರಬಹುದು. ರಕ್ತದ ಬಳಕೆ ಮಾಡಿದ್ದರೆ ಅದು ಕಾಡುಹಂದಿಯದ್ದೇ ಆಗಿರಬಹುದು (ಇದು ಇತರೆ ಪ್ರಾಣಿಗಳ ರಕ್ತದಂತೆ ಬೇಗ ಹೆಪ್ಪುಗಟ್ಟದಿರುವುದರಿಂದ) ಎಂದು ಇತಿಹಾಸಕಾರರು ಊಹಿಸುತ್ತಾರೆ. ಹಾಗೆಯೇ ಗಿಡದ ರೆಂಬೆಯ ತುದಿಯನ್ನು ಜಜ್ಜಿ, ಬ್ರಷ್ನಂತೆ ಬಳಸಿರಬಹುದೆಂದು ಅಂದಾಜಿಸಲಾಗಿದೆ. ಅಲ್ಲದೆ, ಕೆಲವು ಚಿತ್ರಗಳಲ್ಲಿ ಬೆರಳುಗಳ ಅಚ್ಚಿನ ಗುರುತೂ ಸಿಗುವುದರಿಂದ, ಬೆರಳುಗಳಿಂದಲೂ ಬಣ್ಣತುಂಬಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

   ಭಾರತದಲ್ಲಿ ಮೆದಲಬಾರಿಗೆ ಇತಿಹಾಸಪೂರ್ವಕಾಲದ ಚಿತ್ರಗಳು ಮಧ್ಯಪ್ರದೇಶದ ಭೀಂಬೆಟ್ಕಾ ಗುಹೆಗಳಲ್ಲಿ ಕಾಣಸಿಕ್ಕಿವೆ. ಅವುಗಳನ್ನು ಸುಮಾರು 20,000 ದಿಂದ 50,000 ವರ್ಷಗಳಷ್ಟು ಹಳೆಯದೆಂದು ಗುರ್ತಿಸಲಾಗಿದೆ. ಉತ್ತರಪ್ರದೇಶ, ಗುಜರಾತ್, ರಾಜಸ್ಥಾನ, ಕರ್ನಾಟಕ, ಆಂಧ್ರ, ತಮಿಳ್ನಾಡು, ಕೇರಳದಲ್ಲಿ ಇಂಥ ನೂರಾರು ಚಿತ್ರಗಳು ಬೆಳಕಿಗೆ ಬಂದಿವೆ.


    ಮಾನವ ನಾಗರಿಕನಾಗುತ್ತಾ ಹೋದಂತೆಲ್ಲ, ಆತನ ಜೀವನಶೈಲಿ, ರೂಢಿಗಳಿಗೆ ತಕ್ಕಂತೆ ಚಿತ್ರಕಲೆಯೂ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತ ಸಾಗಿತು. ಮಾನವನ ಮನೋಲ್ಲಾಸ, ಆಕಾಂಕ್ಷೆ, ಸುಪ್ತ ಭಾವನೆಗಳನ್ನು ಬಿಂಬಿಸುವ ಸಾಂಕೇತಿಕ ಪ್ರತಿನಿಧಿಯಾಗಿ, ಮಹತ್ವದ ಮಾಧ್ಯಮವಾಗಿ ಚಿತ್ರಕಲೆ ಬೆಳೆಯುತ್ತ ಬಂದಿದೆ. ಸಿಂಧೂ ನಾಗರಿಕತೆಯ ಸಂಸ್ಕೃತಿಯಲ್ಲಿ ಕಂಡುಬರುವ ಚಿತ್ರಗಳಲ್ಲಿ ಅಲಂಕಾರಿಕ ಅಂಶಗಳು ಕಾಣಸಿಗುತ್ತವೆ. ನಾಗರಿಕತೆ ಬೆಳೆದಂತೆಲ್ಲಾ ಮನುಷ್ಯನ ಸೌಂದರ್ಯಪ್ರಙ್ಙೆಯೂ ಬೆಳೆದದ್ದನ್ನು ಚಿತ್ರಗಳ ಮೂಲಕ ಕಾಣಬಹುದು.  ಚಿತ್ರಕಲೆಯು ಆಯಾ ನಾಗರೀಕತೆಯ ಹುಟ್ಟು, ಬೆಳವಣಿಗೆ, ಆಚಾರ-ವಿಚಾರ, ಉಡುಗೆ-ತೊಡುಗೆ ಮುಂತಾದ ಪ್ರಮುಖ ವಿಷಯಗಳನ್ನು ಬಿಂಬಿಸುವ ಮಾಧ್ಯಮವಾಗಿರುವುದರಿಂದಲೇ ಇತಿಹಾಸ ರಚನೆಯಲ್ಲಿ ಮತ್ತು ಸಮಾಜಶಾಸ್ತ್ರದ ಅಧ್ಯಯನದಲ್ಲಿ ಪ್ರಮುಖ ಆಕರವಾಗಿದೆ. ಜಗತ್ತಿನ ಎಲ್ಲ್ಲಾ ಪ್ರಮುಖ ನಾಗರೀಕತೆಯ ಹುಟ್ಟು-ಬೆಳವಣಿಗೆಗಳ ಸಾಧಾರ ಅಧ್ಯಯನಕ್ಕೆ ಸಹಕಾರಿಯಾಗುವ ಅಂಶಗಳಲ್ಲಿ ಚಿತ್ರಕಲೆ ಪ್ರಮುಖವಾದುದು.

    ಸಾಮಾಜಿಕ ಶಿಷ್ಟತೆಯ ಪರಿಧಿಯಲ್ಲಿ 'ಚಿತ್ರಕಲೆ' ಒಂದು ಅಸಾಮಾನ್ಯ, ಚಮತ್ಕಾರಿಕ ವಿದ್ಯೆಯಾಗಿ ಪರಿಗಣಿಸಲ್ಪಟ್ಟಂಥದ್ದು.  ಭಾರತೀಯ ಸಾಂಪ್ರದಾಯಿಕ ಸಮಾಜದಲ್ಲಿ,  ಚಿತ್ರಕಲೆ ಎಂಬುದು ಆದರ್ಶ ನಾಗರೀಕತೆಯ ಲಕ್ಷಣಗಳಲ್ಲಿ ಒಂದೆನಿಸಿತ್ತು. 64 ರಾಜವಿದ್ಯೆಗಳಲ್ಲಿ ಇದೂ ಒಂದು. ಚಿತ್ರಕಲೆಯ ಅರಿವಿಲ್ಲದವನು ಪರಿಪೂರ್ಣ 'ಸುಸಂಸ್ಕೃತ' ನಾಗರೀಕನೆನಿಸುತ್ತಿರಲಿಲ್ಲ. ಚಿತ್ರಕಲೆಗೆ ಭಾರತೀಯ ಸಂಸ್ಕೃತಿಯಲ್ಲಿ ಸಿಕ್ಕ ಪ್ರಾಶಸ್ತ್ಯ ಅನನ್ಯವಾದುದು. 'ಸೌಂದರ್ಯ'ಕ್ಕೆ ಪರ್ಯಾಯ ಎಂಬಷ್ಟರ ಮಟ್ಟಿಗೆ ಭಾರತೀಯ ಸೌಂದರ್ಯೋಪಾಸನೆಯ ಅವಿಭಾಜ್ಯ ಮಾಧ್ಯಮವಾಗಿ 'ಚಿತ್ರಕಲೆ' ಸ್ಥಾನಪಡೆದಿದೆ. ಅಷ್ಟೇ ಅಲ್ಲದೆ ಕಲಾವಿದನ ಆಧ್ಯಾತ್ಮದ ಸಾಧನೆಯ ಮಾರ್ಗವಾಗಿಯೂ ಚಿತ್ರಕಲೆ ಗೌರವಿಸಲ್ಪಟ್ಟಿದೆ. 'ಚಿತ್ರ' ಎಂಬುದಕ್ಕೆ ಆಕೃತಿ, ಶುಭ, ಚಮತ್ಕಾರ, ಆಶ್ಚರ್ಯ, ಸೋಜಿಗ, ಅದ್ಭುತ, ವಿಸ್ಮಯ ಎಂಬ ಹಲವು ಅರ್ಥಗಳಿವೆ. ಒಟ್ಟಾರೆ - ಅದ್ಭುತವಾದ, ಸುಂದರವಾದ, ಹಲವು ವರ್ಣಗಳಿಂದ ಕೂಡಿದ ರಚನೆಯೇ 'ಚಿತ್ರ' ಎಂಬುದು ಭಾರತೀಯ ಚಿತ್ರಕಲೆಗಿರುವ ಶಿಷ್ಟ - ಸಾಂಪ್ರದಾಯಿಕ ವ್ಯಾಖ್ಯಾನ.
ರಾಜಸ್ಥಾನಿ ಚಿಕಣಿಚಿತ್ರಣ

'ಕಲಾನಾಂ ಪ್ರವರಂ ಚಿತ್ರಂ
ಧರ್ಮ ಕಾಮಾರ್ಥ ಮೋಕ್ಷದಂ'

(ಚಿತ್ರವು ಕಲೆಗಳಲ್ಲಿ ಶ್ರೇಷ್ಠ. ಧರ್ಮ, ಅರ್ಥ, ಕಾಮ, ಮೋಕ್ಷ ಚತುರ್ವಿಧ ಪುರುಷಾರ್ಥಗಳನ್ನೂ ಕೊಡಬಲ್ಲದು) ಎನ್ನುತ್ತದೆ ವಿಷ್ಣುಧರ್ಮೋತ್ತರ ಪುರಾಣ. ವಾತ್ಸ್ಯಾಯನನ ಕಾಮಸೂತ್ರ, ವಿಷ್ಣುಧರ್ಮೋತ್ತರ ಪುರಾಣ, ವಿನಯಪಿಟಕ, ಬೃಹತ್ ಸಂಹಿತೆ ಮುಂತಾದ ಗ್ರಂಥಗಳಲ್ಲಿ ಚಿತ್ರಕಲೆಯ ಮಹತ್ವ, ಶಾಸ್ತ್ರಬದ್ಧ ನಿಯಮಗಳು, ಪ್ರಮಾಣ, ಚಿತ್ರ ಪರಿಕರಗಳ ತಯಾರಿಕೆ ಇತ್ಯಾದಿ ವಿಷಯಗಳನ್ನು ಸವಿವರವಾಗಿ ಹೇಳಲಾಗಿದೆ.( ಇವು ಕ್ರಿ.ಶ. ಎರಡನೇ ಶತಮಾನದಿಂದ ಕ್ರಿ.ಶ. ಸುಮಾರು ಹದಿನೈದನೆ ಶತಮಾನದ ನಡುವೆ ರಚಿತವಾದ ಗ್ರಂಥಗಳು).

    ಸಮಾಜದ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಜೀವನದೊಂದಿಗೆ ಚಿತ್ರಕಲೆಯ ಅವಿನಾಭಾವ ಸಂಬಂಧವಿರುವುದನ್ನು ಕಾಣಬಹುದು. ವೇದಗಳ ಕಾಲದಲ್ಲಿ(ಕ್ರಿ.ಪೂ. 1500 ರಿಂದ ಕ್ರಿ.ಪೂ. 500) ಭಾರತದ ಚಿತ್ರಕಲೆ ಧಾರ್ಮಿಕ ಸ್ವರೂಪ ಪಡೆದುಕೊಂಡಿತು. ಶಿಷ್ಟ ಸಂಪ್ರದಾಯದ ಪರಿಧಿಯಲ್ಲಿ ರೂಪುಗೊಳ್ಳುತ್ತ ಬೆಳೆದ ಚಿತ್ರಕಲೆಯನ್ನು ಧಾರ್ಮಿಕ ತತ್ವಗಳ ಪ್ರಚಾರಪ್ರಕ್ರಿಯೆಯಲ್ಲಿ ತೀವ್ರವಾಗಿ ಬಳಸಿಕೊಳ್ಳಲಾಯಿತು. ಧರ್ಮಪ್ರಚಾರ ಎಂಬುದು ಸಾಮ್ರಾಜ್ಯವಿಸ್ತರಣೆ ಮತ್ತು ಸುಧಾರಣೆಯಲ್ಲಿ ಪ್ರಮುಖಪಾತ್ರವಹಿಸಿತ್ತಾದ್ದರಿಂದ ಧಾರ್ಮಿಕ ವಕ್ತಾರರು ತಮ್ಮ ಧರ್ಮದ ಸಾರವನ್ನು, ತತ್ವ-ವಿಚಾರಗಳನ್ನು ಸಶಕ್ತ ಮಾಧ್ಯಮವಾದ ಚಿತ್ರಗಳ ಮೂಲಕ ಅನಕ್ಷರಸ್ಥರಿಗೂ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡರು. ಹಾಗೆ ನೋಡಿದಲ್ಲಿ ಚಿತ್ರಕಲೆ ಎಂಬುದು ಸಾಹಿತ್ಯ ಅಥವಾ ಧಾರ್ಮಿಕ ತತ್ವಗಳನ್ನು ನಿರೂಪಿಸುವ 'ನಿರೂಪಣಾ ಮಾಧ್ಯಮ' ವಾಗಿದ್ದುದು (Illustration)  ವ್ಯಾಪಕವಾಗಿ ಕಂಡುಬರುತ್ತದೆ.
  ಪದ್ಮಪಾಣಿ ಬುದ್ಧ - ಅಜಂತಾ ಭಿತ್ತಿಚಿತ್ರ

    ಭಾರತದಲ್ಲಿ ಕ್ರಿ.ಶ. 12ನೇ ಶತಮಾನದಲ್ಲೇ ಕಾಗದದ ಬಳಕೆಯಿತ್ತಾದರೂ 15 ನೇ ಶತಮಾನದವರೆಗೆ ಹೆಚ್ಚಾಗಿ ಕಂಡುಬರುವುದು ಭಿತ್ತಿಚಿತ್ರಗಳು. ನಂತರದ ಕಾಲದಲ್ಲಿ ಭಿತ್ತಿಚಿತ್ರಗಳೊಂದಿಗೆ ಬಟ್ಟೆ, ಮರದ ಹಲಗೆ, ಕಾಗದ ಮುಂತಾದ ಹಿನ್ನೆಲೆಯಲ್ಲಿ ರಚಿತವಾದ ಚಿಕಣಿಚಿತ್ರಗಳೂ (Miniature Paintings) ಕಂಡುಬರುತ್ತವೆ. ಶಾತವಾಹನ, ವಾಕಾಟಕ, ಗುಪ್ತ, ಚಾಲುಕ್ಯ, ರಾಷ್ಟ್ರಕೂಟ, ಪಲ್ಲವ, ಚೋಳ, ವಿಜಯನಗರ ಮತ್ತು ನಾಯಕ ದೊರೆಗಳ ಆಡಳಿತಾವಧಿಯಲ್ಲಿ ಚಿತ್ರಕಲೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು ಮತ್ತು ಹಲವಾರು ಭಿತ್ತಿಚಿತ್ರಗಳು, ಪ್ರತಿಚಿತ್ರಗಳ ರಚನೆಯಾಯಿತು. ಧರ್ಮದೊಂದಿಗಿನ ಚಿತ್ರಕಲೆಯ ನಂಟು ಕೇವಲ ಭಾರತಕ್ಕಷ್ಟೇ ಸೀಮಿತವಾದುದಲ್ಲ. ಜಾಗತಿಕ ನೆಲೆಯಲ್ಲೂ ಚಿತ್ರಕಲೆಯು ಧಾರ್ಮಿಕ ನಿರೂಪಣೆಯ ಮಾಧ್ಯಮವಾಗಿ ತನ್ನ ವ್ಯಾಪಕತೆಯನ್ನು, ಮಹತ್ವವನ್ನು ಕಂಡುಕೊಂಡಿತ್ತು. ಭಾರತದಲ್ಲಿ ಬೌದ್ಧ, ಹಿಂದೂ, ಜೈನ ಧರ್ಮಗಳು ಚಿತ್ರಕಲೆಯನ್ನು ಪ್ರಚಾರ ಮಾಧ್ಯಮವಾಗಿಯೂ, ಧರ್ಮತತ್ವಗಳ ಸಂರಕ್ಷಣಾ ಮಾಧ್ಯಮವಾಗಿಯೂ ಬಳಸಿಕೊಂಡವು. ಅಜಂತಾದ ಗುಹೆಗಳಲ್ಲಿ ರಚಿಸಲಾದ ಬುದ್ಧನ ಜಾತಕ ಕಥೆಗಳು ( ಕ್ರಿ. ಪೂ. 2ನೇ ಶತಮಾನದಿಂದ ಕ್ರಿ.ಶ. 4ನೇ ಶತಮಾನ), ಕನರ್ಾಟಕದ ಬಾದಾಮಿಯ ಗುಹಾಚಿತ್ರಗಳು, ಲೇಪಾಕ್ಷಿ, ಹಂಪಿ, ತಂಜಾವೂರು ಇತ್ಯಾದಿ ಪ್ರದೇಶಗಳಲ್ಲಿ ರಚಿತವಾದ ಭಿತ್ತಿಚಿತ್ರಗಳೆಲ್ಲವೂ ಧಾರ್ಮಿಕ ಶಾಸ್ತ್ರ/ಗ್ರಂಥ/ಪುರಾಣಗಳ ನಿರೂಪಣಾ ಚಿತ್ರಗಳು. ಯುರೋಪಿನ ರಾಷ್ಟ್ರಗಳಲ್ಲಿಯೂ ಚಿತ್ರಕಲೆ ಧರ್ಮಪ್ರಚಾರಕ ಸಾಧನವಾಗಿ/ ಮಾಧ್ಯಮವಾಗಿ ವ್ಯಾಪಕವಾಗಿ ಬಳಕೆಯಾಯಿತು. ಮುಖ್ಯವಾಗಿ ಇಟಲಿಯ ಸಿಸ್ಟೈನ್ ಛಾಪೆಲ್ನಲ್ಲಿ  ಮೈಕೆಲಾಂಜಲೋನಿಂದ ರಚಿತವಾದ ಅದ್ಭುತಚಿತ್ರಗಳನ್ನು ಉದಾಹರಿಸಬಹುದು (ಕ್ರಿ.ಶ. 15-16ನೇ ಶತಮಾನ). 
  ಮೈಕೆಲಾಂಜಲೋನಿಂದ ರಚಿತ, ಸಿಸ್ಟೈನ್ ಚಾಪೆಲ್ ನಲ್ಲಿರುವ ಭಿತ್ತಿಚಿತ್ರ

    ಯುರೋಪಿನ ರೆನೆಸಾನ್ಸ್ (ಪುನರುಜ್ಜೀವನ ಯುಗ) ನಂತರದ ಕ್ಲಾಸಿಸಿಂ, ನಿಯೋ ಕ್ಲಾಸಿಸಿಂ, ರೋಮ್ಯಾಂಟಿಸಿಸಂ ಚಿತ್ರಣ ಶೈಲಿಗಳ ಏಕತಾನತೆ, ಕ್ಲೀಷೆ ಮತ್ತು ನಿಯಮಬದ್ಧತೆಯನ್ನು ಕಟುವಾಗಿ ಟೀಕಿಸುವ ಆಧುನಿಕ ಅವಧಿ 19ನೇ ಶತಮಾನದ ಪೂರ್ವಾರ್ಧದ ಮೊದಲ ದಶಕಗಳಲ್ಲಿ ರೂಪುಗೊಂಡಿತು. ಈ ಅವಧಿಯಲ್ಲಿ ಉಂಟಾದ ಸಾಮಾಜಿಕ, ವೈಜ್ಞಾನಿಕ ಕ್ರಾಂತಿಗಳ ಜೊತೆಜೊತೆಗೆ ಚಿತ್ರಕಲಾಕ್ಷೇತ್ರದಲ್ಲೂ ಬದಲಾವಣೆಯ ಬಿರುಗಾಳಿ ಬೀಸಿತು.
ಸ್ಯೂರನ ( Suerat ) ಪಾಯಿಂಟಲಿಸಂ ಶೈಲಿಯ ಚಿತ್ರ

ಎಡ್ಗರ್ ದೆಗಾ ರಚಿಸಿರುವ 'ಬ್ಯಾಲೆ ನರ್ತಕಿಯರು' ಸರಣಿ ಚಿತ್ರ ( ಇಂಪ್ರೆಷನಿಸಂ)
ಕಲಾವಿದರು ಚಿತ್ರಮಾಧ್ಯಮದ ಮೂಲಕ ವೈಜ್ಞಾನಿಕ, ಮನೋವಿಶ್ಲೇಷಣಾತ್ಮಕ ನೆಲೆಯಲ್ಲಿ 'ಸತ್ಯ'ದ ಹುಡುಕಾಟಕ್ಕೆ ತೊಡಗಿದರು. ಈ ಮನಸ್ಥಿತಿಯ ಕಲಾವಿದನು ಜಗತ್ತನ್ನು ತನ್ನದೇ ವಿಶಿಷ್ಟ 'ದೃಷ್ಟಿ'ಯಿಂದ ನೋಡಿ, ಗ್ರಹಿಸಿದ ಒಳನೋಟವನ್ನು ಚಿತ್ರಮಾಧ್ಯಮದ ಮೂಲಕ ಅಭಿವ್ಯಕ್ತಿಸಿ ಒಟ್ಟಾರೆ ದೃಶ್ಯಗ್ರಹಿಕೆ ಮತ್ತು ದೃಶ್ಯಮಾಧ್ಯಮದ ಅಗಾಧ ಸಾಧ್ಯತೆಗಳನ್ನು ತೆರೆದಿಡುವ ಮಹತ್ವದ ಅವಧಿ ಇದಾಯಿತು. ರಿಯಲಿಸಂ, ಇಂಪ್ರೆಷನಿಸಂ, ಎಕ್ಸ್ಪ್ರೆಷನಿಸಂ, ಫಾವಿಸಂ, ಪಾಯಿಂಟಲಿಸಂ, ದಾದಾಯಿಸಂ, ಸರ್ರಿಯಲಿಸಂ, ಕ್ಯೂಬಿಸಂ, ಅಮೂರ್ತತೆ( Abstraction) ಇತ್ಯಾದಿ ಹತ್ತುಹಲವು ಪಂಥಗಳು ಚಾಲ್ತಿಗೆ ಬಂದವು. ಇವುಗಳಲ್ಲದೆ ಎರಡನೇ ಜಾಗತಿಕ ಮಹಾಯುದ್ಧದ ನಂತರದ ಕಾಲದಲ್ಲಿ ರೂಪುಗೊಂಡ ಆಧುನಿಕೋತ್ತರ ಕಲಾಪಂಥಗಳು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಭಾವ ಮೂಡಿಸಿದವು.
ಪ್ಯಾಬ್ಲೊ ಪಿಕಾಸೋನ 'ವೀಪಿಂಗ್ ವುಮನ್' ( ಅಮೂರ್ತ ಚಿತ್ರಣ)
ಎಡ್ವರ್ಡ್ ಮುಂಕ್ ನ ಚಿತ್ರ - 'ದ ಸ್ಕ್ರೀಮ್' (Expressionism)


   



















ಪಹಾಡಿ - ಗುಲೇರ್ ಶೈಲಿ


ಭಾರತೀಯ ಚಿತ್ರಕಲೆ ಮೂಲತಃ ಸಾಂಪ್ರದಾಯಿಕ ನೆಲೆಗಟ್ಟಿನ ಮೇಲೆ ರೂಪುಗೊಂಡಿತಾದರೂ ಕಾಲಕ್ಕನುಗುಣವಾಗಿ ತನ್ನ ಸ್ವರೂಪದಲ್ಲಿ ಅನಿವಾರ್ಯ ಬದಲಾವಣೆಗಳನ್ನೊಳಗೊಳ್ಳತ್ತ ಸಾಗಿಬಂದಿದೆ.
ಮೊಗಲ್ ಶೈಲಿಯ ಚಿತ್ರ







ವಿದೇಶೀಯರ ಅತಿಕ್ರಮಣ, ಆಡಳಿತದಿಂದಾಗಿ ಸಾಮಾಜಿಕ, ಸಾಂಸ್ಕೃತಿಕ ಜೀವನದ ಮೇಲೆ ಆದ ಕೊಡುಕೊಳ್ಳುವಿಕೆ, ಪ್ರಭಾವಗಳು  ಸಹಜವಾಗಿಯೇ ಚಿತ್ರಕಲಾ ಪರಿಕರ, ವಿಷಯ, ಶೈಲಿಗಳ ಮೇಲೂ ಆಯಿತು. ಪರ್ಷಿಯನ್, ಮೊಗಲ್ ಶೈಲಿ ಭಾರತೀಯ ಚಿತ್ರಕಲೆಯ ಮೇಲೆ ಗಾಢವಾದ ಪ್ರಭಾವ ಬೀರಿದವು. ಪಹಾಡಿ, ರಾಜಸ್ಥಾನಿ, ಗುಲೇರ್, ಕಾಂಗ್ರಾ, ಬಸೋಲಿ, ದಖನಿ ಚಿತ್ರಶೈಲಿಗಳಲ್ಲಿ ಈ ಪ್ರಭಾವ ಕಾಣಬಹುದು. ಭಾರತೀಯ ರಾಜ-ಮಹಾರಾಜರೂ ಕೂಡ ಇಂಥ ಸಾಂಸ್ಕೃತಿಕ ಸಂಕ್ರಮಣ ಅಥವಾ ಕೊಡುಕೊಳ್ಳುವಿಕೆಗೆ ಸಾಕಷ್ಟು ಪ್ರೋತ್ಸಾಹವಿತ್ತುದರಿಂದಾಗಿ ಹೊರಗಿನ ಪ್ರಭಾವಗಳನ್ನು ಅರಗಿಸಿಕೊಂಡು ಅವುಗಳನ್ನು 'ಭಾರತೀಯ'ಗೊಳಿಸಿಕೊಳ್ಳುವುದು ಇಲ್ಲಿನ ಕಲಾವಿದರಿಗೆ ಸಾಧ್ಯವಾಯಿತು.
ದಖನಿ ಶೈಲಿಯ ಚಿತ್ರ






   ಕ್ರಿ.ಶ. 1850 ರಿಂದ 1950ರವರೆಗಿನ ಅವಧಿಯಲ್ಲಿ ಭಾರತೀಯ ಚಿತ್ರಕಲಾಕ್ಷೇತ್ರ ಮತ್ತೊಂದು ಮಹತ್ತರ ಬದಲಾವಣೆ/ ಪ್ರಭಾವವನ್ನು ಕಂಡಿತು. ಬ್ರಿಟಿಷರಿಂದ ಮದ್ರಾಸ್, ಕಲ್ಕತ್ತಾ, ಮುಂಬೈ ಮತ್ತು ಮೈಸೂರಿನಲ್ಲಿ ಪ್ರಾರಂಭಗೊಂಡ ಕೈಗಾರಿಕಾ ತರಬೇತಿ ಶಾಲೆಗಳ ಮೂಲಕ ಇಲ್ಲಿನ ಕಲಾಸಂಸ್ಕೃತಿಯನ್ನು ಪಾಶ್ಚಾತ್ಯೀಕರಣಗೊಳಿಸುವ ಪ್ರಯತ್ನ ನಡೆಯಿತು. ಭಾರತೀಯ ರೇಖಾಪ್ರಧಾನ ಚಿತ್ರಗಳನ್ನು ಅನರ್ಥ ರೇಖಾವಿಲಾಸ ಎಂದು ಜರೆದ ಬ್ರಿಟಿಷ್ ಆಡಳಿತ ಗ್ರೀಕೋರೋಮನ್ ಶೈಲಿಯ 'ರಿಯಲಿಸ್ಟಿಕ್' ಅಥವಾ 'ವಿಕ್ಟೋರಿಯನ್ ಅಕಾಡೆಮಿಕ್' ಎನ್ನಬಹುದಾದ ಚಿತ್ರಣವನ್ನು ಈ ಶಾಲೆಗಳ ಮುಖಾಂತರ ಭಾರತೀಯರಿಗೆ ಪರಿಚಯಿಸಿ, ಇಲ್ಲಿನ ಕುಶಲಕಲಾವಿದರನ್ನು 'ಉತ್ತಮ'ಗೊಳಿಸುವ ಉದ್ದೇಶ ಹೊಂದಿತ್ತು! ಅಲ್ಲದೆ ಇಲ್ಲಿನ ಕುಶಲಕರ್ಮಿಗಳನ್ನು ತಮಗೆ ಬೇಕಾದಂತೆ ಪಳಗಿಸಿ, ಕರಕುಶಲ ವಸ್ತುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟದ ಸರಕನ್ನಾಗಿಸುವ ವ್ಯಾಪಾರೀ ಉದ್ದೇಶವೂ ಇದರ ಹಿಂದೆ ಇತ್ತು. ಮೊದಲಿಗೆ ಕೇವಲ ಕೈಗಾರಿಕಾ ತರಬೇತಿ ಶಾಲೆಗಳಾಗಿದ್ದ ಇವು, ನಂತರದ ಕಾಲದಲ್ಲಿ ಲಲಿತಕಲೆಗಳ ಪಠ್ಯವನ್ನೂ ಅಳವಡಿಸಿಕೊಂಡವು.  ಅಲ್ಲದೆ, ಈ ಕಲಾಶಾಲೆಗಳಿಂದಾಗಿ, ಕೇವಲ ಸಾಂಪ್ರದಾಯಿಕ ಅಥವಾ ನಿರ್ದಿಷ್ಟ ಮನೆತನಗಳಿಗೆ ಮಾತ್ರ ಸೀಮಿತವಾಗಿದ್ದ ಚಿತ್ರಕಲಾಭ್ಯಾಸ ಎಲ್ಲಾ ವರ್ಗದ ಕಲಾಸಕ್ತರಿಗೂ ತೆರೆದುಕೊಂಡದ್ದು ಚಿತ್ರಕಲಾಕ್ಷೇತ್ರ ಕಂಡ ಮಹತ್ತರ ಬದಲಾವಣೆ.
  ಅಬನೀಂದ್ರನಾಥ ಟಾಗೋರರ  'ಭಾರತ ಮಾತಾ'

  






ಭಾರತೀಯ ಕಲೆಯನ್ನು ಪಾಶ್ಚಾತ್ಯೀಕರಿಸುವ ಹುನ್ನಾರದ ಸಾಂಸ್ಕೃತಿಕ ದಬ್ಬಾಳಿಕೆಯನ್ನು ತೀವ್ರವಾಗಿ ವಿರೋಧಿಸಿ, ಬಂಡಾಯವೆದ್ದದ್ದು ಕಲ್ಕತ್ತಾದ ಬೆಂಗಾಲ್ ಕಲಾಶಾಲೆ. ಅಬನೀಂದ್ರನಾಥ ಟ್ಯಾಗೋರರ ನೇತೃತ್ವದಲ್ಲಿ ಅವರ ಶಿಷ್ಯಬಳಗ ಭಾರತೀಯ ಕಲೆಯನ್ನು 'ಪುನರುಜ್ಜೀವನ'ಗೊಳಿಸುವ ಪ್ರಯತ್ನವನ್ನು ಬಂಡಾಯದೋಪಾದಿಯಲ್ಲಿ ಮಾಡಿತು. ಇದು ಸ್ವಾತಂತ್ರ್ಯಸಂಗ್ರಾಮಕ್ಕೆ ಪೂರಕವಾದ ಚಳುವಳಿಯಾಗಿಯೂ ರೂಪಪಡೆಯಿತು.






'ಗ್ಯಾಲಕ್ಸಿ ಆಫ್ ಮ್ಯುಸಿಷಿಯನ್ಸ್' - ರವಿವರ್ಮ
ದಕ್ಷಿಣದಲ್ಲಿ ರವಿವರ್ಮ ಪಾಶ್ಚಾತ್ಯರ ತೈಲವರ್ಣವನ್ನು ಅಭ್ಯಸಿಸಿ, 'ರಿಯಲಿಸ್ಟಿಕ್' ಶೈಲಿಯಲ್ಲಿ ಭಾರತೀಯ ಪುರಾಣಕಥನಗಳನ್ನು ಚಿತ್ರಿಸುವುದರ ಮೂಲಕ ಭಾರತೀಯತೆಯ ಸಮಗ್ರತೆಯನ್ನು ವಿಶಿಷ್ಟರೀತಿಯಲ್ಲಿ ಪ್ರತಿಪಾದಿಸಿದರು. ಪಾಶ್ಚಾತ್ಯ ಕಲಾಶಿಕ್ಷಣ, ರವಿವರ್ಮರ ಪ್ರಭಾವ, ಸ್ವದೇಶೀ ಚಳುವಳಿಯ ಉತ್ಕರ್ಷ - ಈ ಎಲ್ಲದರ ಪರಿಣಾಮವಾಗಿ ಭಾರತೀಯ ಚಿತ್ರಕಲೆ ತನ್ನ ಸ್ವರೂಪದಲ್ಲಿ ತೀವ್ರತರ ಬದಲಾವಣೆಗಳನ್ನು ಕಂಡಿತು.

ಸ್ವಾತಂತ್ರ್ಯೋತ್ತರ ಭಾರತದ ಕಲಾವಿದರು ಈ ಎಲ್ಲಾ ಪ್ರಭಾವಗಳನ್ನೂ ಮೀರಿ ಮತ್ತೆ ತಮ್ಮತನದ, ಪ್ರಾದೇಶಿಕ ಸೊಗಡಿನ, ಮಣ್ಣಿನ ವಾಸನೆಯ ಅಂತಃಸತ್ವವನ್ನು ತಮ್ಮ ಚಿತ್ರಗಳ ಮೂಲಕ ಹುಡುಕತೊಡಗಿದರು. ಬಾಂಬೆ, ಮದ್ರಾಸ್, ಕಲ್ಕತ್ತಾಗಳಲ್ಲಿ ಸಮಾನಮನಸ್ಕ ಕಲಾವಿದರು ಜೊತೆಗೂಡಿ ತಮ್ಮದೇ ಕಲಾಸಂಘಟನೆಗಳ ಮೂಲಕ ಮತ್ತೆ 'ತಮ್ಮತನದ' ಹುಡುಕಾಟದಲ್ಲಿ ತೊಡಗಿದರು. ಕರ್ನಾಟಕದಲ್ಲಿಯೂ ಇಂತಹ ಸಂಘಟನೆಗಳು ನಡೆದವು.
ಕೆ.ಟಿ. ಶಿವಪ್ರಸಾದ್ ರವರ ಒಂದು ಆಯಿಲ್ ಪೇಂಟಿಂಗ್

    ಇಂದು ಯಾವ ಕ್ಷೇತ್ರವೂ ಜಾಗತೀಕರಣದ ಪ್ರಭಾವದಿಂದ ಹೊರತಾಗಿಲ್ಲ. ಕಲಾಕ್ಷೇತ್ರ ಕೇವಲ ಚಿತ್ರ, ಶಿಲ್ಪ, ಮುದ್ರಣಕಲೆ ಇತ್ಯಾದಿ 'ಅಕಾಡೆಮಿಕ್' ಮಾಧ್ಯಮಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಇನ್ಸ್ಟಲೇಷನ್, ವಿಡಿಯೋ ಆರ್ಟ್, ಪರ್ಫಾರ್ಮೆನ್ಸ್, ಸೈಟ್ ಸ್ಪೆಸಿಫಿಕ್ ಆರ್ಟ್ - ಹೀಗೆ ಹಲವಾರು ಹೊಸ ಮಾಧ್ಯಮಗಳ ಅಗಾಧ ಸಾಧ್ಯತೆಗಳು ತೆರೆದುಕೊಂಡಿವೆ. ಸಪಾಟು ಮೇಲ್ಮೈಮೇಲೆ ರಚಿಸಲಾಗುವ ಟು ಡೈಮೆನ್ಷನಲ್ (Two Dimensional ) ಚಿತ್ರಮಾಧ್ಯಮ ಇಂದು ಆಧುನಿಕೋತ್ತರ ಮನಸ್ಥಿತಿಯ ಭರಾಟೆಯ ನಡುವೆ 'ಸಾಂಪ್ರದಾಯಿಕ' ಎನಿಸಿಬಿಡುವ ಹಂತದಲ್ಲಿದೆ.
ಅರ್ಥ್ ಆರ್ಟ್ - 'ಸ್ಪೈರಲ್ ಜೆಟ್ಟಿ'


ಶೀಲಾ ಗೌಡ ಅವರ ಇನ್ಸ್ಟಲೇಷನ್
















       
















(ಕೊಡಗಿನ ಒಂದು ಸ್ಮರಣ ಸಂಚಿಕೆಗಾಗಿ ಬರೆದ ಲೇಖನ)

Friday 28 October 2011

ಅಂಗೈಯಗಲ ಗೋರಂಟಿ

   

   ನೋಡನೋಡುತ್ತ ಅಷ್ಟೆತ್ತರ ಬೆಳೆದು ತೊನೆಯುವ ಗೋರಂಟಿ ಗಿಡ. ಈಷ್ಟುದ್ದ ಕೈಚಾಚಿಯೇ ಪಡೆಯಬೇಕು ಒಂದೊಂದೆ ಎಲೆಗೆಳನ್ನ. ಅದರ ಧಿಮಾಕು ನಮಗೆ ತಿಳಿಯೋದಾದ್ರೂ ಹೇಗೆ ಮತ್ತೆ?
ಎಲ್ಲಿ ನೋವಾಗುತ್ತೋ ಅಂತ ಒಂದೊಂದೆ ಎಲೆಗಳನ್ನ ನಿಧಾನ ಬಿಡಿಸಿಕೊಳ್ಳಬೇಕು ಅದರ ತೊಟ್ಟಿಂದ. ಬೊಗಸೆ ತಂಬ ಪುಟ್ಟ ಪುಟ್ಟ, ಚೂಪು ಮೂತಿಯ, ಚೆಂದದ ಎಲೆಗಳಿಗೊಮ್ಮೆ ಕಣ್ಣು ತಾಗಿಸಿ, ಅಪರೂಪಕ್ಕೊಮ್ಮೆ ಅಜ್ಜಿಯನ್ನು ನೆನಪಿಸುವ ಅರೆಯುವ ಕಲ್ಲಮೇಲೆ ಇವುಗಳನ್ನಿಟ್ಟು, ಗರಾ ಗರಾ ರಾಗ ತೆಗೆಸಬೇಕು.. ಅಜ್ಜಿಗೆ ತನ್ನ ಯೌವನದ ಗೋರಂಟಿ ಕೈ ನೆನಪಾದಾಗ ಯಾವುದೋ ಖುಶಿಯಿಂದ ಗುನುಗಿಕೊಂಡ ಹಾಗೆ.. ಆಗಲೇ ಘಮ್ಮ್...ಅನ್ನೊ ಗಾಢ ಹಸಿರು ಬಟ್ಟಲು ಸೇರೋದು. ಮಾಟಗಾತಿ ಥರ ಈ ಹಸಿರಿನ ಮೇಲೆ ನಿಧಾನಕ್ಕೆ ಮಳ್ಳ ಮಣ್ಣಿನ ಬಣ್ಣವೊಂದು ಹಾಸಿಕೊಳ್ಳುತ್ತೆ...ನಾವೂ ಕೂಡ ಇದನ್ನು ಕಂಡೇ ಇರದ ಹಾಗಿರಬೇಕು!

    ಇನ್ನು, ಬಸುರಿ ಥರ ನಾಚಿಕೊಂಡು, ಒಳಗೊಳಗೆ ಸಂಭ್ರಮಪಡುವ ಅಂಗೈಯನ್ನೊಮ್ಮೆ ಕಣ್ಣು ಕಿರಿದು ಮಾಡಿ, ಸ್ವಲ್ಪ ಹುಬ್ಬು ಗಂಟಿಕ್ಕಿ ದಿಟ್ಟಿಸಬೇಕು - ಉಕ್ಕಿಬರುವ ಉತ್ಸಾಹ ಹೊರಗೆ ಸುರಿದುಹೋಗದಂತೆ ತೆಳುವಾದ ನಗುವಿನ ಮುಚ್ಚಳ ಹಾಕಿ ಒಮ್ಮೆ ಅಂಗೈ ನೋಡಬೇಕು. ಯಾವ ಚಿತ್ರ, ಎಷ್ಟುದ್ದ ಗೆರೆ, ಎಂಥ ಚುಕ್ಕಿ, ಎಲ್ಲಿ, ಎಷ್ಟು, ಹೇಗೆ ಅಂತ ಮನಸಲ್ಲೇ ನಕಾಶೆ ಮಾಡಿ,..ಚಿತ್ರ ಹಚ್ಚಬೇಕು.  ಗೋರಂಟಿ ಅಂಟಿದ ಕೈ ಒಮ್ಮೆಗೆ ತಣ್ಣಗಾಗಿ, ನಿಧಾನ ಬಿಸಿಯಾಗುತ್ತ ಬಣ್ಣ ಬಸಿದುಕೊಳ್ಳುವ ಖುಶಿಗೆ ತಲೆದೂಗಬೇಕು. ಇನ್ನು ಈ ಚಿತ್ರದ ಕೈಗಿಂತ ಇಡೀ ಜಗತ್ತಲ್ಲಿ ಮತ್ತೇನೂ  ಮುಖ್ಯವಲ್ಲವೇ ಅಲ್ಲ ಅನ್ನೋಹಾಗೆ ಜೋಪಾನಮಾಡಲೇಬೇಕು. ಮದರಂಗಿಯ ಮದವೆಲ್ಲ ಅಂಗೈಗೆ ಇಳಿದು, ಉಳಿದು ನಿಲ್ಲುವ ತನಕ ಮೈಯೆಲ್ಲ ಕಣ್ಣಾಗಿರಲೇಬೇಕು. 


    ಆಹ್! ಬಂದೇ ಬರಬೇಕು ಆ ಘಳಿಗೆ ಕೂಡ! ಒಣ ಚಿತ್ರ ತಾನಾಗಿ ಉಸ್ಸಪ್ಪ,.. ಸಾಕು ಅನ್ನುವ ಕಾಲ, ಕೈಯಿಂದ ಬಿಡಿಸಿ ತೊಳೆದುಹೋಗುವ ಕಾಲ. ಹಾ,..ಈಗ ಇದು ಶತಮಾನಗಳಿಂದ ಇಲ್ಲೇ ಅಡಗಿ ಕುಳಿತು, ಈಗಷ್ಟೆ ಮೈಮುರಿದು ಎದ್ದುಕುಳಿತಂಥ ಬಣ್ಣ! ಅಂಟಿದ್ದಲ್ಲ,..ಇಲ್ಲೇ, ಈಗಲೇ ಹುಟ್ಟಿದ್ದು ಅನ್ನುವ ಹಾಗೆ! ಮುಖದ ಇಷ್ಟಗಲ ನಗುವಿಗೂ ಗೋರಂಟಿ ಕೆಂಪು! ಜಗತ್ತಿನ ಕಾವ್ಯ, ಸಂಗೀತ, ಚಿತ್ರ, ಕಥೆಗಳೆಲ್ಲ ಆ ಕ್ಷಣವೇ ಜೀವಂತ!!

    ಈ ಘಮ್ಮನೆ ಗೋರಂಟಿ ಕೈಯಗಲದಲ್ಲಿ ದೃಶ್ಯಕಲೆಯನ್ನು ಕುರಿತು, ಮುಖ್ಯವಾಗಿ ಚಿತ್ರಕಲೆ ಮತ್ತು ದೃಶ್ಯಗ್ರಹಿಕೆಯ ಪರಿಭಾಷೆಯನ್ನು ಕುರಿತು ನುಡಿ-ನೋಟಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ, ಚರ್ಚಿಸುವ, ಸಂವಾದಿಸುವ ಆಸೆ ನನ್ನದು. ಬನ್ನಿ, ಅಂಗೈಯಗಲದ ಗೋರಂಟಿಯ ಬಣ್ಣ, ಬೆರಗನ್ನು ಕಾಣಿ. ನಿಮ್ಮ ಟೀಕೆ, ವಿಮರ್ಶೆ, ಸಲಹೆ, ಸಹನೆಯಿಂದ ಈ ಅಂಗೈಮೇಲೆ ಹೊಸ ಚಿತ್ರಗಳ ಸಾಧ್ಯತೆಯನ್ನು ಆಗುಮಾಡಿ.