Monday 9 June 2014

"ಈ ಜನುಮವೆ, ಆಹಾ ದೊರಕಿದೆ ರುಚಿ ಸವಿಯಲು.."!!


  


   ಪಾಪ್ಯುಲರ್ ಸಿನಿಮಾ ರೆಸಿಪಿ ತಮಗೆ ಚೆನ್ನಾಗೇ ಒಲಿದಿದೆ ಅಂತ ಪ್ರೂವ್ ಮಾಡಿದ್ದಾರೆ ಪ್ರಕಾಶ್ ರೈ!
ಅವರ 'ಒಗ್ಗರಣೆ'ಯ ಘಮ ಸದ್ಯಕ್ಕಂತೂ ನನ್ನ ಬಿಡುವಹಾಗೆ ಕಾಣ್ತಿಲ್ಲ!
ಎಲ್ಲೂ ಅತೀ ಬುದ್ಧಿವಂತಿಕೆ ತುರುಕದೆ, ಸಹಜ-ಸರಳ ಸಂತೋಷ ಹುಡುಕಿಕೊಡುವ ಹಾಗೆ, ಜೀವನದ ರುಚಿಯನ್ನೆಲ್ಲ ಸವಿದು ಕಂಡಿರುವ ಎಕ್ಸ್ ಪರ್ಟ್ ಥರ, ನಮ್ಮ ಮುಂದೆ ಅವರ ಪಾಕಪಾತ್ರೆ ಹಿಡಿದು, ಅವರದ್ದೇ ಸ್ಟೈಲಲ್ಲಿ ಜಾಣ ನಗೆ ನಗುತ್ತ, 'ಹಾ,..ಹೇಗಿದೆ?' ಅನ್ನುತ್ತ ಕಣ್ಣು ಮಿಟುಕಿಸಿದ ಹಾಗಿದೆ!!





   ಆತ ಆರ್ಕಿಯಾಲಜಿಸ್ಟ್, ಅವಳು ಡಬ್ಬಿಂಗ್ ಆರ್ಟಿಸ್ಟ್.. ಬದುಕೆಂಬ ಪ್ರೆಷರ್ ಕುಕರಲ್ಲಿ ಹದವಾಗಿ ಬೆಂದಿರುವ ಎರಡು ಜೀವಗಳು! ಆ ಹದಕ್ಕೆ ಬಾಕಿ ಇರೋದಂದ್ರೆ 'ಒಗ್ಗರಣೆ' ಮಾತ್ರ! ಸಂಗಾತಿ ಪಡೆಯಲು ವಯಸ್ಸು ಇನ್ನೇನು ತಮ್ಮ ಕೈಮೀರಿಹೋಗಿಬಿಡಬಹುದೆಂಬ ಅಳುಕು. ಆ ಅಳುಕು, ಒತ್ತಡವನ್ನೂ ಮೀರಿ, ಬದುಕಿನ ಸವಿರುಚಿ ಹಿಡಿಯುವ ನಿರಾಳತೆ..!
ಆ ರುಚಿಯ ಬೆನ್ನುಬಿದ್ದ ಈ ಇಬ್ಬರನ್ನೂ ಮಾತಿಗೆ ತೊಡಗಿಸುವ 'ಕುಟ್ಟಿದೋಸೆ'!

   ಫೋನ್ ಮೂಲಕ, ಭಯಂಕರ ಜಗಳದೊಂದಿಗೆ ಶುರುವಾಗುವ ಅವರ ಸಂಭಾಷಣೆ, ಕೊನೆಗೆ ಕೇಕ್ ರೆಸಿಪಿ ಶೇರ್ ಮಾಡಿಕೊಳ್ಳುವ ಹೊತ್ತಿಗೆ, 'ಮಹಾಯುದ್ಧ ಮುಕ್ತಾಯವಾದದ್ದು ಪ್ರೇಮದೊಂದಿಗೆ' ಅನ್ನುವ, ಚರಿತ್ರೆಯ ಪುಟದ ಒಂದು ಕೊಟೇಶನ್ ಜೊತೆಗೆ ಇವರ ಪ್ರೇಮದ ಪುಟಗಳು ತೆರೆದುಕೊಳ್ಳುತ್ತವೆ..
ಮುಂದಿನದ್ದು ಒಂದು ಇಂಟರೆಸ್ಟಿಂಗ್ ಡ್ರಾಮ !

   ಕಾಡುಜನರ ನಾಟಿ ವೈದ್ಯನ 'ನಾಪತ್ತೆ ಪ್ರಕರಣ' ಮಾತ್ರ ನೋಡುಗನಲ್ಲಿ ಒಂದು ಕುತೂಹಲ ಹುಟ್ಟಿಸಲಿಕ್ಕಾಗಿಯಷ್ಟೆ ಸೇರಿಸಿದಹಾಗಿದೆ! ಆ ಸ್ಟೋರಿ ಲೈನ್ ಮತ್ತೆ ಮುಂದುವರಿಯುವುದೇ ಇಲ್ಲ.  ಆದರೂ, ತುಂಬಾ ಸೀರಿಯಸ್ ಅನಿಸಿಬಿಡಬಹುದಾದ ಸನ್ನಿವೇಶಗಳನ್ನು, ಚಾಟ್ ಸವಿದಷ್ಟೆ ಲೈವ್ಲಿಯಾಗಿಡುವ ಪಾತ್ರಗಳು.., ಈ ಬೆಂದು,ಹದಗೊಂಡ ಜೋಡಿಯ, ಬಾಯಿ ಸುಡುವಂಥ ತಳಮಳದ ಜೊತೆಜೊತೆಗೆ  ಐಸ್ ಕ್ರೀಂ ಥರದ ಒಂದು ಕೂಲ್ ಟೀನೇಜ್ ಪ್ರಣಯ.. ಮಸಾಲೆ, ಸಿಹಿ, ಒಗರು, ಸಣ್ಣ ಕಹಿ, ಹದವಾಗಿ ಬೆರೆತ ಹುಳಿ,.. ಒಟ್ಟಾರೆ, ಪ್ರತೀ ಸನ್ನಿವೇಶವನ್ನೂ ಚಪ್ಪರಿಸುತ್ತಲೇ ಇಡೀ ಸಿನಿಮಾ ಆಸ್ವಾದಿಸಿಬಿಡುವ ಪ್ರೇಕ್ಷಕನಲ್ಲಿ ಕೊನೆಗೆ ಉಳಿಯುವುದು - ಒಗ್ಗರಣೆಯ ಬೆಚ್ಚನೆಯ ಹಿತ ಮತ್ತು ಘಮಲು! ಆಹಾ ಎನಿಸುವ ಜಯಂತ್ ಕಾಯ್ಕಿಣಿಯವರ ಲಿರಿಕ್ಸ್, ಇಳಯರಾಜರ ಸಂಗೀತ ಒಗ್ಗರಣೆಯ ರುಚಿಯನ್ನು  ಮತ್ತಷ್ಟು ಹೆಚ್ಚಿಸಿವೆ !

  
   'ಒಗ್ಗರಣೆ' ಮಲಯಾಳದ 'ಸಾಲ್ಟ್ ಎನ್ ಪೆಪ್ಪರ್' ಸಿನಿಮಾದಿಂದ ಪ್ರೇರಿತವಂತೆ. ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಒಟ್ಟಿಗೆ ನಿರ್ಮಾಣಗೊಂಡಿದೆ. ಬಹುಪಾಲು ಶೂಟಿಂಗ್ ಮೈಸೂರಿನಲ್ಲೇ ನಡೆದಿರುವುದು, ಅದರಲ್ಲೂ ಯೂನಿವರ್ಸಿಟಿ ಕ್ಯಾಂಪಸ್ಸಲ್ಲಿ ಅನ್ನೋದು ವಿಶೇಷ. ಇದರಿಂದ ನಂಗಂತೂ ಒಗ್ಗರಣೆ ನಮ್ಮನೆಯದ್ದೇ ಅನಿಸಿದೆ! ಅಂತೂ ಕನ್ನಡಕ್ಕೊಬ್ಬ expert ಬಾಣಸಿಗ ಸಿಕ್ಕ ಖುಶಿ! ನಮಗೆ ಮತ್ತೊಮ್ಮೆ ರುಚಿ ಕಟ್ಟಿಕೊಟ್ಟ ಪ್ರಕಾಶ್ ರೈ ಮತ್ತು ತಂಡಕ್ಕೆ ಅಭಿನಂದನೆಗಳು !!

   "ಈ ಜನುಮವೆ, ಆಹಾ ದೊರಕಿದೆ ರುಚಿ ಸವಿಯಲು..."

( ಈ ಮುಂದಿನ ಲಿಂಕ್ಸ್ ಕ್ಲಿಕ್ ಮಾಡಿ : )

"!http://youtu.be/_TIng5fHrBc

http://youtu.be/LrqY7c1U6Hw

Monday 24 March 2014

ಏಕಾಂತದ ತಲ್ಲಣದಲ್ಲಿ ತೇಲುವ ಹಾಯಿದೋಣಿ - 'ಕೋಯಾದ್'




   ಭೂಮಿ- ಆಕಾಶ- ಮನಸ್ಸು -ಎಲ್ಲವನ್ನೂ ಆವರಿಸಿಕೊಂಡಂತಿರುವ ನೀರು...ನಿರಂತರ ಹರಿವಿನ ನದಿಯ ಒಡಲಿನಿಂದಲೇ ಹುಟ್ಟುಪಡೆದಂತೆ ಅಲೆಗಳನ್ನು ತಬ್ಬಿ ತೊಡರುವ ಪುಟ್ಟ ಹಾಯಿದೋಣಿ... ಆ ದೋಣಿಯ ಮಗನಂತಿರುವ ಆತ..
ತನ್ನಪ್ಪನಿಂದ ಬಳುವಳಿಯಾಗಿ ಬಂದ ಆಸ್ತಿಯೆಂದರೆ ಈ ದೋಣಿಯೊಂದೆ. ಬಾಲ್ಯದಲ್ಲೆ ಅಮ್ಮನನ್ನು ಕಳೆದುಕೊಂಡವನಿಗೆ ಈ ನದಿಯ ಅಗಾಧತೆ ಮತ್ತು ದೋಣಿಯ ಮೈಸೆಳವು ಅಮ್ಮನ ಅಪ್ಪುಗೆಯಷ್ಟೇ ಆಪ್ತ.. ಇದು ಅಸ್ಸಾಮಿನ 'ಮಿಶಿಂಗ್' ಎಂಬ ಬುಡಕಟ್ಟು ಭಾಷೆಯ ಸಿನಿಮಾ  'ಕೋಯಾದ್' (ನಿರ್ದೇಶಕಿ : ಮಂಜು ಬೋರಾಹ್). ಮೊದಲು ಕೆಲಹೊತ್ತು ತಡವರಿಸುವ ನಿರೂಪಣೆ ನಿಧಾನವಾಗಿ ನದಿಯ ಹರಿವಿನೊಂದಿಗೆ ನಿಮ್ಮನ್ನೂ ಸೆಳೆದುಕೊಳ್ಳುತ್ತದೆ.

   ಮತ್ತೊಂದು ಮದುವೆಯ ಆತುರದಲ್ಲಿರುವ ಗಂಡನಿಂದ ದೂರಾಗಿ, ಮಗನೊಂದಿಗೆ ತನ್ನ ತವರಿಗೆ ಮರಳುವ ಅವಳು, ತನ್ನಷ್ಟಕ್ಕೆ ತಾನಿರಲು ಬಿಡದ ಜನರ ಕೊಳಕು ದಾಹಕ್ಕೆ ಬಲಿಯಾಗಿ ನದೀಪಾಲಾಗುತ್ತಾಳೆ. ಅವಳ ಒಬ್ಬನೇ ಮಗ ಪೌಕಾಮ್ ತನ್ನ ಮಲತಾಯಿಯ ನಿರ್ಲಕ್ಷ್ಯದ ನಡುವೆಯೇ ಮನಸುಕೊಟ್ಟು ಕಲಿತದ್ದೆಂದರೆ -  ನದಿಯಲ್ಲಿ ತೇಲಿಬರುವ ಕಟ್ಟಿಗೆಗಳನ್ನು ಸಂಗ್ರಹಿಸಿ ಮಾರಿ ಬದುಕುವುದು. ಅಪ್ಪನಿಂದ ಪಡೆದದ್ದೂ ಆ ದೋಣಿಯೊಂದನ್ನೆ. ಅಂತೆಯೆ ಅದೇ ಅವನ ಸರ್ವಸ್ವ.



   ಬಾಲ್ಯದಿಂದಲೇ ಮನುಷ್ಯ ಸಂಬಂಧಗಳ ಜಟಿಲತೆ, ಕುಟಿಲತೆಗಳ ಕಹಿಯನ್ನು ಕಂಡವನು ಅವನು. ಬಹುಷಃ ಅವನ ಪಾಲಿಗೆ ಒದಗಿಬಂದ ಒಂದೇ ನೆಮ್ಮದಿಯೆಂದರೆ, ಅವನ ಹೆಂಡತಿಯ ಪ್ರೀತಿ. ದುಡಿಮೆಯೊಂದನ್ನೆ ಗುರಿಯಾಗಿಸಿಕೊಂಡ ಪೌಕಾಮ್ ಗೆ ತನ್ನ ದೊಡ್ಡ ಮಗನನ್ನು ಡಾಕ್ಟರ್ ಮಾಡುವಾಸೆ. ಅದಕ್ಕಾಗಿ ಗಾಳಿ, ಮಳೆ, ಹಗಲು-ರಾತ್ರಿ ಎನ್ನದೆ ನದಿಯೊಡಲಲ್ಲಿ ತನ್ನ ದೋಣಿಯ ಜೊತೆ ತೇಲುತ್ತಾನೆ.. ಅವನೆಡೆಗೆ ತೇಲಿಬರುವ ಮರದ ದಿಮ್ಮಿಗಳೇ ಅವನ ಪಾಲಿನ ಖಜಾನೆ.

   ಅವನ ಮೈಮನಸ್ಸೆಲ್ಲವೂ ನದಿಯ ಅಗಾಧ ಹರಿವಿನಂತೆ ಮೌನ ಮತ್ತು ಗಂಭೀರ. ಇಡೀ ಚಿತ್ರದ ಮುಕ್ಕಾಲು ಪಾಲು ಇಂಥ ಗಂಭೀರ ಹರಿವಿನ ಜೊತೆಗೇ ಸಾಗುತ್ತದೆ. ಅವನಿಗೆ 'ಮಾತು' ಬರುವುದು ಅವನ ಆಳದ ಗಾಯಗಳು ಕಲಕಿ, ರಾಡಿಯಾದಾಗ ಮಾತ್ರ. ತಾನು ಅತಿಯಾಗಿ ನೆಚ್ಚಿದ ನಂಟಿನಿಂದಲೂ ನೆಮ್ಮದಿ ದೂರವೆನಿಸಿದಾಗ ಪೌಕಾಮ್ ಮಾತಾಡತೊಡಗುತ್ತಾನೆ. ಅದೂ ಚೀತ್ಕಾರ, ರೋದನೆಯ ದನಿಯಲ್ಲಿ ಹುಟ್ಟಿದ ಮಾತುಗಳು..



   ತಾನೇ ಒಂದು ನದಿಯಂತೆ ನಿರಂತರ ಹರಿಯುತ್ತ ಮುಕ್ಕಾಲು ಜೀವನ ಸವೆಸಿರುವ ಇವನು, ತನ್ನ ಕೊನೆಗಾಲದಲ್ಲಿ ನಿಮಿಷಮಾತ್ರ ಜೋರಾಗಿ ಉರಿದು ಆರಿಹೋಗುವ ಎಣ್ಣೆಬತ್ತಿದ ದೀಪದಂತೆ ಕಾಣುತ್ತಾನೆ. ಇಡೀ ಚಿತ್ರದ ತುಂಬ ಹರಡಿಕೊಂಡಿರುವ ಮಬ್ಬುಗತ್ತಲಿನಂಥ ಮೌನ ಕೊನೆಗೆ ಇವನ ಆರ್ತತೆಯ ಏಕಾಂತದಲ್ಲಿ ಕಪ್ಪಗೆ ಹೆಪ್ಪುಗಟ್ಟುತ್ತದೆ.. ನೋಡುಗನೊಳಗೆ ಆ ಆಕ್ರಂದದ ಅಲೆಗಳು ಹರಡಿಕೊಳ್ಳುತ್ತವೆ...

   ಮನುಷ್ಯ ಸಂಬಂಧಗಳ ಸಂಕೀರ್ಣತೆಯನ್ನು ಮಾರಕ ಯಾತನೆಯಂಥ ಮೌನದ ಹೊದಿಕೆಯಲ್ಲೇ ಅರ್ಥಮಾಡಿಸುತ್ತದೆ ಈ ಚಿತ್ರ. ಇಡೀ ಚಿತ್ರದ 'ಮೂಡ್' ಕಟ್ಟಿಕೊಡುವಲ್ಲಿ ಶ್ರಮಿಸಿರುವುದು ಇಲ್ಲಿನ ಸಿನಿಮಾಟೋಗ್ರಫಿ ಮತ್ತು ಹಿನ್ನೆಲೆ ಸಂಗೀತ. ಪೌಕಾಮ್ ನ ಒಳಹೊರಗನ್ನು ಅತ್ಯಂತ ಸಮರ್ಥವಾಗಿ ಚಿತ್ರಸಲಾಗಿದೆ. ಆದರೆ, ಕೊನೆಗೂ ನನ್ನಲ್ಲಿ ಉಳಿದ ಪ್ರಶ್ನೆಗಳು ಇವು : ಸಂಬಂಧಗಳ ಸ್ವಾರ್ಥ, ಜಾಳುತನದಿಂದ ಬೇಸತ್ತು ಬದುಕಿನ ಬಗೆಗೆ ಗಾಢ ನಿರಾಸೆ ತಳೆಯುವ ಪೌಕಾಮ್ ಗೆ ತನ್ನ ಹೆಂಡತಿಯ ಅಗಾಧ ಪ್ರೀತಿ ಯಾಕೆ ಆಸರೆಯೆನಿಸಲಿಲ್ಲ? ತನ್ನ ಗಂಡನನ್ನು ತನಗಿಂತಲೂ ಹೆಚ್ಚು ನೆಚ್ಚಿಕೊಂಡವಳ ಪ್ರೀತಿ, ಕಾಳಜಿ ಯಾಕೆ ಅವನಿಗೆ ಬದುಕಿನ ಏಕೈಕ ಸೌಂದರ್ಯದಂತೆ ಭಾಸವಾಗಲಿಲ್ಲ? ಹೆಂಡತಿಯ ಅಸ್ತಿತ್ವ ಕೇವಲ ಭೌತಿಕ ನೆಲೆಯದ್ದಾಗಿ ಮಾತ್ರ ಉಳಿದುಬಿಟ್ಟಿದ್ದು ಯಾಕೆ? ...

   ಇದು 'ಭಾರತೀಯ ರಿವಾಜು'ಗಳನ್ನು ಹೊದ್ದುಕೊಂಡ ಗಂಡಸಿನ ಮನಸ್ಥಿತಿಯಂತೆ ಕಾಣುತ್ತದೆ. ತನ್ನ ತಾಯಿಯ ದುರದೃಷ್ಟಕರ ಹಣೆಬರಹ ಕಂಡಿದ್ದವನಿಗೆ ತನ್ನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಹೆಂಡತಿ ಯಾಕೆ ಆತ್ಮಸಖಿಯಾಗಲಿಲ್ಲ? ಇದು ನನ್ನ ಮಟ್ಟಿಗೆ ಆದರ್ಶದ ಕನವರಿಕೆಯೂ ಇರಬಹುದೇನೊ!

   ಯಾಕೋ  ಅವನ ಏಕಾಂತದ ತಲ್ಲಣಗಳ ಸುಳಿಯಲ್ಲಿ ಅವಳ ಪ್ರೀತಿಯ ದೋಣಿ ಒಂಟಿಯಾದಂತೆ ನನಗನಿಸಿತು.

Wednesday 7 August 2013

ನಿರಂತರ ಜ್ವಲಿಸುವ 'ಫ಼್ಲೇಮಿಂಗ್ ಜೂನ್'


'ಫ಼್ಲೇಮಿಂಗ್ ಜೂನ್' (ವಿವರ)



        'ಸ್ಥಾಪಿತ ಆದರ್ಶ' ಬಿಂಬಿಸುವ ಮಾಧ್ಯಮವಾಗಿ, ಬಹುಕೃತ ದೃಷ್ಟಿಕೋನದ 'ಸೌಂದರ್ಯ'ದ ಪರಿಕಲ್ಪನೆಯಾಗಿ, ವೈಭೋಗ ಜೀವನದ ಅವಿಭಾಜ್ಯ ಅಂಗವಾಗಿ ಚಿತ್ರಕಲೆಯನ್ನು ಪರಿಗಣಿಸುವುದಾದರೆ, ಅಂಥ ದೃಷ್ಟಿಗೆ ಇಷ್ಟವಾಗಬಹುದಾದ ಚಿತ್ರ 'ಫ್ಲೇಮಿಂಗ್ ಜೂನ್'. ಇದು 'ವಿಕ್ಟೋರಿಯನ್ ನಿಯೋಕ್ಲಾಸಿಸಿಸಂ' ಶೈಲಿಯ ಉತ್ತಮ ಪ್ರಾತಿನಿಧಿಕ ಚಿತ್ರಗಳಲ್ಲೊಂದು. 'ಕ್ಲಾಸಿಸಿಸಂ' ಎಂಬ ಹೆಸರೇ ಸೂಚಿಸುವಂತೆ, ಇದು ಅತ್ಯುತ್ತಮ ಗುಣಮಟ್ಟ, ಉನ್ನತ ಆದರ್ಶ, ಅನನ್ಯತೆಯ ಪರಮೋಚ್ಛ ಸಂಕೇತವನ್ನು ನಿರೂಪಿಸುವ ಶೈಲಿ/ಪಂಥ. ಪಾಶ್ಚಿಮಾತ್ಯ ಸಾಂಸ್ಕೃತಿಕ ಚರಿತ್ರೆಯ ಪರಿಭಾಷೆಯಲ್ಲಿ 'ಕ್ಲಾಸಿಕ್' ಎಂಬುದು ಮೂಲತಃ ಗ್ರೀಕೋರೋಮನ್ ನಾಗರಿಕತೆಯ ಉಚ್ಚ್ರಾಯಸ್ಥಿತಿಯನ್ನು ಸೂಚಿಸುವ ಪದ. ಅಂತೆಯೇ ಯುರೋಪ್ ರಾಷ್ಟ್ರಗಳ ಸಾಂಸ್ಕೃತಿಕ ಚರಿತ್ರೆಯು ಗ್ರೀಕೋರೋಮನ್ ಅಂತಃಸತ್ವದ ಪ್ರಭಾವಕ್ಕೊಳಗಾಗಿದ್ದ ಕಾಲಘಟ್ಟವನ್ನು 'ನಿಯೋಕ್ಲಾಸಿಕಲ್ ಕಾಲ' ಎನ್ನಲಾಗುತ್ತದೆ. ಈ ಹಿನ್ನೆಲೆಯಲ್ಲಿ 'ಆದರ್ಶ ಸೌಂದರ್ಯದ' ಜಾಡುಹಿಡಿದ ಚಿತ್ರಕಲಾಶೈಲಿ 'ನಿಯೋಕ್ಲಾಸಿಸಿಸಂ'. ದೇವಾನುದೇವತೆಗಳನ್ನು ಪ್ರತಿನಿಧಿಸುವ ಧಾರ್ಮಿಕ, ಪೌರಾಣಿಕ ಕಥಾವಸ್ತು, ವೈಭವೋಪೇತ ಜೀವನಶೈಲಿ, ಆಕರ್ಷಕ ಮತ್ತು ಅಲಂಕಾರಿಕ ದೃಶ್ಯನಿರೂಪಣೆ - ಈ ಶೈಲಿಯ ಮೂಲಾಂಶಗಳು.



    ಇಂಥ ಹಲವು ಹಿನ್ನೆಲೆಯನ್ನೊಳಗೊಂಡು ಉಸಿರುಪಡೆದ ಚಿತ್ರ 'ಫ್ಲೇಮಿಂಗ್ ಜೂನ್'. ಅತ್ಯಂತ ಸುಸಜ್ಜಿತ, ಆಧುನಿಕ ಒಳಾಂಗಣದಲ್ಲಿ ಅಷ್ಟೇ ನಾಟಕೀಯ ಭಂಗಿಯಲ್ಲಿ ಮಲಗಿರುವ ಹೆಂಗಸು. ಸುಮಾರು ಮೂರು ಮುಕ್ಕಾಲು ಅಡಿ ಉದ್ದಳತೆಯ ಈ ತೈಲವರ್ಣಚಿತ್ರ ಬಹುಪಾಲು ಅಲಂಕಾರಿಕ ಉದ್ದೇಶಕ್ಕಾಗಿಯೇ ರಚಿಸಲಾಗಿದೆ ಅನಿಸಲು ಸಾಕಷ್ಟು ಕಾರಣಗಳಿವೆ. ಕ್ಯಾನ್ವಾಸಿನ ನಡೂಮಧ್ಯದ ಸಂಯೋಜನೆ, ಅತಿ ಅನಿಸುವಷ್ಟು ಎದ್ದುಕಾಣುವ ಕಡುಕಿತ್ತಳೆ ಬಣ್ಣದ ಬಳಕೆ, ವರ್ಣಸಂಯೋಜನೆಯ ದೃಷ್ಟಿಯಲ್ಲಿ ಇಡಿಯಾಗಿ ನೋಡುವುದಾದರೆ, ಇದು ಒಂದು ಆಕರ್ಷಕ ಆಕಾರ ಮತ್ತು
ಬಣ್ಣದ ಹೂವಿನಂತೆ ಕಾಣುವ ಹೆಣ್ಣಿನ ಚಿತ್ರಣ!

      ಬಲಗಾಲಿನ ಬೆರಳುಗಳನ್ನು ನೆಲಕ್ಕೆ ತಾಕಿದಂತೆ ಊರಿ, ಎಡಗಾಲು ಮಡಚಿಕೊಂಡ ಭಂಗಿಯಲ್ಲಿ ನಿದ್ದೆಹೋಗಿರುವ ಈಕೆ ಪ್ರಜ್ಞಾಪೂರ್ವಕವಾಗಿ ಪ್ರಚೋದನಕಾರಿ ಭಂಗಿಯಲ್ಲಿರುವಂತೆ ಚಿತ್ರಿಸಲಾಗಿದೆ. ಅಂಗಸೌಷ್ಟವವನ್ನು ಮತ್ತಷ್ಟು ಎದ್ದುಕಾಣುವಂತೆ ತೋರಿಸಲಿಕ್ಕಾಗಿಯೇ ಮೈತುಂಬ ಬಟ್ಟೆ ಹೊದಿಸಿದಂತೆ ತೋರುತ್ತದೆ! ಮೈಗೆ ಅಂಟಿಕೊಂಡಂತಿರುವ ಪಾರದರ್ಶಕ ಕಿತ್ತಳೆಬಣ್ಣದ ತೆಳ್ಳನೆಯ ಬಟ್ಟೆ ಮೈಬಣ್ಣವನ್ನು ಮತ್ತಷ್ಟು ಉಜ್ವಲಗೊಳಿಸಿ ಚಿನ್ನದ ಮೆರುಗಿನಂಥ, ಬೆಚ್ಚನೆ ಬೆಂಕಿಯ ಜ್ವಾಲೆಯಂಥ ಆವರಣ ಸೃಷ್ಟಿಸುತ್ತದೆ. ಶಾರೀರಿಕ ಪ್ರಮಾಣಬದ್ಧತೆಯ ಬಗೆಗಾಗಲೀ, ಬಟ್ಟೆಯ ಸ್ವಾಭಾವಿಕ ಚಿತ್ರಣದ ಬಗೆಗಾಗಲೀ ಹೆಚ್ಚು ತಲೆಕೆಡಿಸಿಕೊಳ್ಳದ ಕಲಾವಿದ, ಚಿತ್ರವನ್ನು ಅತಿರಂಜಿತಗೊಳಿಸಿ, ಒಟ್ಟಾರೆ ಅಲಂಕಾರಿಕ ಕೃತಿಯನ್ನಾಗಿಸುವತ್ತ ಆಸಕ್ತನಾದಂತಿದೆ. ಇಲ್ಲಿ ತದ್ರೂಪಿನ ನಿರೂಪಣೆಗಿಂತ ಹೆಚ್ಚಾಗಿ ಅತಿಶಯದ ಚಿತ್ರಣಕ್ಕೆ ಪ್ರಾಶಸ್ತ್ಯ ಸಿಕ್ಕಿದೆ. ಇಂಥ ಹಲವು ಕಾರಣಗಳಿಂದಾಗಿ, ಈ ಚಿತ್ರದ ಹೆಂಗಸು ಅತಿಮಾನುಷ ಅಥವಾ ಕೃತ್ರಿಮ ಅಂತಲೂ ಅನಿಸಿದರೆ ಆಶ್ಚರ್ಯವಿಲ್ಲ!


     ಹತ್ತೊಂಬತ್ತನೆಯ ಶತಮಾನದ ವೈಭೋಗದ, ಶ್ರೀಮಂತಿಕೆಯ, ಕೊಳ್ಳುಬಾಕ ಸಂಸ್ಕೃತಿಯ 'ವಿಕ್ಟೋರಿಯನ್ ಯುಗ'ದ (ಕ್ರಿ.ಶ. 1837 - ಕ್ರಿ.ಶ. 1901) ಅವಧಿಯಲ್ಲಿ ಈ ಚಿತ್ರ ರಚನೆಯಾದುದು ಎಂಬುದನ್ನು ಇಲ್ಲಿ ನೆನಪಿಡಬೇಕು. ವೈಜ್ಞಾನಿಕ, ತಾಂತ್ರಿಕ- ಕೈಗಾರಿಕಾ ಕ್ರಾಂತಿಯ ಹಿನ್ನೆಲೆ, ಕಲೆ, ಸಾಹಿತ್ಯ, ಕ್ರೀಡೆ, ರಂಗಭೂಮಿ - ಒಟ್ಟಾರೆ ಮನರಂಜನಾತ್ಮಕ ಚಟುವಟಿಕೆಗಳ ಬಗೆಗಿನ ಒಲವು, ಜೊತೆಗೆ ಶ್ರೀಮಂತ ಮಧ್ಯಮ ವರ್ಗಗಳೂ ಕಲಾಕೃತಿಗಳನ್ನು ಕೊಂಡುಕೊಳ್ಳುವ ಅಭಿರುಚಿ ಮತ್ತು ಉಮೇದು ಗಳಿಸಿಕೊಂಡ ಕಾಲ ಅದು. ಈ ಒಟ್ಟಾರೆ ಕೊಳ್ಳುಬಾಕ ಮನಸ್ಥಿತಿಗೆ ಪೂರಕವಾಗಿ ರಚನೆಯಾಗುತ್ತಿದ್ದುದು ಭಾವೋತ್ತೇಜನಗೊಳಿಸುವಂಥ ಮತ್ತು ಬಳಕೆಗೆ ಉದ್ದೀಪಿಸುವಂಥ ಚಿತ್ರಗಳು. ಅಂದರೆ, 'ಸೌಂದರ್ಯ' ಮತ್ತು 'ಸೇವನೆಗೆ ಅರ್ಹ' ವಸ್ತುಗಳು ಈ ಚಿತ್ರಗಳ ಮೂಲ ಆಕರ. ಇಲ್ಲಿ ಅತಿಮುಖ್ಯ ವಸ್ತುವಿಷಯ - ಹೆಣ್ಣು! ಪುರುಷಕೇಂದ್ರಿತ ಸಮಾಜದ ಪುರುಷಕಲಾವಿದರಿಂದ ಪುರುಷದೃಷ್ಟಿಗಾಗಿಯೇ ರಚನೆಗೊಳ್ಳುತ್ತಿದ್ದ ಕಲಾಕೃತಿಗಳಿವು ಎಂಬುದನ್ನು ಮರೆಯುವಂತಿಲ್ಲ! ಇದಕ್ಕೆ ರೂಪದರ್ಶಿ ಮಾತ್ರ ಮಹಿಳೆಯಾಗಿರಬೇಕಾದ್ದು ಆ ಮಟ್ಟಿಗೆ ಸಹಜವೇ!

ಫ಼್ರೆಡರಿಕ್ ಲೀಟನ್

      ಅಂದಹಾಗೆ, 'ಫ್ಲೇಮಿಂಗ್ ಜೂನ್' ಕಲಾಕೃತಿಯ ಕರ್ತೃ- ಫ್ರೆಡರಿಕ್ ಲೀಟನ್ ( ಕ್ರಿ.ಶ. 1830 -ಕ್ರಿ.ಶ.1896). ಇಂಗ್ಲೆಂಡಿನ ಶ್ರೀಮಂತ ವೈದ್ಯ ಕುಟುಂಬದ ಹಿನ್ನೆಲೆಯ ಈತ ಆ ಕಾಲದ ಅತ್ಯಂತ ಯಶಸ್ವಿ, ಪ್ರಭಾವಶಾಲಿ ಕಲಾವಿದ ಮತ್ತು ಶಿಲ್ಪಿ. ಲಂಡನ್ ರಾಯಲ್ ಅಕಾಡೆಮಿಯ ಅಧ್ಯಕ್ಷನೂ ಆಗಿದ್ದವನು. 'ಸಮ್ಮರ್ ಸ್ಲಂಬರ್' ಎಂಬ ಕಲಾಕೃತಿಗಾಗಿ ನಿದ್ರಿಸುವ ಹೆಂಗಸಿನ ಚಿತ್ರದ ಕರಡುಪ್ರತಿಗಳನ್ನು ರಚಿಸುತ್ತಿದ್ದ ಲೀಟನ್ ಗೆ ಆ ಕರಡನ್ನೇ ಪ್ರತ್ಯೇಕ ಕಲಾಕೃತಿ ಮಾಡಬೇಕೆನಿಸಿದ್ದರಿಂದ ಹುಟ್ಟಿದ ಕೃತಿ -'ಫ್ಲೇಮಿಂಗ್ ಜೂನ್'. ಆತ ತೀರಿಹೋಗುವ ಹಿಂದಿನ ವರ್ಷ (ಕ್ರಿ.ಶ.1895), ಅರವತ್ನಾಲ್ಕರ ಇಳಿವಯಸ್ಸಿನಲ್ಲಿ ರಚಿಸಿದ ಚಿತ್ರ ಇದು.

'ಫ಼್ಲೇಮಿಂಗ್ ಜೂನ್' (ವಿವರ)

      ಮೇಲ್ನೋಟಕ್ಕೆ ಕೇವಲ ಅಲಂಕಾರಿಕ ಕಲಾಕೃತಿಯಂತೆ ಕಂಡುಬರುವ ಈ ಚಿತ್ರದ ಶೀರ್ಷಿಕೆಯ ಜಾಡುಹಿಡಿದು ಹೊರಟರೆ, ಆಸಕ್ತಿಕರ ವಿಷಯಗಳು ಕಾಣಿಸತೊಡಗುತ್ತವೆ. ಈ ಮೊದಲು ಹೇಳಿದಂತೆ, ಈ ಚಿತ್ರದ ಹೆಂಗಸು ಆಧುನಿಕ ಅಥವಾ ದಿನನಿತ್ಯದ ಸಾಮಾನ್ಯ ಮಹಿಳೆಗಿಂತ ಹೆಚ್ಚಾಗಿ ಪೌರಾಣಿಕ ದೇವತೆಯನ್ನು ಹೋಲುವ ಸಾಧ್ಯತೆಯೇ ನಿಚ್ಚಳವಾಗಿದೆ. ಈಕೆಯನ್ನು ಸೌಂದರ್ಯ, ಪ್ರೇಮ, ಕಾಮ ಮತ್ತು ಸಮೃದ್ಧಿಯ ಸಂಕೇತವಾದ ರೋಮನ್ ದೇವತೆ 'ವೀನಸ್'ಗೆ ಹೋಲಿಸುವುದೂ ಉಂಟು. ಹಾಗೆಯೇ ಜೂನ್ ತಿಂಗಳ ಜೊತೆ ತಾಳೆ ಹಾಕುವುದಾದರೆ, ಗ್ರೀಕ್ ದೇವತೆ 'ಪರ್ಸೆಫನಿ'ಯನ್ನು ಇಲ್ಲಿ ನೆನಪಿಸಿಕೊಳ್ಳುವುದು ಅಸಂಗತವಾಗಲಾರದು. ಸುಗ್ಗಿ, ಹಣ್ಣಿನಬೀಜಗಳು ಮತ್ತು ಕತ್ತಲ ಭೂಗರ್ಭವನ್ನು ಪ್ರತಿನಿಧಿಸುವ ದೇವತೆ ಈಕೆ.  ಅಲ್ಲದೆ, ನಿದ್ರೆ ಮತ್ತು ಸಾವಿನ ನಡುವೆ ಸಂಬಂಧ ಕಲ್ಪಿಸುತ್ತದೆಂದು ನಂಬಲಾಗಿರುವ 'ವಿಷಪೂರಿತ ಓಲಿಯಾಂಡರ್' ಗಿಡದ ಚಿತ್ರಣವನ್ನು ಬಲಮೇಲ್ಭಾಗದಲ್ಲಿ ಕಾಣಬಹುದು. ಇಂಥ ಹಲವು ಗ್ರಹಿಕೆಗಳು ಈ ಚಿತ್ರಕ್ಕೆ ನಿರಂತರ ಚಲನೆಯನ್ನು ತಂದುಕೊಡುತ್ತವೆ.

       ('ಪ್ರಜಾವಾಣಿ' ವಿಶೇಷ ಸಂಚಿಕೆಯಲ್ಲಿ ಪ್ರಕಟಿತ.)

'ಫ಼್ಲೇಮಿಂಗ್ ಜೂನ್'
                                        

Wednesday 25 April 2012

ಕಲಾಮಾಧ್ಯಮದಲ್ಲಿ ಸ್ತ್ರೀವಾದಿ ಚಳುವಳಿ : ಸಂಕ್ಷಿಪ್ತ ನೋಟ

kathe kolwiz- 'self portrait'


ತನ್ನ ವಿಶಿಷ್ಟ-ವಿಸ್ಮಯಕರ ಶಾರೀರಿಕ ಗುಣಲಕ್ಷಣ ಮತ್ತು ಸೂಕ್ಷ್ಮ ಮನಸ್ಸು ಹೆಣ್ಣಿನ ಗಾಧ ಚೈತನ್ಯಕ್ಕೆ ಕಾರಣವಾದಂತೆಯೇ ದಮನಕ್ಕೆ ಒಳಗಾಗಲೂ ಕಾರಣವಾದುದು ವಿಪರ್ಯಾಸ. ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ವಂಚಿತವಾಗಿರುವ ಶೋಷಿತವರ್ಗದಲ್ಲಿ ಮಹಿಳೆಗೆ ಅಗ್ರಸ್ಥಾನ. ಇಲ್ಲಿ ಜಾತಿ, ವರ್ಗ, ದೇಶ-ಕಾಲ ಎಲ್ಲವನ್ನೂ ಮೀರಿದ ಏಕತೆಯಿದೆ !

ಸ್ವಭಾವತಃ ಮಾನಸಿಕ ಮತ್ತು ದೈಹಿಕ ಸಂವೇದನೆಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುವ ಮಹಿಳೆ ಇಂದು ತನ್ನ ಭಾವಾಭಿವ್ಯಕ್ತಿಗಾಗಿ ಹಲವು ಸೃಜನಶೀಲಮಾಧ್ಯಮಗಳ ಮೊರೆಹೋಗಿದ್ದಾಳೆ. ಇಪ್ಪತ್ತನೆ ಶತಮಾನದ ಅರವತ್ತರ ದಶಕಗಳಲ್ಲಿ ಪಾಶ್ಚಾತ್ಯ ಕಲಾಕ್ಷೇತ್ರದಲ್ಲಿ ರೂಪುಗೊಂಡ ಸ್ತ್ರೀವಾದಿ ನೆಲೆಯ ಕಲಾಚಳುವಳಿ, ಪ್ರಮುಖ ಮಹಿಳಾ ಕಲಾವಿದರು ತ್ತು ಅವರ ಕಲಾಕೃತಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಎರಡನೇ ಮಹಾಯುದ್ಧದ (1939-1945) ನಂತರ ಸಾಮಾಜಿಕ ವಲಯದಲ್ಲಿ ಕೆಲಸಗಳ ಒತ್ತಡ ಹೆಚ್ಚಾದುದರಿಂದ ಮನೆಯ ಕೆಲಸಗಳಿಗೆ ಸೀಮಿತವಾಗಿದ್ದ ಮಹಿಳೆಯನ್ನು ಪುರುಷವರ್ಗವೇ ಸಾಮಾಜಿಕ ಹೊರವಲಯದಲ್ಲಿ ಕಾರ್ಯನಿರ್ವಹಣೆಗೆ ಪ್ರೇರೇಪಿಸಿತು. ಇದರಿಂದ ಹೊಸ ಸ್ವಾತಂತ್ರ್ಯವನ್ನು ಅನುಭವಿಸಿದ ಮಹಿಳೆ ಎಚ್ಚೆತ್ತುಕೊಂಡು, ಸಂಘಟನೆಗಳ ಮೂಲಕ ಲಿಂಗತಾರತಮ್ಯದ ವಿರುಧ್ಧ ದನಿ ಎತ್ತಲು ಸಾಧ್ಯವಾಯಿತು. ಕ್ರಿ. . 1960 ದಶಕಗಳಲ್ಲಿ ರೂಪಿತಗೊಂಡ ಸ್ತ್ರೀವಾದಿ ಕಲಾಚಳುವಳಿಯು 70 ದಶಕಗಳಲ್ಲಿ ಹೆಚ್ಚು ಜನಜನಿತವಾಯಿತು. ಮುಖ್ಯವಾಗಿ ಅಮೆರಿಕ, ಫ್ರಾನ್ಸ್, ಬ್ರಿಟನ್, ಜರ್ಮನಿ ದೇಶಗಳಲ್ಲಿ ಸ್ತ್ರೀಪರ ಹೆಚ್ಚು ಗಟ್ಟಿದನಿ ಹುಟ್ಟಿತು. 1971 ರಲ್ಲಿ ಲಿಂಡಾ ನೊಚ್ಲಿನ್ ಎಂಬ ಅಮೆರಿಕದ ಕಲಾವಿಮರ್ಶಕಿ ತನ್ನ 'Why have there been no great women artists?' ಎಂಬ ಲೇಖನದ ಮೂಲಕ ಕಲಾವಲಯದಲ್ಲಿ ಮಹಿಳೆಯನ್ನು ಮೂಲೆಗುಂಪು ಮಾಡಿರುವುದರ ಕಡೆಗೆ ಗಮನಸೆಳೆದಳು. ನಂತರದ ದಿನಗಳಲ್ಲಿ ಹಿಳಾ ಕಲಾವಿದರನ್ನು ಗುರುತಿಸುವ ಕೆಲಸ ಹೆಚ್ಚು ನಿಯೋಜಿತವಾಗಿ ನಡೆದುಬಂದಿದೆ.

'ಸೌಂದರ್ಯ'ಕ್ಕೆ ಪರ್ಯಾಯವೆಂಬಂತೆ 'ಸ್ತ್ರೀ ನಗ್ನತೆ' ಕಲಾಮಾಧ್ಯಮದಲ್ಲಿ ಬಿಂಬಿಸಲ್ಪಟ್ಟಿದೆ. ಐಷಾರಾಮಿ ಭೋಗಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸಲ್ಪಟ್ಟು, ಮಾನಸಿಕ/ಲೈಂಗಿಕ ಶೋಷಣೆಗೆ ಒಳಗಾಗುತ್ತ ಬಂದ ಮಹಿಳಾವರ್ಗವನ್ನು ಮೊದಲಿನಿಂದಲೂ ಕಲಾ ಅಧ್ಯಯನ, ಕಲಾಪ್ರದರ್ಶನ / ಮಾರುಕಟ್ಟೆ ವ್ಯವಸ್ಥೆಯಿಂದ ಹೊರಗಿಡುತ್ತ ಬರಲಾಗಿತ್ತು.
ಕಲಾಕ್ಷೇತ್ರದಲ್ಲಿ ಸ್ತ್ರೀವಾದಿ ಅಲೆ ಏಳುವುದಕ್ಕೆ ಮುಂಚೆ ಇದ್ದೂ ಇಲ್ಲದಂತೆ ಹಲವು ಮಹಿಳಾ ಕಲಾವಿದರು ಆಗಿಹೋಗಿದ್ದಾರೆ. ಹತ್ತೊಂಬತ್ತನೆ ಶತಮಾನದ ಬರ್ತ್ ಮಾರಿಸಾತ್ (Berth Morisot), ಮೇರಿ ಕಸಾತ್, ಗ್ವೆನ್ ಜಾನ್ ಥರದ ಕೆಲವು ಮುಂಚೂಣಿಯಲ್ಲಿದ್ದ ಬೆರಳೆಣಿಕೆಯ ಕಲಾವಿದೆಯರನ್ನು ಹೆಸರಿಸಬಹುದು. ಹೊರಗಿನ ಪ್ರಭಾವಗಳನ್ನು ಹೊರತುಪಡಿಸಿ ಇವರೆಲ್ಲರ ಚಿತ್ರಗಳಲ್ಲಿರುವ ಸಾಮಾನ್ಯ ಅಂಶವೆಂದರೆ - 'ಮೌನ'

Mary Cassatt - 'Mother and Child'
ಮಹಿಳೆಯರ ಖಾಸಗಿ ಬದುಕಿನ ಕ್ಷಣಗಳಲ್ಲಿ ಅಡಗಿದ ಮೌನ ಇವರೆಲ್ಲರ ಕೃತಿಗಳಲ್ಲಿ ಮೂಡಿದೆ. ಹಾಗೆಯೇ ಇವರ ಚಿತ್ರಗಳ ರೂಪದರ್ಶಿಯೂ ಮಹಿಳೆಯೇ ! ಓದಿನಲ್ಲಿ ತಲ್ಲೀನೆಯಾಗಿರುವ ಹುಡುಗಿ/ಮಹಿಳೆ, ಉದ್ಯಾನವನದಲ್ಲಿ ತನ್ನನ್ನು ತಾನು ಮರೆತು ಕುಳಿತ ಮಹಿಳೆ, ಮಕ್ಕಳ ಪಾಲನೆಯಲ್ಲಿ ತೊಡಗಿರುವ ಮಹಿಳೆ, ತನ್ನಷ್ಟಕ್ಕೆ ತಾನು ಗೃಹಕಾರ್ಯಗಳಲ್ಲಿ ಮಗ್ನಳಾಗಿರುವ, ಬಟ್ಟೆ ಹೊಲಿಯುವ ಮಹಿಳೆ - ಇತ್ಯಾದಿ ಎಲ್ಲಾ ಚಿತ್ರಗಳಲ್ಲೂ ಗಾಢವಾದ ಮೌನ ಅಡಗಿ ಕುಳಿತಂತೆ ಭಾಸವಾಗುತ್ತದೆ. ಸ್ಫೋಟಗೊಳ್ಳದ ಯಾವುದೋ ಅವ್ಯಕ್ತ ಮಗ್ನತೆ ಎಲ್ಲಾ ಚಿತ್ರಗಳ ಜೀವಾಳ. ಗಾಢ ನಿಶ್ಯಬ್ದದ ಪರಿಧಿಯೊಳಗೇ ತನ್ನ ಲೋಕ ಕಟ್ಟಿಕೊಳ್ಳುವ ಮಹಿಳೆಯ ತಾಳ್ಮೆ ಮತ್ತು ಗಾಢಸ್ಮೃತಿ ನೋಡುಗರನ್ನು ಆವರಿಸಿಕೊಳ್ಳುತ್ತದೆ.

Gwen John - 'Nude Girl'
ಗ್ವೆನ್ ಜಾನಳ ಚಿತ್ರಗಳಲ್ಲಿ ಕಂಡುಬರುವ ಅಷ್ಟೂ ಸ್ತ್ರೀಪಾತ್ರಗಳು ಪೇಲವವಾಗಿ, ಬತ್ತಿಹೋದಂತಿರುವ ದೇಹ-ಮನಸ್ಸುಗಳನ್ನು ಬಿಂಬಿಸುತ್ತವೆ. ಆಕೆಯ ಎಲ್ಲಾ ಕೃತಿಗಳು ತಣ್ಣನೆಯ, ಒಳಹರಿವಿನ ದುಗುಡ ತುಂಬಿಕೊಂಡಂತೆ ಕಾಣುತ್ತವೆ. ಸ್ವಲ್ಪ ಸಹಾನುಭೂತಿ ತೋರಿದರೂ ಧುಮ್ಮಿಕ್ಕಿ ಹರಿದುಬಿಡಲು ಹಾತೊರೆಯುತ್ತಿರುವ ಅದುಮಿಟ್ಟ ಬಿಕ್ಕು ಅದು. ಅಂತರ್ಮುಖಿತ್ವದ ಗಾಢಛಾಯೆ ಪ್ರತಿಯೊಬ್ಬ ಕಲಾವಿದೆಯ ಕಲಾಕೃತಿಯಲ್ಲಿ ಕಂಡುಬರುವ ಸಾಮಾನ್ಯ ಅಂಶ. ಮಹಿಳಾ ಕಲಾವಿದರಿಂದ ಚಿತ್ರಿತಗೊಂಡ 'ನಗ್ನತೆ' ಲೈಂಗಿಕ ಶೋಷಣೆಯ ವಿರುಧ್ಧ ಎತ್ತಿದ ದನಿಯಂತೆ ಮುಟ್ಟುತ್ತದೆಯೇ ಹೊರತು ಚಪಲ ಹೆಚ್ಚಿಸುವ, ಆಸ್ವಾದ್ಯಗೊಳ್ಳುವ, ತೋರಿಕೆಯ ಬಾಹ್ಯಸೌಂರ್ಯದ ಹಗುರ ಅಭಿವ್ಯಕ್ತಿಯಂತಲ್ಲ.

ಸ್ತ್ರೀ ಮತ್ತು ಪುರುಷರ ದೃಷ್ಟಿಗ್ರಹಣದ ಮೂಲವ್ಯತ್ಯಾಸದ ಕುರಿತಂತೆ ಮಾರ್ಕ್ಸ್ ವಾದಿ ವಿಮರ್ಶಕ ಜಾನ್ ಬರ್ಜರ್ ತನ್ನ 'Ways of Seeing' ಎಂಬ ಪುಸ್ತಕದಲ್ಲಿ ಹೀಗೆ ಹೇಳುತ್ತಾನೆ : "Men look at women; women watch themselves being looked at" (ಪುರುಷರು ಸ್ತ್ರೀಯರನ್ನು ನೋಡುತ್ತಾರೆ, ಸ್ತ್ರೀಯರು ನೋಡಲ್ಪಡುತ್ತಿರುವ ತಮ್ಮನ್ನೆ ಗಮನಿಸಿಕೊಳ್ಳುತ್ತಾರೆ.)
ಸ್ತ್ರೀದೇಹ ಮತ್ತು ಲೈಂಗಿಕ ಅವಯವಗಳ ಸಾಂಕೇತಿಕ ಅಭಿವ್ಯಕ್ತಿಯ ಮೂಲಕ ವಿಶಿಷ್ಟ ಕಲಾಕೃತಿಗಳನ್ನು ರಚಿಸಿದಾಕೆ ಅಮೆರಿಕಾದ ಜಾರ್ಜಿಯಾ ಓಕೀಫ್. ಹೂವಿನ ಸರಣಿ ಚಿತ್ರಗಳು ಈಕೆಯ ದಿಟ್ಟ ಅಭಿವ್ಯಕ್ತಿಯ ವಸ್ತುವಿಷಯವಾಗಿದೆ. ದಮನಿತ ಭಾವನೆಗಳಿಗೆ ಬಣ್ಣಕೊಟ್ಟ ಗ್ವೆನ್ ಜಾನ್, ಕಸಾತ್, ಮಾರಿಸಾತ್ ರಿಗಿಂತ ಭಿನ್ನವಾಗಿ ಕಾಣಿಸುತ್ತಾಳೆ ಈಕೆ. ಕುದುರೆಯ ತಲೆಬುರುಡೆಯೊಂದಿಗೆ ಇರಿಸಿದ ಹೂವಿನ ಸರಣಿಚಿತ್ರಗಳು ಲೈಂಗಿಕತೆಗೆ ಹೊಸ ಆಯಾಮವನ್ನು ಒದಗಿಸುತ್ತವೆ. (ಕುದುರೆ ಮತ್ತು ಹೂವು - ಎರಡೂ ಲೈಂಗಿಕ ಸಂಕೇತಗಳು). ಭಾರತದ 'ತಾಂತ್ರಿಕ' ಕಲೆಯನ್ನೂ ಈಕೆಯ ಚಿತ್ರಗಳು ನೆನಪಿಗೆ ತರುತ್ತವೆ.

Georgia-o-Keefe- 'Flower Series'
ಜರ್ಮನಿಯ ಕ್ಯಾಥೆ ಕೋಲ್ವಿಝ್ ಮತ್ತೊಬ್ಬ ಪ್ರೌಢ ಕಲಾವಿದೆ. ಮೊದಲ ಮಹಾಯುದ್ಧದಲ್ಲಿ ತನ್ನ ಮಗನನ್ನು ಕಳೆದುಕೊಳ್ಳುವ ಈಕೆ ತನ್ನ ಚಿತ್ರಸರಣಿಯಲ್ಲಿ ಹೆಪ್ಪುಗಟ್ಟಿದ ನಿರಾಸೆ, ಭಯ, ದುಃಖವನ್ನು ಕಪ್ಪು-ಬಿಳುಪಿನ ಸಶಕ್ತ ಮಾಧ್ಯಮದಲ್ಲಿ ಅಭಿವ್ಯಕ್ತಿಸಿದ್ದಾಳೆ. ವುಡ್ ಕಟಿಂಗ್, ಎಚಿಂಗ್, ಲಿಥೋಗ್ರಾಫ್ ಮೂಲಕ ಭಾರವಾದ ಮತ್ತು ಅಷ್ಟೇ ಧೃಢವಾದ ದೃಶ್ಯರೂಪಣ ಸೃಷ್ಟಿಸಿದ್ದಾಳೆ. ಶಿಲ್ಪಮಾಧ್ಯಮವೂ ಈಕೆಯ ಅಭಿವ್ಯಕ್ತಿಗೆ ಹೆಗಲುಕೊಟ್ಟಿದೆ. ಅತೀ ಶಕ್ತವಾಗಿ ಸಂವಹಿಸುವ ಆಕೆಯ ದುಃಖದ ಭಾರ ಇಡೀ ಸ್ತ್ರೀವರ್ಗದ ಪ್ರಾತಿನಿಧಿಕ ಭಾವವಾಗಿ ಉಳಿಯುತ್ತದೆ. ಒಟ್ಟಾರೆ ಸ್ತ್ರೀಸಂವೇದನೆಗೆ ಸಾಮೂಹಿಕ ನೆಲೆಗಟ್ಟಿನ ಚೌಕಟ್ಟಿರುವಂತೆ ಕಂಡುಬರುತ್ತದೆ.
Kathe kolwiz-  'Death seizing a woman'
1960-70 ದಶಕಗಳಲ್ಲಿ ಮತ್ತು ನಂತರದ ದಿನಗಳಲ್ಲಿ ಕಂಡುಬಂದ ಸ್ತ್ರೀವಾದಿ ಅಲೆಯ ಮುಂಚೂಣಿಯ ಪ್ರಮುಖ ಕಲಾವಿದರಲ್ಲಿ ಬಾರ್ಬರಾ ಕ್ರೂಗರ್, ಪೌಲಾ ರೆಗೊ, ಗೆರಿಲ್ಲ ಗರ್ಲ್ಸ್ (ಸಮೂಹ), ಜೂಡಿ ಶಿಕಾಗೊ, ಇವಾ ಹೆಸ್ ಮುಂತಾದವರನ್ನು ಹೆಸರಿಸಬಹುದು.

ಬಂಡಾಯದ ದಿಟ್ಟನಿಲುವು, ಹರಿತ ಅಭಿವ್ಯಕ್ತಿ ಹಲವು ಕಲಾವಿದೆಯರಿಂದ ಸಾಧ್ಯವಾಯಿತು. ಪೋರ್ಚುಗೀಸ್ ಕಲಾವಿದೆ ಪೌಲಾ ರೆಗೊ ಅಂಥವರ ಪೈಕಿ ಒಬ್ಬಳು. ಮಕ್ಕಳ ಕಥೆಗಳ ಕಾಮಿಕ್ ಶೈಲಿಯ ನಿರೂಪಣೆ ಈಕೆಯ ಪ್ರಾರಂಭದ ಚಿತ್ರಗಳಲ್ಲಿ ಕಂಡುಬರುತ್ತದೆ. 1990 ದಶಕಗಳ 'ಡಾಗ್ ವುಮನ್' ಮತ್ತು 'ಡಾನ್ಸಿಂಗ್ ಆಸ್ಟ್ರಿಚಸ್' ಸರಣಿಯ ಚಿತ್ರಗಳು ಅದುವರೆಗಿನ ದೃಶ್ಯ ಸಿದ್ಧಾಂತದ 'ಸೌಂದರ್ಯ' ಪರಿಕಲ್ಪನೆಯನ್ನು ಬೆಚ್ಚಿಬೀಳಿಸುವಷ್ಟು ಸಶಕ್ತವಾದ ಹೊಸಭಾಷೆ ಸೃಷ್ಟಿಸಿದೆ. ಕಥಾನಿರೂಪಣಾ ಶೈಲಿಯ, ಕುತೂಹಲಭರಿತ ನಾಟಕದ ಸ್ತಬ್ಧಚಿತ್ರದಂತೆ ಕಾಣುವ ಈಕೆಯ ಚಿತ್ರಗಳು ತಮ್ಮೊಳಗೆ ವಿಚಿತ್ರ ನಿಗೂಢತೆಯನ್ನು ಒಳಗೊಂಡಿವೆ. ಆಕೆಯ ' ಮೇಯ್ಡ್ಸ್', ' ಫಿಟ್ಟಿಂಗ್', ' ಫ್ಯಾಮಿಲಿ' ಚಿತ್ರಗಳು ಸಾಂಕೇತಿಕ ದೃಶ್ಯನಿರೂಪಣೆ ಅತಿವಿಶಿಷ್ಟವಾದ ಮನೋ ಆವರಣವನ್ನು ಸೃಷ್ಟಿಸುತ್ತವೆ. ಮನುಷ್ಯ ಸಂಭಂಧಗಳ ವೈಚಿತ್ರ್ಯ ಮತ್ತು ನಿಗೂಢತೆ ಚಿತ್ರಗಳಲ್ಲಿ ಮೂಡಿಬಂದಿದೆ.
'ಡಾಗ್ ವುಮನ್' ಮತ್ತು 'ಡಾನ್ಸಿಂಗ್ ಆಸ್ಟ್ರಿಚಸ್' ಈಕೆಯ ಪ್ರಸಿದ್ಧ ಸರಣಿ ಚಿತ್ರಗಳು. 'ಮಹಿಳೆಯನ್ನು ನಾಯಿಗೆ ಹೋಲಿಸಿದರೆ ಅದನ್ನು ನಿಕೃಷ್ಟವಾಗಿ ಭಾವಿಸಬೇಕಿಲ್ಲ. ಬದಲಾಗಿ ಮಹಿಳೆಯನ್ನು ಮತ್ತಷ್ಟು ಸಬಲಳಾಗಿ ಕಾಣಬೇಕು. ತನ್ನ ರಕ್ಷಣೆಯನ್ನು ತಾನು ಮಾಡಿಕೊಳ್ಳಬಲ್ಲ, ಆಕ್ರಮಣಕಾರಿಯಾಗಿರುವುದು ಒಳ್ಳೆಯದೆ. ಮಹಿಳೆಯನ್ನು ನಾಯಿಗೆ ಹೋಲಿಸಿದರೆ ಆಶ್ಚರ್ಯಪಡುವಂಥದ್ದೇನಿಲ್ಲ!' ಎನ್ನುತ್ತಾಳೆ ಈಕೆ. ಅಂತೆಯೇ ಶಕ್ತಿಯುತವಾದ, ಆತ್ಮಸ್ಥೈರ್ಯದ ಆಕ್ರಮಣಕಾರಿ ಮಹಿಳೆಯ ಚಿತ್ರಣ ಮಾತುಗಳನ್ನು ಬಲಪಡಿಸುತ್ತವೆ !

Paula Rego -'Dancing Ostriches Series'
'ಡಾನ್ಸಿಂಗ್ ಆಸ್ಟ್ರಿಚಸ್' ಸರಣಿ ಮೂಲತಃ ವಾಲ್ಟ್ ಡಿಸ್ನಿಯ 'ಫ್ಯಾಂಟೇಶಿಯ' ಎಂಬ ಕಾರ್ಟೂನ್ ಸರಣಿಯಿಂದ ಪ್ರೇರಿತವಾದುದು. ಆಕೆಯ ಬಹುತೇಕ ಚಿತ್ರಗಳಂತೆ ಇಲ್ಲಿಯೂ ಕೂಡ ಪ್ರಾಣಿ-ಪಕ್ಷಿಗಳಿಗೆ ಮನುಷ್ಯರನ್ನು ಹೋಲಿಸುವ ಭ್ರಾಮಕ ಮನೋಧರ್ಮದ ನಿರೂಪಣೆ ಕಾಣಬಹುದು. ಇಲ್ಲಿನ ನರ್ತಕಿಯರೆಲ್ಲರೂ ಮಧ್ಯವಯಸ್ಕರು. ಸುಂದರವಲ್ಲದ, ಹಲವು ಒತ್ತಡಗಳಿಗೆ ಒಳಗಾದಂತೆ ಕಾಣುವ, ಒರಟು ದೇಹದ ಮಹಿಳೆಯರು. ಕನಸುಗಳನ್ನು ಪೂರೈಸಿಕೊಳ್ಳಲಾಗದ, ಲೈಂಗಿಕ ಅಸಂತೃಪ್ತಿಯ, ಹಲವು ನಿರೀಕ್ಷೆಗಳನ್ನಿಟ್ಟುಕೊಂಡ ಭಾವ ಚಿತ್ರದಲ್ಲಿದೆ. ಇಲ್ಲಿ ಸ್ತ್ರೀರೂಪದ ಸಹಜ ಮತ್ತು ನೈಜ ನಿರೂಪಣೆಯ ಸಾಧ್ಯತೆಯನ್ನು ಹೆಚ್ಚು ಪೂರಕವಾಗಿ ಬಳಸಿಕೊಳ್ಳಲಾಗಿದೆ.
ಮಹಿಳಾಮನೋಧರ್ಮದ ಒತ್ತಾಸೆಗಳಿಗೆ ಪೂರಕವಾಗಿ ತಮಾಷೆ, ವ್ಯಂಗ್ಯದ ದೃಶ್ಯರೂಪಣೆಯ ಜೊತೆಗೆ ತೀಕ್ಷ್ಣ ಬರಹಗಳನ್ನೂ ಅಭಿವ್ಯಕ್ತಿ ಸಾಧನವಾಗಿ ಬಳಸಿಕೊಂಡ ಪ್ರಮುಖ ಕಲಾವಿದೆ ಅಮೆರಿಕಾದ ಬಾರ್ಬರಾ ಕ್ರೂಗರ್. 'Mademoiselle' ನಿಯತಕಾಲಿಕೆಯ ಹೆಡ್ ಡಿಸೈನರ್ ಆದ ಈಕೆ 'ಪೋಸ್ಟರ್' ಮಾಧ್ಯಮದ ಮೂಲಕ ಹೆಚ್ಚು ಸುಲಭವಾಗಿ ಮತ್ತು ಪ್ರಭಾವಶಾಲಿಯಾಗಿ ಜನರನ್ನು ತಲುಪುವ ಕೃತಿಗಳನ್ನು ರಚಿಸಿದ್ದಾಳೆ. ಕಪ್ಪು-ಬಿಳುಪಿನ ಸಶಕ್ತ ಛಾಯಾಚಿತ್ರದ ಜೊತೆಗೆ ಕೆಂಪು ಹಿನ್ನೆಲೆಯಲ್ಲಿ ಮೂಡಿದ ಕಪ್ಪು-ಬಿಳುಪಿನ ಅಕ್ಷರಗಳು ನೋಡುಗನನ್ನು ತಕ್ಷಣ ಸೆಳೆಯುವುದಲ್ಲದೆ, ತೀಕ್ಷ್ಣ ಸವಾಲನ್ನು ಸಮರ್ಥವಾಗಿ ಜನರಿಗೆ ತಲುಪಿಸುತ್ತವೆ.
ಕೊಳ್ಳುಬಾಕ ಸಂಸ್ಕೃತಿಯನ್ನು ಬಿಂಬಿಸುವ ' I shop, therefore I am' ಎಂಬ ಬರಹದ ಕೆಂಪು ಕಾರ್ಡನ್ನು ಹಿಡಿದು ತೋರಿಸುತ್ತಿರುವ ಕಪ್ಪು-ಬಿಳುಪಿನ ಅಂಗೈಯ ಚಿತ್ರ ಶಾಪಿಂಗ್ ಬ್ಯಾಗ್ಗಳ ಮೇಲೆ ಮುದ್ರಿತವಾದುದು ಮನರಂಜನೆಯೊದಗಿಸುವುದರ ಜೊತೆಗೆ ಗಂಭೀರ ಯೋಚನೆಗೂ ಒಳಗುಮಾಡುತ್ತದೆ. ಬಿಲ್ ಬೋರ್ಡ್ ಗಳು , ಟೀ-ಷರ್ಟ್, ಷಾಪಿಂಗ್ ಬ್ಯಾಗ್, ದೂರದರ್ಶನ, ಬಸ್ ನಿಲ್ದಾಣ - ಎಲ್ಲವೂ ಈಕೆಯ ಕಲಾಪ್ರದರ್ಶನದ ಸುಲಭ ತಾಣಗಳು. ಎಂಬತ್ತರ ದಶಕಗಳಲ್ಲಿ ಪ್ರಚಲಿತವಾಗಿದ್ದ ಮುರಿದು ಕಟ್ಟುವ ಮನೋಧರ್ಮ(Deconstruction) ಈಕೆಯ ಕೃತಿಗಳಲ್ಲೂ ಕಂಡುಬಂದಿದೆ. ಸಾಂಪ್ರದಾಯಿಕ ನಿಲುವನ್ನು ತಿರಸ್ಕರಿಸಿ ಹೊಸ ಚಿಂತನೆಗಳಿಗೆ ಚಾಲನೆ ಕೊಡುವ ನಿಟ್ಟಿನಲ್ಲಿ ಈಕೆಯ ಕೃತಿಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ.

By Barbara Kruger
''Your gaze hits the side of my face' - (ನಿನ್ನ ನೋಟ ನನ್ನ ಮುಖದ ಪಾಶ್ರ್ವಕ್ಕೆ ತಗಲುತ್ತಿದೆ) . ಹೆಣ್ಣು ಶಿಲ್ಪದ ಮುಖದ ಒಂದು ಪಾಶ್ರ್ವದ ಮೇಲೆ ಹೇಳಿಕೆಯಿದೆ. ಇದು ಹೆಣ್ಣನ್ನು ದಿಟ್ಟಿಸುವ ಪೂರ್ವಾಗ್ರಹಿತ ಪುರುಷನೋಟವನ್ನು ಕುರಿತದ್ದು. ಈಕೆಯ ಇತರೆ ಪ್ರಮುಖ ಕೃತಿಗಳು :
'ಯುವರ್ ಬಾಡಿ ಈಸ್ ಬ್ಯಾಟ್ಲ್ ಗ್ರೌಂಡ್',
'ಯು ಆರ್ ನಾಟ್ ಯುವರ್ಸೆಲ್ಫ್',
'ಇಟ್ಸ್ ಸ್ಮಾಲ್ ವರ್ಲ್ಡ್, ಬಟ್ ನಾಟ್ ಇಫ್ ಯು ವಾಂಟ್ ಟು ಕ್ಲೀನ್ ಇಟ್',
'ಟೆಲ್ ಅಸ್ ಸಮ್ ಥಿಂಗ್ ವಿ ಡೋಂಟ್ ನೊ'
ಲೈಂಗಿಕತೆ, ಲಿಂಗ ತಾರತಮ್ಯ, ಹಿಂಸೆ, ರಾಜಕೀಯ, ಸಾಮಾಜಿಕ ಸಮಸ್ಯೆಗಳನ್ನು ಪ್ರಖರ ವಿಮರ್ಶಾತ್ಮಕ ಬರಹ-ದೃಶ್ಯಗಳ ಮೂಲಕ ಈಕೆಯ ಕೃತಿಗಳು ಚರ್ಚೆಗೊಳಪಡಿಸುತ್ತವೆ.
1985 ರಲ್ಲಿ ನ್ಯೂಯಾರ್ಕ್ ನಲ್ಲಿ ರೂಪಿತಗೊಂಡ 'ಗೆರಿಲ್ಲ ಗರ್ಲ್ಸ್' ಎಂಬ ಸಂಘಟನೆ ಸ್ತ್ರೀವಾದಿ ಚಿಂತಕರು, ಕಲಾವಿದರು, ಲೇಖಕರು, ನಾಟಕಕಾರರನ್ನು ಒಳಗೊಂಡಿದೆ. ಗೊರಿಲ್ಲ ಮುಖವಾಡ ಧರಿಸಿ ಕಾಣಿಸಿಕೊಳ್ಳುವ ಇವರು ತಮ್ಮನ್ನು ವೈಯಕ್ತಿಕವಾಗಿ ಗುರ್ತಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಪ್ರಚಲಿತ ಸಮಸ್ಯೆಗಳತ್ತ ಗಮನ ಸೆಳೆಯುವ ಕುರಿತು ಆಸಕ್ತರು. ಇವರು ತಮ್ಮನ್ನು ರಾಬಿನ್ ಹುಡ್, ಬ್ಯಾಟ್ ಮ್ಯಾನ್ ಥರದ ಜನಾನುರಾಗಿ ಸುಧಾರಕರಿಗೆ ಹೋಲಿಸಿಕೊಳ್ಳುತ್ತಾರೆ. ಹಾಸ್ಯ ಮತ್ತು ನಿಗೂಢತೆಯ ಮೂಲಕ ಜನರನ್ನು ಸುಲಭವಾಗಿ ಸೆಳೆಯುವ ಜಾಣ ತಂತ್ರ ಇವರದು. ಹೆಣ್ಣನ್ನು ಸೌಂದರ್ಯಕ್ಕೆ ಪರ್ಯಾಯವಾಗಿ ಪರಿಗಣಿಸುವ ಮತ್ತು ಮೂಲಕ ಆಕೆಯನ್ನು ಭೋಗಸಾಮಗ್ರಿಯ ಮಟ್ಟಕ್ಕೆ ಇಳಿಸುವ ಮನೋಸ್ಥಿತಿಯನ್ನು ಗೊರಿಲ್ಲ ಮುಖವಾಡ ಧರಿಸಿ ವ್ಯಂಗ್ಯ ಮಾಡುತ್ತಾರೆ.

By Guerilla Girls
ಪ್ರಸಿದ್ಧ ನಿಯೋಕ್ಲಾಸಿಕಲ್ ಕಲಾವಿದ ಡೊಮಿನಿಕ್ ಇಂಗ್ರೆಯ 'ಗ್ರ್ಯಾಂಡ್ ಒಡಲಿಸ್ಕ್' ಎಂಬ ಕೃತಿಯಲ್ಲಿರುವ ನಗ್ನಸ್ತ್ರೀ ಚಿತ್ರಕ್ಕೆ ಗೊರಿಲ್ಲ ಮುಖವಾಡ ಹಾಕಿದ ಹಳದಿ ಹಿನ್ನೆಲೆಯ ಪೋಸ್ಟರ್ ಹೀಗೆ ಹೇಳುತ್ತದೆ :
'Do women Have to be naked to get into U.S. Museums?'(1989)- (ಮೆಟ್ರೊಪಾಲಿಟನ್ ಮ್ಯೂಸಿಯಂನಲ್ಲಿ ಜಾಗ ಪಡೆಯಲು ಸ್ತ್ರೀಯರು ನಗ್ನರಾಗಲೇಬೇಕೆ?)
ನವ್ಯಕಲಾ ವಿಭಾಗದಲ್ಲಿರುವ ಕಲಾವಿದರಲ್ಲಿ ಮಹಿಳೆಯರು ಶೇಕಡಾ ಐದಕ್ಕಿಂತ ಕಡಿಮೆ. ಆದರೆ ಶೇಕಡಾ ಎಂಬತ್ತೈದರಷ್ಟು ನಗ್ನಚಿತ್ರಗಳು ಮಹಿಳೆಯರವೇ ಎಂಬ ಕುರಿತಾಗಿಯೂ ಪೋಸ್ಟರ್ ಗಮನ ಸೆಳೆಯುತ್ತದೆ.
ಜಗತ್ತಿನ ಎಲ್ಲೆಡೆ ಮ್ಯೂಸಿಯಂಗಳಲ್ಲಿ ಮಹಿಳೆಯರನ್ನು ಬಂಧಿಸಿ, ಕಣ್ಮರೆಮಾಡಿ ಇಡಲಾಗಿದೆ. ಮ್ಯೂಸಿಯಂಗಳು ಹೆಚ್ಚು ಮಹಿಳಾ ಕಲಾವಿದರ ಕೃತಿ ಪ್ರದರ್ಶಿಸುವಂತೆ ಒತ್ತಾಯಿಸುತ್ತೇವೆ ಎಂಬುದು ಮತ್ತೊಂದು ಪೋಸ್ಟರ್ನಲ್ಲಿನ ಹೇಳಿಕೆ. ಪ್ರಸಿದ್ಧ ಕಲಾವಿದೆಯರ ಭಾವಚಿತ್ರಗಳ ಕೊಲ್ಯಾಜ್ ಮಾಡಿ ಅವರನ್ನು ಕಂಬಿಗಳ ಹಿಂದೆ ಬಂಧಿಸಿರುವಂತೆ ತೋರಿಸಲಾಗಿದೆ.

'ಗೆರಿಲ್ಲಾ ಗರ್ಲ್ಸ್' ಸಂಘಟನೆ 1989 ರಲ್ಲಿ ಹೊರಡಿಸಿರುವ ಪಟ್ಟಿ ಹೀಗಿದೆ :

ಸ್ತ್ರೀ ಕಲಾವಿದೆಗೆ ಇರುವ ಅನುಕೂಲಗಳು :

- ಯಶಸ್ಸಿನ ಒತ್ತಡವಿಲ್ಲದೆ ಕೆಲಸ ಮಾಡುವುದು.
- ಪುರುಷರ ಕಲಾಕೃತಿಗಳೊಂದಿಗೆ ತಮ್ಮ ಕೃತಿಗಳನ್ನು ಪ್ರದರ್ಶಿಸುವ ಗೋಜಿಗೆ ಸಿಲುಕದಿರುವುದು.
- ತನಗೆ ಎಂಬತ್ತು ವರ್ಷ ತುಂಬಿದ ನಂತರವೇ ವೃತ್ತಿಜೀವನ ಸುಧಾರಿಸಬಹುದೆಂಬ ಅರಿವು ಪಡೆದಿರುವುದು.
- ರಚಿಸುವ ಎಲ್ಲಾ ಕೃತಿಗಳೂ 'ಮಹಿಳೆಯಿಂದ ರಚಿತವಾದುದು' ಎಂಬ ಹಣೆಪಟ್ಟಿಗೆ ಒಳಗಾಗುವುದು.
- ಮಾತೃತ್ವ ಮತ್ತು ವೃತ್ತಿಜೀವನ - ಎರಡರಲ್ಲಿ ಒಂದನ್ನು ಆಯ್ದುಕೊಳ್ಳುವ ಅವಕಾಶ ಒದಗುವುದು.
- 'ಸಿಗಾರ್' ಸೇದುತ್ತ, ಇಟ್ಯಾಲಿಯನ್ ಸೂಟ್ ಧರಿಸಿ ಚಿತ್ರರಚಿಸುವ ಬಿಕ್ಕಟ್ಟು ಇಲ್ಲದಿರುವುದು.
- 'ಜೀನಿಯಸ್' ಎಂದು ಕರೆಸಿಕೊಳ್ಳುವ ಮುಜುಗರಕ್ಕೊಳಗಾಗುವ ಸಂದರ್ಭ ಒದಗದಿರುವುದು.
- ಮಕ್ಕಳನ್ನು ಪಾಲಿಸುವ ಜವಾಬ್ದಾರಿಯ ನಡುವೆ ಸಾಕಷ್ಟು 'ಬಿಡುವು' ಪಡೆಯುವ ಅವಕಾಶವಿರುವುದು.

ಲಿಂಗತಾರತಮ್ಯ ಮತ್ತು ಸ್ತ್ರೀಶೋಷಣೆಯ ಕುರಿತ ಸಮಸ್ಯೆಗಳನ್ನು ತಮ್ಮದೇ ರೀತಿಯಲ್ಲಿ ವಿಡಂಬನಾತ್ಮಕವಾಗಿ ಹಾಗೂ ಅಷ್ಟೇ ಮೊನಚಾಗಿ ಬಿಂಬಿಸುವ ಮಾತುಗಳು ಶೋಷಿತರ ಹೆಪ್ಪುಗಟ್ಟಿದ ನೋವು ಮತ್ತು ಅತಿಗಂಭೀರ ಹತಾಶೆಯನ್ನು ಪ್ರತಿನಿಧಿಸುತ್ತವೆ.
ಸ್ವಾನುಕಂಪ, ಬಿಗುಮಾನ ಮತ್ತು ಮೌನದ ಮೊರೆಹೋಗಿದ್ದ ಮಹಿಳೆ ನಿಧಾನವಾಗಿಯಾದರೂ ಹೆಚ್ಚು ತೀಕ್ಷ್ಣ, ದಿಟ್ಟ ಮತ್ತು ಸ್ಪಷ್ಟವಾದ ಅಭಿವ್ಯಕ್ತಿಗಳಿಸಿಕೊಂಡಿರುವುದನ್ನು ಗಮನಿಸಬೇಕು. ತನ್ನನ್ನು ಸಮಾಜದ ವಿವಿಧ ಸ್ತರಗಳಲ್ಲಿ ಅನನ್ಯವಾಗಿ ಗುರುತಿಸಿಕೊಳ್ಳುವ ಜೊತೆಗೆ ತನ್ನನ್ನೇ ತಾನು ವಿಡಂಬನೆಗೆ ಒಳಗು ಮಾಡಿಕೊಳ್ಳುವ ಪ್ರಬುದ್ಧತೆಯ ಆರೋಗ್ಯಕರ ಒಳನೋಟ ದಕ್ಕಿರುವುದು ಮುಂದಿನ ಸವಾಲುಗಳನ್ನು ಹಗುರಗೊಳಿಸಬಲ್ಲದು.

Barbara Kruger - 'Your body is a battle ground'