Wednesday 7 August 2013

ನಿರಂತರ ಜ್ವಲಿಸುವ 'ಫ಼್ಲೇಮಿಂಗ್ ಜೂನ್'


'ಫ಼್ಲೇಮಿಂಗ್ ಜೂನ್' (ವಿವರ)



        'ಸ್ಥಾಪಿತ ಆದರ್ಶ' ಬಿಂಬಿಸುವ ಮಾಧ್ಯಮವಾಗಿ, ಬಹುಕೃತ ದೃಷ್ಟಿಕೋನದ 'ಸೌಂದರ್ಯ'ದ ಪರಿಕಲ್ಪನೆಯಾಗಿ, ವೈಭೋಗ ಜೀವನದ ಅವಿಭಾಜ್ಯ ಅಂಗವಾಗಿ ಚಿತ್ರಕಲೆಯನ್ನು ಪರಿಗಣಿಸುವುದಾದರೆ, ಅಂಥ ದೃಷ್ಟಿಗೆ ಇಷ್ಟವಾಗಬಹುದಾದ ಚಿತ್ರ 'ಫ್ಲೇಮಿಂಗ್ ಜೂನ್'. ಇದು 'ವಿಕ್ಟೋರಿಯನ್ ನಿಯೋಕ್ಲಾಸಿಸಿಸಂ' ಶೈಲಿಯ ಉತ್ತಮ ಪ್ರಾತಿನಿಧಿಕ ಚಿತ್ರಗಳಲ್ಲೊಂದು. 'ಕ್ಲಾಸಿಸಿಸಂ' ಎಂಬ ಹೆಸರೇ ಸೂಚಿಸುವಂತೆ, ಇದು ಅತ್ಯುತ್ತಮ ಗುಣಮಟ್ಟ, ಉನ್ನತ ಆದರ್ಶ, ಅನನ್ಯತೆಯ ಪರಮೋಚ್ಛ ಸಂಕೇತವನ್ನು ನಿರೂಪಿಸುವ ಶೈಲಿ/ಪಂಥ. ಪಾಶ್ಚಿಮಾತ್ಯ ಸಾಂಸ್ಕೃತಿಕ ಚರಿತ್ರೆಯ ಪರಿಭಾಷೆಯಲ್ಲಿ 'ಕ್ಲಾಸಿಕ್' ಎಂಬುದು ಮೂಲತಃ ಗ್ರೀಕೋರೋಮನ್ ನಾಗರಿಕತೆಯ ಉಚ್ಚ್ರಾಯಸ್ಥಿತಿಯನ್ನು ಸೂಚಿಸುವ ಪದ. ಅಂತೆಯೇ ಯುರೋಪ್ ರಾಷ್ಟ್ರಗಳ ಸಾಂಸ್ಕೃತಿಕ ಚರಿತ್ರೆಯು ಗ್ರೀಕೋರೋಮನ್ ಅಂತಃಸತ್ವದ ಪ್ರಭಾವಕ್ಕೊಳಗಾಗಿದ್ದ ಕಾಲಘಟ್ಟವನ್ನು 'ನಿಯೋಕ್ಲಾಸಿಕಲ್ ಕಾಲ' ಎನ್ನಲಾಗುತ್ತದೆ. ಈ ಹಿನ್ನೆಲೆಯಲ್ಲಿ 'ಆದರ್ಶ ಸೌಂದರ್ಯದ' ಜಾಡುಹಿಡಿದ ಚಿತ್ರಕಲಾಶೈಲಿ 'ನಿಯೋಕ್ಲಾಸಿಸಿಸಂ'. ದೇವಾನುದೇವತೆಗಳನ್ನು ಪ್ರತಿನಿಧಿಸುವ ಧಾರ್ಮಿಕ, ಪೌರಾಣಿಕ ಕಥಾವಸ್ತು, ವೈಭವೋಪೇತ ಜೀವನಶೈಲಿ, ಆಕರ್ಷಕ ಮತ್ತು ಅಲಂಕಾರಿಕ ದೃಶ್ಯನಿರೂಪಣೆ - ಈ ಶೈಲಿಯ ಮೂಲಾಂಶಗಳು.



    ಇಂಥ ಹಲವು ಹಿನ್ನೆಲೆಯನ್ನೊಳಗೊಂಡು ಉಸಿರುಪಡೆದ ಚಿತ್ರ 'ಫ್ಲೇಮಿಂಗ್ ಜೂನ್'. ಅತ್ಯಂತ ಸುಸಜ್ಜಿತ, ಆಧುನಿಕ ಒಳಾಂಗಣದಲ್ಲಿ ಅಷ್ಟೇ ನಾಟಕೀಯ ಭಂಗಿಯಲ್ಲಿ ಮಲಗಿರುವ ಹೆಂಗಸು. ಸುಮಾರು ಮೂರು ಮುಕ್ಕಾಲು ಅಡಿ ಉದ್ದಳತೆಯ ಈ ತೈಲವರ್ಣಚಿತ್ರ ಬಹುಪಾಲು ಅಲಂಕಾರಿಕ ಉದ್ದೇಶಕ್ಕಾಗಿಯೇ ರಚಿಸಲಾಗಿದೆ ಅನಿಸಲು ಸಾಕಷ್ಟು ಕಾರಣಗಳಿವೆ. ಕ್ಯಾನ್ವಾಸಿನ ನಡೂಮಧ್ಯದ ಸಂಯೋಜನೆ, ಅತಿ ಅನಿಸುವಷ್ಟು ಎದ್ದುಕಾಣುವ ಕಡುಕಿತ್ತಳೆ ಬಣ್ಣದ ಬಳಕೆ, ವರ್ಣಸಂಯೋಜನೆಯ ದೃಷ್ಟಿಯಲ್ಲಿ ಇಡಿಯಾಗಿ ನೋಡುವುದಾದರೆ, ಇದು ಒಂದು ಆಕರ್ಷಕ ಆಕಾರ ಮತ್ತು
ಬಣ್ಣದ ಹೂವಿನಂತೆ ಕಾಣುವ ಹೆಣ್ಣಿನ ಚಿತ್ರಣ!

      ಬಲಗಾಲಿನ ಬೆರಳುಗಳನ್ನು ನೆಲಕ್ಕೆ ತಾಕಿದಂತೆ ಊರಿ, ಎಡಗಾಲು ಮಡಚಿಕೊಂಡ ಭಂಗಿಯಲ್ಲಿ ನಿದ್ದೆಹೋಗಿರುವ ಈಕೆ ಪ್ರಜ್ಞಾಪೂರ್ವಕವಾಗಿ ಪ್ರಚೋದನಕಾರಿ ಭಂಗಿಯಲ್ಲಿರುವಂತೆ ಚಿತ್ರಿಸಲಾಗಿದೆ. ಅಂಗಸೌಷ್ಟವವನ್ನು ಮತ್ತಷ್ಟು ಎದ್ದುಕಾಣುವಂತೆ ತೋರಿಸಲಿಕ್ಕಾಗಿಯೇ ಮೈತುಂಬ ಬಟ್ಟೆ ಹೊದಿಸಿದಂತೆ ತೋರುತ್ತದೆ! ಮೈಗೆ ಅಂಟಿಕೊಂಡಂತಿರುವ ಪಾರದರ್ಶಕ ಕಿತ್ತಳೆಬಣ್ಣದ ತೆಳ್ಳನೆಯ ಬಟ್ಟೆ ಮೈಬಣ್ಣವನ್ನು ಮತ್ತಷ್ಟು ಉಜ್ವಲಗೊಳಿಸಿ ಚಿನ್ನದ ಮೆರುಗಿನಂಥ, ಬೆಚ್ಚನೆ ಬೆಂಕಿಯ ಜ್ವಾಲೆಯಂಥ ಆವರಣ ಸೃಷ್ಟಿಸುತ್ತದೆ. ಶಾರೀರಿಕ ಪ್ರಮಾಣಬದ್ಧತೆಯ ಬಗೆಗಾಗಲೀ, ಬಟ್ಟೆಯ ಸ್ವಾಭಾವಿಕ ಚಿತ್ರಣದ ಬಗೆಗಾಗಲೀ ಹೆಚ್ಚು ತಲೆಕೆಡಿಸಿಕೊಳ್ಳದ ಕಲಾವಿದ, ಚಿತ್ರವನ್ನು ಅತಿರಂಜಿತಗೊಳಿಸಿ, ಒಟ್ಟಾರೆ ಅಲಂಕಾರಿಕ ಕೃತಿಯನ್ನಾಗಿಸುವತ್ತ ಆಸಕ್ತನಾದಂತಿದೆ. ಇಲ್ಲಿ ತದ್ರೂಪಿನ ನಿರೂಪಣೆಗಿಂತ ಹೆಚ್ಚಾಗಿ ಅತಿಶಯದ ಚಿತ್ರಣಕ್ಕೆ ಪ್ರಾಶಸ್ತ್ಯ ಸಿಕ್ಕಿದೆ. ಇಂಥ ಹಲವು ಕಾರಣಗಳಿಂದಾಗಿ, ಈ ಚಿತ್ರದ ಹೆಂಗಸು ಅತಿಮಾನುಷ ಅಥವಾ ಕೃತ್ರಿಮ ಅಂತಲೂ ಅನಿಸಿದರೆ ಆಶ್ಚರ್ಯವಿಲ್ಲ!


     ಹತ್ತೊಂಬತ್ತನೆಯ ಶತಮಾನದ ವೈಭೋಗದ, ಶ್ರೀಮಂತಿಕೆಯ, ಕೊಳ್ಳುಬಾಕ ಸಂಸ್ಕೃತಿಯ 'ವಿಕ್ಟೋರಿಯನ್ ಯುಗ'ದ (ಕ್ರಿ.ಶ. 1837 - ಕ್ರಿ.ಶ. 1901) ಅವಧಿಯಲ್ಲಿ ಈ ಚಿತ್ರ ರಚನೆಯಾದುದು ಎಂಬುದನ್ನು ಇಲ್ಲಿ ನೆನಪಿಡಬೇಕು. ವೈಜ್ಞಾನಿಕ, ತಾಂತ್ರಿಕ- ಕೈಗಾರಿಕಾ ಕ್ರಾಂತಿಯ ಹಿನ್ನೆಲೆ, ಕಲೆ, ಸಾಹಿತ್ಯ, ಕ್ರೀಡೆ, ರಂಗಭೂಮಿ - ಒಟ್ಟಾರೆ ಮನರಂಜನಾತ್ಮಕ ಚಟುವಟಿಕೆಗಳ ಬಗೆಗಿನ ಒಲವು, ಜೊತೆಗೆ ಶ್ರೀಮಂತ ಮಧ್ಯಮ ವರ್ಗಗಳೂ ಕಲಾಕೃತಿಗಳನ್ನು ಕೊಂಡುಕೊಳ್ಳುವ ಅಭಿರುಚಿ ಮತ್ತು ಉಮೇದು ಗಳಿಸಿಕೊಂಡ ಕಾಲ ಅದು. ಈ ಒಟ್ಟಾರೆ ಕೊಳ್ಳುಬಾಕ ಮನಸ್ಥಿತಿಗೆ ಪೂರಕವಾಗಿ ರಚನೆಯಾಗುತ್ತಿದ್ದುದು ಭಾವೋತ್ತೇಜನಗೊಳಿಸುವಂಥ ಮತ್ತು ಬಳಕೆಗೆ ಉದ್ದೀಪಿಸುವಂಥ ಚಿತ್ರಗಳು. ಅಂದರೆ, 'ಸೌಂದರ್ಯ' ಮತ್ತು 'ಸೇವನೆಗೆ ಅರ್ಹ' ವಸ್ತುಗಳು ಈ ಚಿತ್ರಗಳ ಮೂಲ ಆಕರ. ಇಲ್ಲಿ ಅತಿಮುಖ್ಯ ವಸ್ತುವಿಷಯ - ಹೆಣ್ಣು! ಪುರುಷಕೇಂದ್ರಿತ ಸಮಾಜದ ಪುರುಷಕಲಾವಿದರಿಂದ ಪುರುಷದೃಷ್ಟಿಗಾಗಿಯೇ ರಚನೆಗೊಳ್ಳುತ್ತಿದ್ದ ಕಲಾಕೃತಿಗಳಿವು ಎಂಬುದನ್ನು ಮರೆಯುವಂತಿಲ್ಲ! ಇದಕ್ಕೆ ರೂಪದರ್ಶಿ ಮಾತ್ರ ಮಹಿಳೆಯಾಗಿರಬೇಕಾದ್ದು ಆ ಮಟ್ಟಿಗೆ ಸಹಜವೇ!

ಫ಼್ರೆಡರಿಕ್ ಲೀಟನ್

      ಅಂದಹಾಗೆ, 'ಫ್ಲೇಮಿಂಗ್ ಜೂನ್' ಕಲಾಕೃತಿಯ ಕರ್ತೃ- ಫ್ರೆಡರಿಕ್ ಲೀಟನ್ ( ಕ್ರಿ.ಶ. 1830 -ಕ್ರಿ.ಶ.1896). ಇಂಗ್ಲೆಂಡಿನ ಶ್ರೀಮಂತ ವೈದ್ಯ ಕುಟುಂಬದ ಹಿನ್ನೆಲೆಯ ಈತ ಆ ಕಾಲದ ಅತ್ಯಂತ ಯಶಸ್ವಿ, ಪ್ರಭಾವಶಾಲಿ ಕಲಾವಿದ ಮತ್ತು ಶಿಲ್ಪಿ. ಲಂಡನ್ ರಾಯಲ್ ಅಕಾಡೆಮಿಯ ಅಧ್ಯಕ್ಷನೂ ಆಗಿದ್ದವನು. 'ಸಮ್ಮರ್ ಸ್ಲಂಬರ್' ಎಂಬ ಕಲಾಕೃತಿಗಾಗಿ ನಿದ್ರಿಸುವ ಹೆಂಗಸಿನ ಚಿತ್ರದ ಕರಡುಪ್ರತಿಗಳನ್ನು ರಚಿಸುತ್ತಿದ್ದ ಲೀಟನ್ ಗೆ ಆ ಕರಡನ್ನೇ ಪ್ರತ್ಯೇಕ ಕಲಾಕೃತಿ ಮಾಡಬೇಕೆನಿಸಿದ್ದರಿಂದ ಹುಟ್ಟಿದ ಕೃತಿ -'ಫ್ಲೇಮಿಂಗ್ ಜೂನ್'. ಆತ ತೀರಿಹೋಗುವ ಹಿಂದಿನ ವರ್ಷ (ಕ್ರಿ.ಶ.1895), ಅರವತ್ನಾಲ್ಕರ ಇಳಿವಯಸ್ಸಿನಲ್ಲಿ ರಚಿಸಿದ ಚಿತ್ರ ಇದು.

'ಫ಼್ಲೇಮಿಂಗ್ ಜೂನ್' (ವಿವರ)

      ಮೇಲ್ನೋಟಕ್ಕೆ ಕೇವಲ ಅಲಂಕಾರಿಕ ಕಲಾಕೃತಿಯಂತೆ ಕಂಡುಬರುವ ಈ ಚಿತ್ರದ ಶೀರ್ಷಿಕೆಯ ಜಾಡುಹಿಡಿದು ಹೊರಟರೆ, ಆಸಕ್ತಿಕರ ವಿಷಯಗಳು ಕಾಣಿಸತೊಡಗುತ್ತವೆ. ಈ ಮೊದಲು ಹೇಳಿದಂತೆ, ಈ ಚಿತ್ರದ ಹೆಂಗಸು ಆಧುನಿಕ ಅಥವಾ ದಿನನಿತ್ಯದ ಸಾಮಾನ್ಯ ಮಹಿಳೆಗಿಂತ ಹೆಚ್ಚಾಗಿ ಪೌರಾಣಿಕ ದೇವತೆಯನ್ನು ಹೋಲುವ ಸಾಧ್ಯತೆಯೇ ನಿಚ್ಚಳವಾಗಿದೆ. ಈಕೆಯನ್ನು ಸೌಂದರ್ಯ, ಪ್ರೇಮ, ಕಾಮ ಮತ್ತು ಸಮೃದ್ಧಿಯ ಸಂಕೇತವಾದ ರೋಮನ್ ದೇವತೆ 'ವೀನಸ್'ಗೆ ಹೋಲಿಸುವುದೂ ಉಂಟು. ಹಾಗೆಯೇ ಜೂನ್ ತಿಂಗಳ ಜೊತೆ ತಾಳೆ ಹಾಕುವುದಾದರೆ, ಗ್ರೀಕ್ ದೇವತೆ 'ಪರ್ಸೆಫನಿ'ಯನ್ನು ಇಲ್ಲಿ ನೆನಪಿಸಿಕೊಳ್ಳುವುದು ಅಸಂಗತವಾಗಲಾರದು. ಸುಗ್ಗಿ, ಹಣ್ಣಿನಬೀಜಗಳು ಮತ್ತು ಕತ್ತಲ ಭೂಗರ್ಭವನ್ನು ಪ್ರತಿನಿಧಿಸುವ ದೇವತೆ ಈಕೆ.  ಅಲ್ಲದೆ, ನಿದ್ರೆ ಮತ್ತು ಸಾವಿನ ನಡುವೆ ಸಂಬಂಧ ಕಲ್ಪಿಸುತ್ತದೆಂದು ನಂಬಲಾಗಿರುವ 'ವಿಷಪೂರಿತ ಓಲಿಯಾಂಡರ್' ಗಿಡದ ಚಿತ್ರಣವನ್ನು ಬಲಮೇಲ್ಭಾಗದಲ್ಲಿ ಕಾಣಬಹುದು. ಇಂಥ ಹಲವು ಗ್ರಹಿಕೆಗಳು ಈ ಚಿತ್ರಕ್ಕೆ ನಿರಂತರ ಚಲನೆಯನ್ನು ತಂದುಕೊಡುತ್ತವೆ.

       ('ಪ್ರಜಾವಾಣಿ' ವಿಶೇಷ ಸಂಚಿಕೆಯಲ್ಲಿ ಪ್ರಕಟಿತ.)

'ಫ಼್ಲೇಮಿಂಗ್ ಜೂನ್'