Friday 4 November 2011

ವ್ಯಾನ್ಗೋನ ಸೂರ್ಯಕಾಂತಿಗಳು


   ವಿನ್ಸೆಂಟ್ ವ್ಯಾನ್ಗೊ  -  ಸಾರ್ವಕಾಲಿಕ ಜನಪ್ರಿಯತೆ ಪಡೆದ, ಬಹುಚರ್ಚಿತ ಕಲಾವಿದರಲ್ಲಿ ಮೊದಲ ಹೆಸರು. ಕಿತ್ತು ತಿನ್ನುವ ಅಸ್ಥಿರತೆ, ತನ್ನನ್ನೇ ಮರೆಸುವ ಭಾವತೀವ್ರತೆಯ ಜೊತೆಗೆ ತಾನು ಕಂಡ ಎಲ್ಲವನ್ನೂ ಉತ್ಕಟವಾಗಿ ಬದುಕಿದವನು,  ಬದುಕಿಸಿದವನು ಈ  ಡಚ್ ಕಲಾವಿದ (1853-1890).
   ಅಂತೆಯೇ ಆತನ ಚಿತ್ರಗಳ ಕಣಕಣದಲ್ಲೂ ಅಸಾಧಾರಣ ಜೀವಂತಿಕೆ ನಿರಂತರವಾಗಿ ಸ್ಫೋಟಗೊಳ್ಳುತ್ತದೆ...ಚಿತ್ರಗಳ ಸುರುಳಿಗಳು ನಮ್ಮನ್ನು ಮತ್ತೆ ಬಿಡದಂತೆ ಸೆಳೆದುಕೊಳ್ಳುತ್ತವೆ....ಕ್ಯಾನ್ವಾಸಿನ ಶುದ್ಧ ಹಳದಿ, ನೀಲಿ, ಕಪ್ಪು, ಕೆಂಪುಗಳು ನಮ್ಮ ಕಣ್ಣುಗಳಲ್ಲಿ ನಿಲ್ಲಲಾರದೆ ಮುಖ, ಮೈಗೆ ಮೆತ್ತಿಕೊಳ್ಳುತ್ತವೆ...

   ಫ್ರಾನ್ಸಿನ  ಆರ್ಲ್ಸ್ ನಲ್ಲಿ ಕಳೆದ ಕೊನೆದಿನಗಳಲ್ಲಿ ವ್ಯಾನ್ಗೋನಿಂದ ರಚಿತವಾದ ಅದ್ಭುತ ಸರಣಿ ಚಿತ್ರ - 'ಸೂರ್ಯಕಾಂತಿಗಳು'    (1887-89). ಲೋಕದ ಅಷ್ಟೂ ಚೈತನ್ಯ ಈ ಹೂಗಳಲ್ಲೇ ಅಡಗಿ ಚಿಮ್ಮುತ್ತಿವೆ!  ತನ್ನನ್ನೂ, ಜನರನ್ನೂ, ಗಿಡ, ಮರ, ಹೂವು, ಸೂರ್ಯ,...ಲೋಕದ ಪ್ರತಿಯೊಂದನ್ನೂ ಒಂದೇ ತೀವ್ರತೆಯಲ್ಲಿ ಕಂಡು, ಉತ್ಕಂಠತೆಯಲ್ಲಿ ಅನುಭವಿಸಿದ ವ್ಯಾನ್ಗೊ,  ತನ್ನ ನೋವು, ಅಸ್ಥಿರತೆ, ಒಂಟಿತನ, ತೀವ್ರ ಪ್ರೀತಿ, ನಿಷ್ಠುರತೆ, ನಿರಾಸೆ...ಎಲ್ಲವುಗಳಲ್ಲಿ ಅದ್ದಿ ತೆಗೆದ ಬಣ್ಣಗಳಲ್ಲಿ ಜೀವಂತೆಕೆಗೆ ಹೊಸ ಪರಿಭಾಷೆ ಒದಗಿಸಿದ ಅದ್ಭುತ ಕಲಾವಿದ .

ವ್ಯಾನ್ಗೋನ 'ಸೂರ್ಯಕಾಂತಿಗಳು' ನಮ್ಮ ಕವಿ ಎಸ್. ಮಂಜುನಾಥ್ ಅವರಿಗೆ ಕಂಡಿದ್ದು ಹೀಗೆ...


ವ್ಯಾನ್ಗೋನ ಸೂರ್ಯಕಾಂತಿಗಳು

ಕಣ್ಣ ತುಂಬಿದ್ದ ಹಲವು ನೋಟಗಳ ಕಸ
ಉರಿದುಹೋದಂತಾಯಿತ್ತು
ಆ ಹೂವುಗಳ ಬಣ್ಣದ ಮಿಂಚು ತಾಗಿ
ಶ್ರೇಷ್ಠ ವ್ಯಾನ್ಗೋನ ಚಿತ್ರಗಳ ಸಂಪುಟದಲ್ಲಿದ್ದ ಸೂರ್ಯಕಾಂತಿಗಳ ಚಿತ್ರ
ಕಾಲದ ಹೃದಯದಂತೆ ಮಿಡಿಯುತ್ತಿತ್ತು ನಮ್ಮ ಕ್ಷಣಗಳನ್ನು
ಕಂಡಷ್ಟೂ ನಿಮಿಷಗಳ ನಮಗೆ ನೀಡುತ್ತಿತ್ತು
ಉಳಿಸಿಕೊಂಡವು ನನ್ನನ್ನು ಆ ಹೂವುಗಳು




ಉಕ್ಕಿ ಬರುವ ಲಾವಾರಸದ ಸುಳಿಗಳಂತೆ ಸುತ್ತಿದ್ದವು
ಎಲ್ಲ; ನಡೆದ ದಾರಿ ಬದಿಯ ಪೈನ್ ಮರ ಸಾಲು ಪೊದೆಗಳು
ನೆರಳು ಮತ್ತು ಆಕಾಶವೂ
ಘೋರ ವ್ಯಗ್ರತೆಯಲ್ಲಿ ನರಳಿದ ಉಗ್ರ ಆತ್ಮದ್ವೇಷಿಗೆ
ತನ್ನ ಕೋಣೆಯೊಳಗಡಿಯಿಟ್ಟದ್ದೇ ಬಡಿದಿತ್ತು
ಹೂದಾನಿಯೊಳಗಿದ್ದ ಜ್ವಾಲಾಮುಖಿಯ ಸ್ತಬ್ಧಸ್ಫೋಟ
ದಂಡಿಸಲು ಎರಗಲಿದ್ದ ಸಿಡಿಲುಗಳಂತೆ
ಡಿಕ್ಕಿ ಹೊಡೆದು ಉರಿದುಹೋಗಲಿದ್ದ ಸೂರ್ಯರುಗಳಂತೆ
ಬಿರಿದು ದಳವುದುರುವುದರಲ್ಲಿದ್ದ ಎದ್ದಿದ್ದ ಬಾಗಿದ್ದ
ಹೂವುಗಳು ದೇಟುಗಳೂ ಬೋಳಾಗಿದ್ದ ದಿಂಡುಗಳೂ
ಕಂಡ ವ್ಯಾನ್ಗೋ ಅವುಗಳನ್ನು
ಪ್ರಳಯವಾಗುವುದರಲ್ಲಿ ಇದ್ದ ತನ್ನನ್ನು



ಮೆಲುಗಾಳಿಯಲ್ಲೀಗ ಮೆಲ್ಲ ಹೊರಳಾಡುತ್ತದೆ ಅದೇ
ಹೊಲದ ನೆತ್ತಿ ಮೇಲೆ
ಬೆಳಗುವ ಹಳದೀ ಮೊಗಗಳ ತೂಗುತ್ತ ಮೂಡುತ್ತದೆ
ಸಂಜೆವಿಹಾರಕ್ಕೆ ಬಂದವನಿಗೆ
ಚಿರಂತನದ ಫಲವತ್ತಾದ ಮಣ್ಣು ಎತ್ತಿ ತೋರಿದ ಒಂದು
ಮೊಗವಷ್ಟೇ-ಮಹಾನ್ ವ್ಯಾನ್ಗೋ
ಭಾವಿಸುತ್ತಿರುವೆ ಕೃತಙ್ಞತೆಯೊಂದಿಗೆ ಇಲ್ಲಿ
ಈ ಹೊಲದ ಅಸಂಖ್ಯ ಸಂಗಾತಿಗಳ ನಡುವೆ ನೀನೊಬ್ಬನಾಗಿ
ಶೂನ್ಯದ ಒಳತಿರುಳ ದೀರ್ಘಸುಶುಪ್ತಿಯಲಿ ಮುಳುಗಿರುವಂತೆ ನಿನ್ನನ್ನೂ


                                                           - ಎಸ್. ಮಂಜುನಾಥ್



5 comments:

  1. nanagu inta ondu soorya kaantiya haadi nanna beraige hantuva haage chitra bidisikodi kalaavidare!!

    ReplyDelete
  2. ಖಾಲಿ ಕೋಣೆಯ ಒ೦ಟಿ ಕುರ್ಚಿ..............
    _____________________

    ಹನಿಪ್ರೀತಿಯ ಹುಡುಕುತ್ತಾ ಒದ್ದಾಡಿದ ಈ ಜೀವ...

    ಎಲ್ಲೆಲ್ಲಾ ಹುಡುಕುತ್ತಾ ಅಲೆಯಲಿಲ್ಲಾ....

    ಕ್ಯಾನ್ವಾಸಿನ ಮೇಲೆ ಬಣ್ಣ ತು೦ಬುತ್ತಾ

    ಎಲ್ಲ ಮರೆಯಲು ಯತ್ನಿಸಿದ್ದೂ

    ವಿಫಲವಾಗಿದ್ದು ಏಕೆ...

    ತಾ ಬರೆದ ಚಿತ್ರಗಳು ನಡುಗುವ ಚಳಿಗಾಲಕ್ಕೆ

    ಬೆ೦ಕಿಯಲಿ ಹೋಮವಾಗಿ ಮೈ ಬೆಚ್ಚಗಾಗಿಸಿದ್ದರೂ

    ಮನ ಬೆಚ್ಚಗಾಗಿಸೋ ಒ೦ದು ಬಣ್ಣವೂ

    ಅಲ್ಲಿರಲಿಲ್ಲವೇಕೆ....

    ಪ್ರೀತಿಯ ಹಾತೊರೆತವಿದ್ದಿರಲಿಲ್ಲವೇಕೆ....

    ಪ್ರೀತಿಗಾಗಿ ಕಿವಿಯನ್ನೂ ಕತ್ತರಿಸಿ

    ಉಡುಗೊರೆ ನೀಡಿದ್ದೂ

    ಆ ತನ್ನ ಕೋಣೆಯ ಖಾಲಿ ಮ೦ಚದ೦ತೆ

    ಅನಾಥವಾಗಿಸಿತ್ತೇಕೆ...ಅವನನ್ನ...

    ಕಟ್ಟಕೊನೆಗೆ ಬಣ್ಣವನ್ನೂ ಬಿಟ್ಟು...

    ಹತಾಶೆಯ ಕೈಯಲ್ಲಿ ಎಲ್ಲವನ್ನೂ ಕೊಟ್ಟು...

    ಎಲ್ಲೆಲ್ಲೂ ಸಲ್ಲದೇ ...

    ಸದಾ ಬೆನ್ನಿಗಿದ್ದ ತಮ್ಮನನ್ನೂ ಒಲ್ಲದೇ..

    ತನ್ನೊಳಗಿನ ಧ್ವನಿಗಳೇ ಆರ್ತನಾದವಾಗಿ..

    ತನ್ನರಿವಿಗೂ ಮೀರಿ ಕಿರುಚಾಡುವ೦ತಾಗಿ...

    ಎಲ್ಲ ಸ್ಥಿಮಿತ ಕಳಕೊ೦ಡು

    ಗು೦ಡಿನೇಟಿಗೆ ತಲೆ ಇಟ್ಟ ಇವನ ಬದುಕು

    ಈಗ ಇವನಿಲ್ಲದಾಗಲೂ

    ಕ್ಯಾನ್ವಾಸಿನ ಮೇಲೆ ಅರಳಿದ

    ಸೂರ್ಯಕಾ೦ತಿಯ೦ತೆಯೂ...

    ಆ ಒ೦ಟಿ ನೀಲಿ ಐರಿಸ್ ಹೂವಿನ೦ತೆಯೂ...

    ಹಳದಿ ಪೈರಿನ ಮೇಲೆ ತೆರೆದುಕೊ೦ಡ

    ಉರುಟುರುಟು ಮೋಡಗಳ೦ತೆಯೂ

    ಆ ಕೋಣೆಯಲ್ಲಿನ ಒ೦ಟಿ ಕುರ್ಚಿಯ೦ತೆಯೂ

    ನಮ್ಮ ಹೀಗೂ ಕಾಡುವುದೇಕೆ...

    ReplyDelete
  3. ಕವಿಗಳೆ, ಇಂಥದ್ದೇ ಚಿತ್ರ ಬೇಕಂದ್ರೆ ನೀವು ವ್ಯಾನ್ಗೊನನ್ನೇ ಕೇಳಬೇಕಾದೀತು!:-) ನನಗೆ ಕಂಡ ಸೂರ್ಯಕಾಂತಿ ಮಾತ್ರ ಮಾಡಿಕೊಡಬಲ್ಲೆ!

    ReplyDelete
  4. ಅನು ಅವರೆ, ನಿಮ್ಮ ಈ ಸಾಲುಗಳಲ್ಲಿರುವ ಆರ್ತತೆ ವ್ಯಾನ್ಗೊ ಬಗೆಗಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುವ ಹಾಗಿದೆ. ಇಲ್ಲಿ ಇದನ್ನು ಹಂಚಿಕೊಂಡಿದ್ದಕ್ಕಾಗಿ thanks.

    ReplyDelete
  5. ಒ೦ದು ಉತ್ತಮವಾದ ಮಾಹಿತಿ ತಿಳಿಸಿಕೊಟ್ಟಿರಿ. ವಿನ್ಸೆ೦ಟ್ ನ ಪರಿಚಯಕ್ಕೆ ಧನ್ಯವಾದಗಳು. ಮಧ್ಯಕಾಲೀನ ಶತಮಾನದಲ್ಲಿ ಸುಮಾರು ಹದಿನೈದನೇ ಶತಮಾನದ ರಷ್ಯನ್ ಪೈ೦ಟರ್ "ಆ೦ಡ್ರಿ ರುಬ್ಲೆವ್" ಅವನ ಜೀವನ ಹಾಗು ಪೈ೦ಟಿ೦ಗ್ ಬಗ್ಗೆ ಅದ್ಭುತ ಚಿತ್ರವಿದೆ.

    ReplyDelete