ವಿನ್ಸೆಂಟ್ ವ್ಯಾನ್ಗೊ - ಸಾರ್ವಕಾಲಿಕ ಜನಪ್ರಿಯತೆ ಪಡೆದ, ಬಹುಚರ್ಚಿತ ಕಲಾವಿದರಲ್ಲಿ ಮೊದಲ ಹೆಸರು. ಕಿತ್ತು ತಿನ್ನುವ ಅಸ್ಥಿರತೆ, ತನ್ನನ್ನೇ ಮರೆಸುವ ಭಾವತೀವ್ರತೆಯ ಜೊತೆಗೆ ತಾನು ಕಂಡ ಎಲ್ಲವನ್ನೂ ಉತ್ಕಟವಾಗಿ ಬದುಕಿದವನು, ಬದುಕಿಸಿದವನು ಈ ಡಚ್ ಕಲಾವಿದ (1853-1890).
ಅಂತೆಯೇ ಆತನ ಚಿತ್ರಗಳ ಕಣಕಣದಲ್ಲೂ ಅಸಾಧಾರಣ ಜೀವಂತಿಕೆ ನಿರಂತರವಾಗಿ ಸ್ಫೋಟಗೊಳ್ಳುತ್ತದೆ...ಚಿತ್ರಗಳ ಸುರುಳಿಗಳು ನಮ್ಮನ್ನು ಮತ್ತೆ ಬಿಡದಂತೆ ಸೆಳೆದುಕೊಳ್ಳುತ್ತವೆ....ಕ್ಯಾನ್ವಾಸಿನ ಶುದ್ಧ ಹಳದಿ, ನೀಲಿ, ಕಪ್ಪು, ಕೆಂಪುಗಳು ನಮ್ಮ ಕಣ್ಣುಗಳಲ್ಲಿ ನಿಲ್ಲಲಾರದೆ ಮುಖ, ಮೈಗೆ ಮೆತ್ತಿಕೊಳ್ಳುತ್ತವೆ...
ಫ್ರಾನ್ಸಿನ ಆರ್ಲ್ಸ್ ನಲ್ಲಿ ಕಳೆದ ಕೊನೆದಿನಗಳಲ್ಲಿ ವ್ಯಾನ್ಗೋನಿಂದ ರಚಿತವಾದ ಅದ್ಭುತ ಸರಣಿ ಚಿತ್ರ - 'ಸೂರ್ಯಕಾಂತಿಗಳು' (1887-89). ಲೋಕದ ಅಷ್ಟೂ ಚೈತನ್ಯ ಈ ಹೂಗಳಲ್ಲೇ ಅಡಗಿ ಚಿಮ್ಮುತ್ತಿವೆ! ತನ್ನನ್ನೂ, ಜನರನ್ನೂ, ಗಿಡ, ಮರ, ಹೂವು, ಸೂರ್ಯ,...ಲೋಕದ ಪ್ರತಿಯೊಂದನ್ನೂ ಒಂದೇ ತೀವ್ರತೆಯಲ್ಲಿ ಕಂಡು, ಉತ್ಕಂಠತೆಯಲ್ಲಿ ಅನುಭವಿಸಿದ ವ್ಯಾನ್ಗೊ, ತನ್ನ ನೋವು, ಅಸ್ಥಿರತೆ, ಒಂಟಿತನ, ತೀವ್ರ ಪ್ರೀತಿ, ನಿಷ್ಠುರತೆ, ನಿರಾಸೆ...ಎಲ್ಲವುಗಳಲ್ಲಿ ಅದ್ದಿ ತೆಗೆದ ಬಣ್ಣಗಳಲ್ಲಿ ಜೀವಂತೆಕೆಗೆ ಹೊಸ ಪರಿಭಾಷೆ ಒದಗಿಸಿದ ಅದ್ಭುತ ಕಲಾವಿದ .
ವ್ಯಾನ್ಗೋನ 'ಸೂರ್ಯಕಾಂತಿಗಳು' ನಮ್ಮ ಕವಿ ಎಸ್. ಮಂಜುನಾಥ್ ಅವರಿಗೆ ಕಂಡಿದ್ದು ಹೀಗೆ...

ಕಣ್ಣ ತುಂಬಿದ್ದ ಹಲವು ನೋಟಗಳ ಕಸ
ಉರಿದುಹೋದಂತಾಯಿತ್ತು
ಆ ಹೂವುಗಳ ಬಣ್ಣದ ಮಿಂಚು ತಾಗಿ
ಶ್ರೇಷ್ಠ ವ್ಯಾನ್ಗೋನ ಚಿತ್ರಗಳ ಸಂಪುಟದಲ್ಲಿದ್ದ ಸೂರ್ಯಕಾಂತಿಗಳ ಚಿತ್ರ
ಕಾಲದ ಹೃದಯದಂತೆ ಮಿಡಿಯುತ್ತಿತ್ತು ನಮ್ಮ ಕ್ಷಣಗಳನ್ನು
ಕಂಡಷ್ಟೂ ನಿಮಿಷಗಳ ನಮಗೆ ನೀಡುತ್ತಿತ್ತು
ಉಳಿಸಿಕೊಂಡವು ನನ್ನನ್ನು ಆ ಹೂವುಗಳು
ಉಕ್ಕಿ ಬರುವ ಲಾವಾರಸದ ಸುಳಿಗಳಂತೆ ಸುತ್ತಿದ್ದವು
ಎಲ್ಲ; ನಡೆದ ದಾರಿ ಬದಿಯ ಪೈನ್ ಮರ ಸಾಲು ಪೊದೆಗಳು
ನೆರಳು ಮತ್ತು ಆಕಾಶವೂ
ಘೋರ ವ್ಯಗ್ರತೆಯಲ್ಲಿ ನರಳಿದ ಉಗ್ರ ಆತ್ಮದ್ವೇಷಿಗೆ
ತನ್ನ ಕೋಣೆಯೊಳಗಡಿಯಿಟ್ಟದ್ದೇ ಬಡಿದಿತ್ತು
ಹೂದಾನಿಯೊಳಗಿದ್ದ ಜ್ವಾಲಾಮುಖಿಯ ಸ್ತಬ್ಧಸ್ಫೋಟ
ದಂಡಿಸಲು ಎರಗಲಿದ್ದ ಸಿಡಿಲುಗಳಂತೆ
ಡಿಕ್ಕಿ ಹೊಡೆದು ಉರಿದುಹೋಗಲಿದ್ದ ಸೂರ್ಯರುಗಳಂತೆ
ಬಿರಿದು ದಳವುದುರುವುದರಲ್ಲಿದ್ದ ಎದ್ದಿದ್ದ ಬಾಗಿದ್ದ
ಹೂವುಗಳು ದೇಟುಗಳೂ ಬೋಳಾಗಿದ್ದ ದಿಂಡುಗಳೂ
ಕಂಡ ವ್ಯಾನ್ಗೋ ಅವುಗಳನ್ನು
ಪ್ರಳಯವಾಗುವುದರಲ್ಲಿ ಇದ್ದ ತನ್ನನ್ನು
ಮೆಲುಗಾಳಿಯಲ್ಲೀಗ ಮೆಲ್ಲ ಹೊರಳಾಡುತ್ತದೆ ಅದೇ
ಹೊಲದ ನೆತ್ತಿ ಮೇಲೆ
ಬೆಳಗುವ ಹಳದೀ ಮೊಗಗಳ ತೂಗುತ್ತ ಮೂಡುತ್ತದೆ
ಸಂಜೆವಿಹಾರಕ್ಕೆ ಬಂದವನಿಗೆ
ಚಿರಂತನದ ಫಲವತ್ತಾದ ಮಣ್ಣು ಎತ್ತಿ ತೋರಿದ ಒಂದು
ಮೊಗವಷ್ಟೇ-ಮಹಾನ್ ವ್ಯಾನ್ಗೋ
ಭಾವಿಸುತ್ತಿರುವೆ ಕೃತಙ್ಞತೆಯೊಂದಿಗೆ ಇಲ್ಲಿ
ಈ ಹೊಲದ ಅಸಂಖ್ಯ ಸಂಗಾತಿಗಳ ನಡುವೆ ನೀನೊಬ್ಬನಾಗಿ
ಶೂನ್ಯದ ಒಳತಿರುಳ ದೀರ್ಘಸುಶುಪ್ತಿಯಲಿ ಮುಳುಗಿರುವಂತೆ ನಿನ್ನನ್ನೂ
- ಎಸ್. ಮಂಜುನಾಥ್