Wednesday, 25 April 2012

’ಎಡ್ವರ್ಡ್ ಮಾನೆ’ಯೊಂದಿಗೆ -’ಲಂಚನ್ ಆನ್ ದ ಗ್ರಾಸ್’



(ನನ್ನ ಮೆಚ್ಚಿನ ಫ಼್ರೆಂಚ್ ಕಲಾವಿದರ ಪೈಕಿ ಎಡ್ವರ್ಡ್ ಮಾನೆ ಕೂಡ ಒಬ್ಬ.ಆತನ ದಿಟ್ಟ ನಿಲುವು,ಅಸಾಧಾರಣ ಅಭಿವ್ಯಕ್ತಿ ನನ್ನನ್ನು ಸದಾ ಆಕರ್ಷಿಸಿವೆ.ಪ್ರಬಂಧದ ಆಯ್ದ ಸಾಲುಗಳು, ನಿಮಗಾಗಿ...)

ಎಡ್ವರ್ಡ್ ಮಾನೆ ಪಾಶ್ಚಾತ್ಯ ಕಲಾಚರಿತ್ರೆಯ ದಿಕ್ಕನ್ನು ಬದಲಿಸಿದ ಅತ್ಯಂತ ಪ್ರಮುಖ ಕಲಾವಿದರಲ್ಲಿ ಒಬ್ಬ.ಸಂಪ್ರದಾಯ ಮತ್ತು ಆಧುನಿಕತೆಯ ನಡುವಿನ ಸೇತುವಿನಂತೆ ನಿಂತು,ಹೊಸಪೀಳಿಗೆಯ ಕಲಾವಿದರನ್ನು ಹುಟ್ಟುಹಾಕುವುದರಲ್ಲಿನ ಇವನ ಪಾತ್ರ ಉಲ್ಲೇಖಾರ್ಹವಾದುದು.

ಈತನ ’ಲಂಚನ್ ಆನ್ ದಿ ಗ್ರಾಸ್’ ಮತ್ತು ’ಒಲಂಪಿಯ’ ಕಲಾವಲಯದಲ್ಲಿ ಹುಟ್ಟುಹಾಕಿದ ಕಂಪನ ಆಗಿನ ಮನಸ್ಥಿತಿಗೆ ಬಹುದೊಡ್ಡದಾಗಿತ್ತು.ಕಲಾವಿಮರ್ಶಕರು,ಪ್ರೇಕ್ಷಕರು ಮತ್ತು ಸಾಮಾಜಿಕರಿಂದ ಕಟುವಿಮರ್ಶೆ,ಅಸಹನೀಯ ಅವಮಾನ,ತಿರಸ್ಕಾರಗಳನ್ನು ಉಂಡರೂ ತನ್ನ ಧ್ಯೇಯ ಮತ್ತು ಹೊಳಹನ್ನು ಗುರುತಿಸಿ,ಅನುಸರಿಸುವ ಹಲವು ಸಂಪನ್ನರನ್ನೂ ಪಡೆಯುವಲ್ಲಿ ವಿಫಲನಾಗಲಿಲ್ಲ.ಈತನಲ್ಲಿ ನೈತಿಕ ಸ್ಥೈರ್ಯ ತುಂಬಿ,ಸ್ಫೂರ್ತಿಪ್ರಚೋದಕನಾದವನು ಅಂದಿನ ಪ್ರಮುಖ ಆಧುನಿಕ ಕವಿ,ವಿಮರ್ಶಕ ಮತ್ತು ಮಾನೆಯ ಗೆಳೆಯ ಚಾರ್ಲ್ಸ್ ಬೋದ್ಲೇರ್.ಈತ ಹೇಳುವಂತೆ - "ಕಲೆ ಎಂಬುದು ನೈಜತೆಯನ್ನು ಬಿಂಬಿಸುವ ಕನ್ನಡಿಯಂತೆ ಕೆಲಸ ಮಾಡಬೇಕು.ಕುಡುಕ,ಭಿಕ್ಷುಕ,ವೇಶ್ಯೆ ಮುಂತಾದ ಸಾಮಾನ್ಯರನ್ನು ಅವರ ನಿಜನೆಲೆಯಲ್ಲಿ ಬಿಚ್ಚಿಡುವ ಮಾಧ್ಯಮವಾಗಬೇಕು".

೧೯ ನೆ ಶತಮಾನ ಯುರೋಪ್ ರಾಷ್ಟ್ರಗಳಲ್ಲಿ ಹಲವು ರೀತಿಯ ಮನೋಮಾರ್ಗಗಳನ್ನು ಸೃಷ್ಟಿಸಿದ ಕಾಲ.ವೈಜ್ನಾನಿಕ ಅನ್ವೇಷಣೆಗಳು,ಸಾಮಾಜಿಕ ಕ್ರಾಂತಿ,ಕೈಗಾರಿಕೋದ್ಯಮದ ಕ್ಷಿಪ್ರಗತಿ -ಈ ಎಲ್ಲಾ ಅಂಶಗಳೂ ಸೃಜನಶೀಲ ಮಾಧ್ಯಮಗಳ ಮೇಲೆ ಮಹತ್ತರ ಪರಿಣಾಮ ಬೀರಿದವು.ರೊಮ್ಯಾಂಟಿಕ್ ಮತ್ತು ಕ್ಲಾಸಿಕಲ್ ಶೈಲಿಯ ಚಿತ್ರಗಳ ಅಪ್ರಸ್ತುತತೆ,ಕೃತಕತೆ ಮತ್ತು ಅಸಂಗತತೆಗಳಿಂದ ಹೊರಬಂದು,ಸುತ್ತಲಿನ ಜನಜೀವನವನ್ನು,ಪ್ರಮುಖವಾಗಿ ತಳವರ್ಗದ ಜೀವನವನ್ನು ಯಾವುದೇ ಮೇಕಪ್ ಇಲ್ಲದೆ ತೆರೆದು ತೋರಿಸುವ ಮೂಲಕ ಚಿತ್ರಮಾಧ್ಯಮ ಹೊದ್ದಿದ್ದ ಮಡಿವಂತಿಕೆಯ ಕೃತ್ರಿಮ ಮುಖವಾಡವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದವು.ರಿಯಲಿಸ್ಂ ಶೈಲಿ ಮತ್ತು ಆ ಶೈಲಿಯ ಪ್ರಮುಖ ಕಲಾವಿದ ’ಗುಸ್ತಾವ್ ಕೂರ್ಬೆ’ಯ ಆಶೋತ್ತರವೂ ಇದೇ ಆಗಿತ್ತು.ಆ ದಿಶೆಯಲ್ಲಿ ಎಡ್ವರ್ಡ್ ಮಾನೆ ಕೂಡ ಪ್ರಾಮಾಣಿಕವಾಗಿ ತೊಡಗಿಕೊಂಡಾತ.

"i paint what i see,and not what others choose to see " -ಅಕಾಡೆಮಿಕ್ ಪಠ್ಯಕ್ರಮದ ಪೂರ್ವಾಗ್ರಹಪೀಡಿತ ಶಿಕ್ಷಣಕ್ಕೆ ವಿರುದ್ಧವಾಗಿ ಮಾನೆ ಹೇಳಿದ ಮಾತಿದು.ಆಲೋಚನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದಾತನಿಂದ ಇಂಥ ಮಾತುಗಳು ಸಹಜವೇ.

ಮಾನೆಯ ಬಹುಪಾಲು ಕಲಾಕೃತಿಗಳಲ್ಲಿ ರೂಪದರ್ಶಿ ’ವಿಕ್ಟೊರೈನ್ ಮ್ಯೂರಂಟ್’ಳನ್ನು ಗುರ್ತಿಸಬಹುದು.ಈಕೆ ಪ್ಯಾರಿಸ್ ನ ಬಡಕುಟುಂಬದವಳು.ಮಾನೆಯ ಗುರು ಥಾಮಸ್ ಕೌಚರ್ ಸೇರಿದಂತೆ ಹಲವು ಕಲಾಬ್ಯಾಸಿಗಳಿಗೆ,ಕಲಾವಿದರಿಗೆ ರೂಪದರ್ಶಿಯಾಗಿದ್ದವಳು,ವೇಶ್ಯಾವೃತ್ತಿಯನ್ನವಲಂಬಿಸಿದ್ದವಳು,ಕೆಲವರ್ಷಗಳಮಟ್ಟಿಗೆ ಮಾನೆಯ ಪ್ರೇಯಸಿಯೂ ಆಗಿದ್ದವಳು.ಈಕೆಯಲ್ಲಿ ಮಾನೆಗೆ ಕಂಡ ವಿಶೇಷತೆಯೆಂದರೆ- ಅಕೃತ್ರಿಮ ಮುಖಚರ್ಯೆ,ಸಹಜತೆ. ಬದುಕಿನ ನೈಜಚಿತ್ರಣವೇ ಮಾನೆಯ ಗುರಿಯೂ ಆಗಿದ್ದರಿಂದ,ಮ್ಯೂರಂಟ್ ಆತನ ನೆಚ್ಚಿನ ರೂಪದರ್ಶಿಯಾಗಿ ಪ್ರಮುಖ ಕಲಾಕೃತಿಗಳ ಮೂಲಕ ಆತನ ಬಂಡಾಯಕ್ಕೆ ಬೆಂಬಲವಾದಳು.’ಒಲಂಪಿಯ’ ಮತ್ತು ’ಲಂಚನ್ ಆನ್ ದ ಗ್ರಾಸ್’ ಕಲಾಕೃತಿಗಳ ಕೇಂದ್ರಬಿಂದುವಾದ ಮಹಿಳೆಯ ಭಾವಕ್ಕೆ ಪೂರಕವಾಗಿ,ರೂಪದರ್ಶಿಯಾಗಿ ನಂತರ ಬಂದ ಕಟುಟೀಕೆ,ನೋವು,ಅವಮಾನಗಳನ್ನು ದಿಟ್ಟೆದೆಯಿಂದ ಸೈರಿಸಿಕೊಂಡವಳು ಈಕೆ.ಆದರ್ಶ ಚೆಲುವೆಯಲ್ಲದ,ಬೀದಿಬೀದಿಗಳಲ್ಲಿ ಕಾಣಸಿಗುವ ಸಾಮಾನ್ಯ ವೇಶ್ಯೆ ಅಥವಾ ಮಹಿಳೆಯನ್ನು ಪ್ರತಿನಿಧಿಸುವ ಸ್ವಾಭಾವಿಕ ಮುಖಭಾವ ಕ್ಯಾನ್ವಾಸ್ ನೊಳಗಿಂದ ಪ್ರೇಕ್ಷಕರನ್ನು ದಿಟ್ಟಿಸತೊಡಗಿದಾಗ ಆಗಿನ ಮಡಿವಂತ ಸಮಾಜ ಆಘಾತವನ್ನನುಭವಿಸಿತ್ತು.

ಆಧುನಿಕ ಸಮಾಜದ ನೈಜಚಿತ್ರಣಕ್ಕೆ ಮಾಧ್ಯಮವಾಗಿ ಆತ ಆರಿಸಿಕೊಂಡದ್ದು ವೇಶ್ಯೆಯನ್ನು !
ಬಹುಷಃ ಪುರುಷರ/ಪುರುಷಪ್ರಧಾನ ಸಮಾಜದ ಸೋಗಲಾಡಿತನವನ್ನು ಬಿಂಬಿಸುವ ಪರಮ ಪ್ರತಿಮಾರೂಪಕ ಇದು.ಲೈಂಗಿಕತೆಯಿಂದಾಚೆಗೂ ಸಾಂಕೇತಿಕ ವಿಸ್ತರಣೆ ಈ ರೂಪಕಕ್ಕೆ ಇರಬಹುದು.

ರೊಮ್ಯಾಂಟಿಕ್,ಕ್ಲಾಸಿಕಲ್ ಚಿತ್ರಗಳೇ ಪರಮಶ್ರೇಷ್ಠ ಎಂಬಂತೆ ಪರಿಗಣಿತವಾಗಿದ್ದ ಆ ದಿನಗಳಲ್ಲಿ ಚಿತ್ರಮಾಧ್ಯಮ ಕೇವಲ ಪುರಾಣ,ಮಹಾಕಾವ್ಯಗಳ ಉನ್ನತ ಮೌಲ್ಯಗಳನ್ನು ಮಾತ್ರ ಬಿಂಬಿಸುವ ಹೊಣೆಹೊತ್ತಂತೆ ಭಾವಿಸಲ್ಪಟ್ಟಿತ್ತು.ನಗ್ನಚಿತ್ರಗಳು ದೈವಿಕ ಔನ್ನತ್ಯದ ಸೋಗಿನಲ್ಲಿ ಪ್ರದರ್ಶಿತವಾಗುತಿದ್ದ ಸಂದರ್ಭ.ಇಂಥ ಮನಸ್ಥಿತಿಗೆ ಸಂಪೂರ್ಣ ವಿರುದ್ಧವಾಗಿ,ಮಾನೆ ನಿಜಜೀವನದ ವೇಶ್ಯೆಯನ್ನು ಕಲಾಮಾಧ್ಯಮದ ಮೂಲಕ ದೇವತೆಯಂತೆ ಚಿತ್ರಿಸಿದ್ದು ಸಹಜವಾಗಿಯೇ ಸಂಪ್ರದಾಯಶರಣರಿಗೆ ಕೊಟ್ಟ ಬಹುದೊಡ್ಡ ಪೆಟ್ಟಾಗಿತ್ತು.

’ಲಂಚನ್ ಆನ್ ದ ಗ್ರಾಸ್’ -ವಿಚಿತ್ರ ದಿಟ್ಟತನ,ಸ್ಫೂರ್ತಿ ಮತ್ತು ಮಹಿಳೆಯ ಸಾಮಾಜಿಕ ಪ್ರಾತಿನಿಧ್ಯವನ್ನು ಬಿಂಬಿಸುತ್ತದೆ.ಈ ಕಾರಣಗಳಿಂದಾಗಿಯೇ ಮಡಿವಂತ,ಸಭ್ಯಸೋಗಿನ ಸಮಾಜ ಬೆತ್ತಲೆಗೊಂಡು ಅವಮಾನಿತವಾದಂತೆ ತತ್ತರಿಸಿತು,ಚೀರಾಡಿತು.ಸ್ತ್ರೀ ನಗ್ನತೆಯನ್ನು ಪೌರಾಣಿಕ ಪುಣ್ಯಕಥೆಗಳ ವೇಷದಲ್ಲಿ ಪ್ರದರ್ಶಿಸುವ ಶಾಸ್ತ್ರೀಯ ಶೈಲಿಯ ಸೋಗಲಾಡಿತನವನ್ನು ಬಯಲಿಗೆಳೆಯುವಂತೆ,ಸತ್ಯದ ಎದೆಬಗೆದು ಕನ್ನಡಿ ಹಿಡಿಯವಂತೆ ದೃಶ್ಯಮಾಧ್ಯಮದ ಅಲೌಕಿಕ ಶಕ್ತಿಯನ್ನು ಲೌಕಿಕ ಸತ್ಯದ ಆವರಣದಲ್ಲೇ ಸೆರೆಹಿಡಿಯುವ ’ಆಧುನಿಕ’ ದೃಷ್ಟಿಗೆ ಮಾನೆ ಚಾಲನೆ ನೀಡಿದ.

ಇಬ್ಬರು ಆಧುನಿಕ ಉಡುಗೆಯ ಪುರುಷರ ನಡುವೆ ನಗ್ನವಾಗಿ ಕುಳಿತ ಮಹಿಳೆ ನೇರವಾಗಿ ಪ್ರೇಕ್ಷಕನಣ್ಣನ್ನೇ ದಿಟ್ಟಿಸುತ್ತಾ,ಚಿತ್ರದ ಆವರಣದೊಳಗೆ ಆಹ್ವಾನಿಸುತ್ತಾ ಕಲಾಮಾಧ್ಯಮದ ಚತುರ ಮಡಿವಂತಿಕೆಗೆ ಚ್ಯುತಿಯುಂಟುಮಾಡಿದ್ದು ಅಕ್ಷಮ್ಯವಾಗಿತ್ತು.ಸಂಪ್ರದಾಯದ ಸುರಕ್ಷಿತ ಆವರಣದೊಳಗೆ ನಗ್ನತೆಯನ್ನು ಒಪ್ಪಿಕೊಳ್ಳುವ ಸಮಾಜ,ಅದೇ ನಗ್ನತೆಯನ್ನು ನಿಜಜೀವನದ ಪ್ರತಿಬಿಂಬದಂತೆ ತೋರಿದಾಗ ಹೌಹಾರುತ್ತದೆ.ಕಲಾಮಾಧ್ಯಮ ಕೇವಲ ’ಉನ್ನತ’ಭಾವನೆಗಳನ್ನು ಉದ್ದೀಪಿಸುವ,ಕಾಲ್ಪನಿಕ ಆದರ್ಶಗಳನ್ನು ಬಿಂಬಿಸುವ ಮಾಧ್ಯಮ ಎಂಬ ಸ್ಥಿರನಂಬಿಕೆಯೇ ಇದಕ್ಕೆ ಕಾರಣ.

ಕಲಾಚರಿತ್ರೆಯನ್ನು ಅವಲೋಕಿಸಿದಾಗ,ಮಹಿಳೆ ಕೇವಲ ರೂಪದರ್ಶಿಯಾಗಿ, ಸೌಂದರ್ಯದ ಪ್ರತೀಕವಾಗಿ,ಆದರ್ಶ ಭೋಗಜೀವನದ ಸಂಕೇತವಾಗಿ ಮಾತ್ರ ಕಾಣುತ್ತಾಳೆ.ಇದು ಪುರುಷ ದೃಷ್ಟಿಯನ್ನು ತಣಿಸುವುದಕ್ಕಾಗಿಯೇ,ಪುರುಷರಿಂದಲೇ ಸೃಷ್ಟಿಗೊಂಡಿದ್ದನ್ನು ಕಾಣಬಹುದು.ಕಲಾಚರಿತ್ರೆಯುದ್ದಕ್ಕೂ ಕೇವಲ ಬೆರಳೆಣಿಕೆಯ ಸ್ತ್ರೀಕಲಾವಿದರನ್ನು ಹೊಂದಿರುವ ಚಿತ್ರಮಾಧ್ಯಮ ಒಟ್ಟಾರೆಯಾಗಿ ಪುರುಷಸಂವೇದನೆಯ ಕಪಿಮುಷ್ಟಿಯಲ್ಲಿದ್ದುದರಲ್ಲಿ ಆಶ್ಚರ್ಯವೇನಿಲ್ಲ.ಮಾನೆಯ ಚಿತ್ರಗಳು ಮೇಲ್ನೋಟಕ್ಕೆ ಸ್ತ್ರೀನಗ್ನತೆಯನ್ನು ಹಸಿಗೊಳಿಸುವಂತೆ ಕಂಡರೂ,ವಾಸ್ತವಿಕವಾಗಿ ಸಾಮಾಜಿಕ ಮತ್ತು ಶಾಸ್ತ್ರೀಯ ನಿಬಂಧನೆಗಳ ಮೂಲಕ ನಗ್ನತೆಯನ್ನು ಸಭ್ಯಸೋಗಿನಲ್ಲಿ ಆಸ್ವಾದಿಸುವ,ಕಾಲ್ಪನಿಕ ಆದರ್ಶಗಳನ್ನೇ ನಿಜಗೊಳಿಸುವ ಹುನ್ನಾರದ ನಂಬಿಕೆಗಳನ್ನು ತೀವ್ರವಾಗಿ ವಿರೋಧಿಸುವ ಉದ್ದೇಶದ್ದಾಗಿತ್ತು ಎನ್ನಬಹುದು.

’ಲಂಚನ್ ಆನ್ ದ ಗ್ರಾಸ್’- ಕ್ರಿ.ಶ ೧೮೬೩ ರಲ್ಲಿ ಪ್ಯಾರಿಸ್ ನ ಸಲಾನ್ ನಿಂದ ತಿರಸ್ಕರಿಸಲ್ಪಟ್ಟು,ಪರ್ಯಾಯ ಪ್ರದರ್ಶನದಲ್ಲಿ ಪ್ರದರ್ಶಿಸಲ್ಪಟ್ಟಾಗ ದೊಡ್ಡ ಕಂಪನ ಸೃಷ್ಟಿಸಿತ್ತು.ಇಬ್ಬರು ಆಧುನಿಕ ಪುರುಷರೊಂದಿಗೆ ಕುಳಿತ ನಗ್ನ ಮಹಿಳೆ ಪ್ರೇಕ್ಷಕನೆಡೆಗೆ ದೃಷ್ಟಿ ಹಾಯಿಸುತ್ತಿರುವಂತೆ ತೋರಿಸಲಾಗಿದೆ.ಇಬ್ಬರೂ ಪುರುಷರು ಮಾತಿನಲ್ಲಿ ಮಗ್ನರಾಗಿದ್ದಾರೆ.ಎದುರು ಕುಳಿತ ಮಹಿಳೆ ತನ್ನ ಸಹಚರರೊಂದಿಗೆ ಯಾವುದೇ ಸಂಬಂಧವಿಲ್ಲವೆಂಬಂತೆ ಪ್ರೇಕ್ಷಕನನ್ನು frame ನೊಳಗೆ ಆಹ್ವಾನಿಸುವ ಪ್ರಯತ್ನದಲ್ಲಿದ್ದಾಳೆ.ನಾಲ್ವರ ದೃಷ್ಟಿಯೂ ಪರಸ್ಪರ ಸಂಧಿಸುತ್ತಿಲ್ಲ.ಆದರೆ ಅವರು ಪ್ರೇಕ್ಷಕನ ಇರವನ್ನು ಗಾಢವಾಗಿ ಅನುಭವಿಸುತ್ತಾ,ಆತನ ಬರುವಿಗಾಗಿ ಅವಕಾಶ(space) ಕೊಡಲು ಸಿದ್ಧರಿದ್ದಂತಿದೆ.

ಚಿತ್ರದ ಎಡಮುಂಭಾಗದಲ್ಲಿ ಬುಟ್ಟಿ ಮಗುಚಿರುವಂತೆಯೂ,ಹಣ್ಣುಗಳು ಹರಡಿ ಬಿದ್ದಂತೆಯೂ ಚಿತ್ರಿಸಲಾಗಿದೆ.ಮಗುಚಿದ ಬುಟ್ಟಿ ಕಳೆದುಹೋದ ಮುಗ್ಧತೆಯ ಸಂಕೇತವಾಗಿಯೂ,ಖಾಲಿ ಕಪ್ಪೆಚಿಪ್ಪು ಕಾಮೋದ್ದೀಪನದ ಸಂಕೇತವಾಗಿಯೂ ಚಿತ್ರಿತವಾಗಿದೆ.ಬುಟ್ಟಿಯ ಎದುರುಗಡೆ ಚಿತ್ರಿಸಲಾಗಿರುವ ಕಪ್ಪೆ ಫ಼್ರೆಂಚ್ ಭಾಷೆಯಲ್ಲಿ ವೇಶ್ಯೆಗಿರುವ ಅಡ್ಡಹೆಸರನ್ನು ಸೂಚಿಸುತ್ತದೆ.ಮಹಿಳೆಯ ಮುಂದೆ ಕುಳಿತ ಪುರುಷನು ಆಕೆಯೆಡೆಗೆ ಬೆಟ್ಟುಮಾಡಿ ಮಾತನಾಡುತ್ತಿರುವುದು ಮತ್ತು ಆಕೆ ಪ್ರೇಕ್ಷಕನೆಡೆಗೆ ನೇರವಾಗಿ ದಿಟ್ಟಿಸುತ್ತಿರುವುದು- ಇಡೀ ಚಿತ್ರದ ಕೇಂದ್ರಬಿಂದು ಆಕೆಯೇ ಎಂಬುದನ್ನು ದೃಢಗೊಳಿಸುತ್ತದೆ.

’ಲಂಚನ್ ಆನ್ ದ ಗ್ರಾಸ್’ ಮೂಲತಃ ಪುನರುಜ್ಜೀವನ ಯುಗದ ಮರ್ಸಾಂಬಿನೋ ರೈಮಂಡಿ ಎಂಬ ಕಲಾವಿದನಿಂದ ರಚಿತವಾದ ’judgement of paris’ ನಲ್ಲಿ ಕಂಡುಬರುವ ನಗ್ನದೇವತೆಗಳ ಆಧುನಿಕ ಅವತರಣಿಕೆ.ಕುಳಿತಿರುವ ಭಂಗಿಯನ್ನು ಬದಲಿಸದೆ,ಅದೇ ದೃಶ್ಯವನ್ನು ಆಧುನೀಕರಣಗೊಳಿಸಿದ್ದಾನೆ ಮಾನೆ.ಮತ್ತೊಂದು ಬಹುಮುಖ್ಯ ಹೊಸತನವೆಂದರೆ- ಚಿತ್ರಣಶೈಲಿಯ ಕಚ್ಚಾತನ.ಶಾಸ್ತ್ರೀಯ ಚಿತ್ರಗಳಲ್ಲಿರುವಂತೆ ಶುಧ್ಧರೂಪಣದ (neat finishing) ಪ್ರಯತ್ನ ಇಲ್ಲಿಲ್ಲ.ಬದಲಾಗಿ ಅವು ದಿಟ್ಟ ಮತ್ತು ವಿಶ್ವಾಸದ ಬೀಸುಗಳು.ಒಟ್ಟಾರೆ,ವಿಷಯ ಮತ್ತು ಶೈಲಿ ಎರಡರಲ್ಲೂ ಹೊಸತನದ ವಲಯ ಸೃಷ್ಟಿಗೊಂಡಿದ್ದನ್ನು ಕಾಣಬಹುದು.


ಮಾನೆಯ ಒಟ್ಟಾರೆ ಚಿತ್ರಗಳನ್ನು ಅವಲೋಕಿಸಿದಾಗ ಆತನ ಅದ್ಭುತ ಕೌಶಲ್ಯ ಕಣ್ಣಿಗೆ ಕಟ್ಟುತ್ತದೆ.ಯಾವುದೇ ಚಿತ್ರವೂ ಆತನ ಹೊಸತನದ ಹುಡುಕಾಟದ ಮಾಧ್ಯಮಗಳಾಗಿ,ಕ್ಯಾನ್ವಾಸ್ ಮೇಲೆ ಕಡೆದ ಶಿಲ್ಪದಂತೆ ಗಾಢ ಅನುಭವಕೊಡುವ ರೂಪಗಳಾಗಿ ಅರಳಿವೆ.ಬಣ್ಣ ಮತ್ತು ಕುಂಚದ ನಿರ್ವಹಣೆ ಬಹಳ ದಿಟ್ಟವಾಗಿ,ಹೊಸರೂಪದೊದಿಗೆ ದಟ್ಟೈಸುತ್ತವೆ.ನಿತ್ಯಜೀವನದ ನೈಜತೆಯನ್ನು ಬಿಂಬಿಸುವುದರ ಮೂಲಕ ಚಿತ್ರಮಾಧ್ಯಮವನ್ನು 'ಆಕಾಶ'ದಿಂದ 'ಭೂಮಿ'ಗೆ ಇಳಿಸುವ ಪ್ರಯತ್ನ ಇದು.ಜನಸಾಮಾನ್ಯರೆಡೆಗೆ ಕಲಾಪ್ರಪಂಚ ಹೊರಳಿನೋಡುವಂತೆ ಮಾಡಿದ ಮಾನೆ ೧೯ ನೆ ಶತಮಾನದ ಅತಿವಿಶಿಷ್ಟ ಮತ್ತು ಪ್ರಮುಖ ಕಲಾಶೈಲಿ -’ಇಂಪ್ರೆಶನಿಸಂ’(ಕ್ಷಣಬಿಂಬವಾದ) ಹುಟ್ಟಿಗೆ ಪ್ರೇರಕಶಕ್ತಿಯಾದರೂ ತನ್ನನ್ನು ತಾನು ಎಂದಿಗೂ ’ಇಂಪ್ರೆಶನಿಸಂ’ನ ಸೀಮಿತ ಲಕ್ಷಣಗಳೊಂದಿಗೆ ಗುರ್ತಿಸಿಕೊಳ್ಳಲು ಬಯಸಲಿಲ್ಲ.

ತಾದಾತ್ಮ್ಯದ ತಾಯಿ ; ಬೆರಗಿನ ಕೂಸು - ವೈ. ಜಯಮ್ಮ




   ನಾನು ಕಾವಾ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಒಮ್ಮೆ ಜಯಮ್ಮನವರ ಮನೆ/ಗ್ಯಾಲರಿಗೆ ಭೇಟಿ ಕೊಟ್ಟ ನೆನಪು. ಮಾಸಲು ಸೀರೆಯ, ಮಂದಕಿವಿಯ, ಈ ಲೋಕ-ಜನ-ಜಂಜಾಟದ ಉಸಾಬರಿಯೆ ಇಲ್ಲದ ನಿರ್ಲಿಪ್ತ ನಿಲುವು. ಕಿವಿ ಕೇಳುತ್ತಿದ್ದಿಲ್ಲವಾದ್ದರಿಂದ ನಮ್ಮಮಾತು, ಅವರ ಉತ್ತರ ಹಿಡಿತಕ್ಕೆ ಸಿಗದ ಬರಿಯ ಶಬ್ದಗಳಂತೆ ಅವರ ಮನೆ ಕಿಟಕಿಯಿಂದ ಜಿಗಿದು ಪಕ್ಕದ ರಸ್ತೆಯ ವಾಹನಗಳ ಚೀರಾಟದೊಂದಿಗೆ ಸೇರಿಹೋಗಿದ್ದವು. ಕಲಾವಿದೆ ಜಯಮ್ಮರನ್ನು ಹೆಚ್ಚು ಹತ್ತಿರದಿಂದ ನೋಡಲು-ಕೇಳಲು-ವಿಸ್ಮಯಗೊಳ್ಳಲು ಸಾಧ್ಯವಾದುದು ಇತ್ತೀಚೆಗೆ.

   ಮೈಸೂರಿನ ಇರ್ವಿನ್ ರಸ್ತೆ ನೆಹರು ಸರ್ಕಲ್ ಸೇರುವಲ್ಲಿ, ಸಿಟಿ ಸೆಂಟ್ರಲ್ ಬ್ಯಾಂಕ್ ಎದುರು ನಿಂತು ಪ್ರಯತ್ನಪೂರ್ವಕ ಕಣ್ಣಾಡಿಸಿದರೆ  'ಜಯಾ ಶಂಖು-ಶುಕ್ತಿ ಕಲಾಕೇಂದ್ರ' ಎಂಬ ಬೋರ್ಡ್ ಕಂಡೀತು. ಅದು ಕಲಾವಿದೆ ವೈ. ಜಯಮ್ಮನವರ ಮನೆ ಮತ್ತು ಗ್ಯಾಲರಿ. ಮೂರುಹೊತ್ತು ಗಿಜಿಗುಡುವ ಆ ರಸ್ತೆಯಿಂದ ಮನೆಯನ್ನು ನೆಪಮಾತ್ರಕ್ಕೆಂಬಂತೆ ವಿಭಜಿಸಿರುವುದು ಜಗುಲಿಯ ತುದಿಯಿಂದ ಬಾಗಿಲೆತ್ತರಕ್ಕೆ ಅಳವಡಿಸಿರುವ ಕಬ್ಬಿಣದ ಜಾಲರಿ. ಅದರ ಮೆಟಲ್ ಗೇಟ್ ತೆರೆದು ಉದ್ದನೆಯ ಹಜಾರಕ್ಕೆ ಬಂದರೆ, ಯಾವುದೋ ಭದ್ರಕೋಟೆಯೊಳಗೆ ಪ್ರವೇಶ ಸಿಕ್ಕಂತೆ. ಮತ್ತೆ, ಸ್ವಲ್ಪ ಗಲಿಬಿಲಿಗೊಳಿಸಲೆಂಬಂತೆ ಎರಡು ಮೂರು ದೊಡ್ಡ ಬಾಗಿಲುಗಳು ಕಾವಲುಗಾರರಂತೆ ನಿಂತಿವೆ. ಅತ್ತ ಬಾಗಿಲು ತಟ್ಟಿ, ಮತ್ತೊಂದು ತುದಿಯ ಕಾಲಿಂಗ್ ಬೆಲ್ ಅದುಮಿ, ಅತ್ತಿತ್ತ ಶತಪಥ ತಿರುಗಿ ಪ್ರತಿಕ್ರಿಯೆ ಬರದಿದ್ದಾಗ ಹೊರಡಲು ತೊಡಗುತ್ತಿದ್ದಂತೆ  ಒಂದು ಬಾಗಿಲು ತೆರೆದುಕೊಳ್ಳುತ್ತದೆ. ಕಿವಿಗೆ ಕೇಳಿಸದಿದ್ದರೂ, ತಪಸ್ಸು ಭಂಗಗೊಳಿಸಿದ್ದಕ್ಕೆ ನಿಮಗೆ ಸಣ್ಣ ಶಾಪವಂತೂ ಗ್ಯಾರಂಟಿ!

  

ಅದು ಜಯಮ್ಮನವರ ಕರ್ಮಭೂಮಿ-ಸ್ಟುಡಿಯೊ. ಒಂದಲ್ಲ ಒಂದು ಕಲಾಕೃತಿ ಮಾತುಪಡೆಯುವ ಹಂತದಲ್ಲಿದ್ದುದು ನಿಮ್ಮ ಬಲವಂತದ ಅತಿಕ್ರಮಣದಿಂದಾಗಿ ಮೌನತಾಳಿ ಕುಳಿತುಬಿಟ್ಟಿರುತ್ತದೆ. ಆ ದೊಡ್ಡ ಹಾಲ್ ಸುತ್ತಲೂ ಮುಗುಳ್ನಗುವ ಮೂಕಾಂಬಿಕೆ, ಕತ್ತಿ ಹಿಡಿದ ರಾವಣ, ರೆಕ್ಕೆ ಕಳೆದುಕೊಂಡಿರುವ ಜಟಾಯು, ಮುಖ ಮುಚ್ಚಿದ ಸೀತೆ, ಗಧಾಯುಧ್ಧದ ಮಲ್ಲರು, ಬಾಯಿತೆರೆದ ಪೂತನ, ಗದೆಹಿಡಿದು ಅತ್ತ ತಿರುಗಿದ ಹನುಮಂತ, ದಿವ್ಯನಗೆ ಬೀರುತ್ತ ನಿಂತಿರುವ ಕಲಾಂ - ಎಲ್ಲರೂ ಜಯಮ್ಮರೊಂದಿಗಿನ ಸಲ್ಲಾಪ ನಿಲ್ಲಿಸಿ ಅಲುಗಾಡದೆ ನಿಂತಿದ್ದಾರೆ. ಇತ್ತ ಉಗ್ರನರಸಿಂಹನಿಗೆ ಇನ್ನೂ ಕೈ-ಬಾಯಿ ಜೋಡಿಸಿಲ್ಲದ್ದರಿಂದ ಆತ ತನ್ನ ದಪ್ಪನೆಯ ದುಂಡು ಶಂಖದ ಕಣ್ಣುಗಳನ್ನು ನಿಮ್ಮತ್ತಲೇ ತಿರುಗಿಸಿ ಹೂಂಕರಿಸುತ್ತ ಕುಳಿತಿದ್ದಾನೆ. ತೊಂದರೆ ಕೊಟ್ಟಿದ್ದಕ್ಕೆ ನೀವು ಅನಿವಾರ್ಯವಾಗಿ ಭಂಡನಗೆಯೊಂದಿಗೆ ಮಾತಾಡುವುದಾದರೂ ಗಟ್ಟಿದನಿಯಲ್ಲಿ ಮಾತ್ರ ಸಂಪರ್ಕ ಸಾಧ್ಯ. ಅವರಿಗೆ ಕಿವಿ ಕೇಳುವುದಿಲ್ಲ. ಬಹುಷಃ ಇದು ನಿಮಗೆ ಸಣ್ಣ ಶಿಕ್ಷೆಯೂ ಆಗಿರಬಹುದು. ಆದರೆ, ಆ ನಿರಂತರಗಲಾಟೆಯ ರಸ್ತೆಗೆ ಓಗೊಡಲಾಗದೆ, ತಮ್ಮ ತದೇಕಚಿತ್ತದ ಚಿಪ್ಪಿನೊಳಗೆ ಅಡಗಲೆಂದೇ ಅವರಿಗೆ ಕಿವುಡುಂಟಾಗಿರಬಹುದು ಅನಿಸದೆ ಇರದು. ಮುಜುಗರದಿಂದಲೆ ದೊಡ್ಡ ದನಿಯಲ್ಲಿ ಮಾತಿಗೆ ತೊಡಗಿದ ನನಗೆ, ನಂತರ ಅವರ ನಿರರ್ಗಳ ಸ್ವಗತಕ್ಕೆ ಸಾಕ್ಷಿಯಾಗಿ ಮಾತ್ರ ಅಲ್ಲಿದ್ದಂತೆ ಅನಿಸಿತ್ತು. ಜಯಮ್ಮನವರ ತಾದಾತ್ಮ್ಯ ಅಂಥದ್ದು. ಅವರ ಭಾವಾತಿರೇಕದ, ಅಮಿತೋತ್ಸಾಹದ, ಭಕ್ತಿಯ ಪರಾಕಾಷ್ಠೆಯಲ್ಲಿ ಈ ಲೋಕದ ಜಿಗುಟು ಕೊಚ್ಚಿಹೋಗಲೇಬೇಕು!

   ಮೈಸೂರು ಒಡೆಯರ ಕಾಲದಲ್ಲಿ ಸ್ಥಾನಮಾನ ಗಳಿಸಿದ್ದ ಮನೆತನ ಇವರದ್ದು. ತಂದೆ ಎಂ.ವೈ.ಸ್ವಾಮಿ  ಸಿನಿಮಾ ಡಿಸ್ಟ್ರಿಬ್ಯೂಟರ್ ಆಗಿದ್ದವರು. ತಾತ ಯಾಲಕ್ಕಾಚಾರ್ ಪ್ರಮುಖ ಕಂಟ್ರಾಕ್ಟರ್ (ಲಲಿತಮಹಲ್, ದೊಡ್ಡ ಗಡಿಯಾರ, ಚಾಮುಂಡಿ ಬೆಟ್ಟದ ಅರಮನೆ ಇತ್ಯಾದಿ ಕಟ್ಟಡಗಳು ಇವರ ನೇತೃತ್ವದಲ್ಲಿ ಆದದ್ದು.) ಆಗಿನ ಅರಮನೆ ಕಲಾವಿದರಲ್ಲಿ ಒಬ್ಬರಾಗಿದ್ದ ಎಸ್.ಎನ್.ಸ್ವಾಮಿ ಜಯಮ್ಮನವರ ಸೋದರಮಾವ. ಈ ಹಿನ್ನೆಲೆಯಲ್ಲಿ ಬೆಳೆದ ಇವರಿಗೆ ಸಹಜವಾಗಿಯೆ ಕಲೆ-ಕುಶಲತೆಯ ಸೃಜನಶೀಲ ಹುಡುಕಾಟದ ನಂಟು. ತಮ್ಮ ಕಲಾಸಕ್ತಿಗೆ ತಾಯಿಯಿಂದ ಪ್ರಮುಖ ಒತ್ತಾಸೆ ಸಿಕ್ಕಿದ್ದಾಗಿ ಧನ್ಯತೆಯಿಂದ ನೆನಪಿಸಿಕೊಳ್ಳುತ್ತಾರೆ.

   ಮೈಸೂರು ವಿ.ವಿ.ಯಲ್ಲಿ ಸೋಷಿಯಾಲಜಿ ರ್ಯಾಂಕ್ ವಿದ್ಯಾರ್ಥಿಯಾಗಿದ್ದ ಇವರಿಗೆ ಸಿ.ಟಿ.ಐ. ನಲ್ಲಿ (ಈಗಿನ ಕಾವಾ)  ಪ್ರವೇಶ ದೊರಕಿತ್ತಾದರೂ ವೇಳೆ ಹೊಂದಿಸಲಾಗದೆ ಕಲಾವಿದ್ಯಾರ್ಥಿಯಾಗಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಜೆ.ಎಸ್.ಎಸ್.ನ ಡಿ.ಎಡ್. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ ಜಯಮ್ಮನವರಿಗೆ ತಮ್ಮ ನೆಚ್ಚಿನ ಕಲಾಕೃತಿ ರಚನೆಯಲ್ಲಿ ಸಂಪೂರ್ಣ ತೊಡಗಿಕೊಳ್ಳಲು ಸಮಯ ಸಿಕ್ಕಿದ್ದು ನಿವೃತ್ತಿಯ ನಂತರವೆ. ಅವರೇ ಹೇಳುವಂತೆ ನಿದ್ದೆ-ಊಟ-ಜನ-ಗೌಜು ಎಲ್ಲವನ್ನೂ ಮರೆಸಿಬಿಡುವಂಥ ನಂಟು ಕಲೆಯೊಂದಿಗೆ  ಅವರದ್ದು.

  

'ಪೂತನಾ ಸಂಹಾರ'

'ಸಿಂಹಿಕೆ' (ವಿವರ)

ಅಪರೂಪದ ಮಾಧ್ಯಮವಾದ ಶಂಖ-ಚಿಪ್ಪುಗಳನ್ನು ಬಳಸಿ ಕೃತಿ ರಚಿಸುವಂತೆ ತಮ್ಮ ತಾಯಿಯೆ ಮಾರ್ಗದರ್ಶನ ಮಾಡಿದುದಾಗಿ ಹೇಳುತ್ತಾರೆ. ಶಂಖ ಮತ್ತು ಚಿಪ್ಪುಗಳ ವಿವಿಧ ಅಳತೆ, ಮೈವಳಿಕೆ, ಬಣ್ಣಗಳ ಪ್ರಪಂಚದಲ್ಲೇ ತಮ್ಮ ಕಲ್ಪನಾಲೋಕವನ್ನು ಹರಡಿಕೊಂಡು ಕೂರುವ ಜಯಮ್ಮ ಕನ್ನಡ ಸಾಹಿತ್ಯ, ಪುರಾಣ, ಉಪಕಥೆಗಳಲ್ಲಿ ಬರುವ ದೇವ-ದಾನವರನ್ನು ಶಂಖ ಚಿಪ್ಪುಗಳ ವಿಶಿಷ್ಟ ಮೈವಳಿಕೆಗಳಲ್ಲಿ ಮೂರ್ತಗೊಳಿಸುತ್ತಾರೆ. ಚಾಮುಂಡೇಶ್ವರಿ, ಸರಸ್ವತಿ, ಹನುಮಂತ, ಶೇಷಶಾಯಿ ವಿಷ್ಣು, ಭೀಮ-ದುರ್ಯೋಧನರ ಗಧಾಯುಧ್ಧ, ರುಂಡಮಾಲಿನಿ, ಗಜೇಂದ್ರ ಮೋಕ್ಷ, ಪೂತನಾ ಸಂಹಾರ, ಸಿಂಹಿಕೆ,... ಹೀಗೆ ಎಲ್ಲವೂ ಇವರ ಶಂಖು-ಶುಕ್ತಿಯ(ಚಿಪ್ಪು) ವಿಶಿಷ್ಟ ಕೃತಿಗಳು. ರಾಮಾಯಣದ ಒಕ್ಕಣ್ಣ 'ಕಬಂಧ' ಇಲ್ಲಿ ಹಸಿರು ಮಿಶ್ರಿತ ಕಪ್ಪುಚಿಪ್ಪುಗಳಿಂದ ಒಡಮೂಡಿದ್ದಾನೆ. ಸುಮಾರು ನಾಲ್ಕು ಅಡಿ ಎತ್ತರದ ಅಮೂರ್ತ ದೇಹ ಮತ್ತು ಏಳು ಅಡಿ ಉದ್ದದ ಕೈಗಳು ಈತನದ್ದು. ಚಾಮುಂಡೇಶ್ವರಿ, ಗಧಾಯುಧ್ಧ, ಸೀತಾಪಹರಣ ಮುಂತಾದ ಹಲವು ಬೃಹದ್ಗಾತ್ರದ ಕೃತಿಗಳು ಜಯಮ್ಮನವರಿಂದ ರಚಿತಗೊಂಡಿವೆ.


'ಗದಾಯುಧ್ಧ'

'ಕಬಂಧ'

ಶಂಖ ಮತ್ತು ಚಿಪ್ಪುಗಳ ಒರಟು ಮೈವಳಿಕೆ, ಅಪರೂಪದ ವರ್ಣಸಂಯೋಜನೆ ಮತ್ತು ವಿಚಿತ್ರ ಡಿಸೈನ್ ಗಳಿಗೆ ತಕ್ಕ ಪಾತ್ರ ಸೃಷ್ಟಿ ಮಾಡುತ್ತಾರೆ ಜಯಮ್ಮ. ಅದರಿಂದಲೋ ಏನೊ, ಇವರು ಆಯ್ದುಕೊಂಡ ಬಹುಪಾಲು ಪಾತ್ರಗಳು ರಾಕ್ಷಸ ಗಣಗಳದ್ದು! ಬಹುಷಃ ತಮ್ಮ ಅಭಿವ್ಯಕ್ತಿಗೆ ಹೆಚ್ಚು ಸಶಕ್ತ 'ಧ್ವನಿ' ಇದರಿಂದ ದೊರಕಿರಬಹುದು. ದೊಡ್ಡ ದನಿಯಲ್ಲಿ ಚೀತ್ಕರಿಸುವ, ಒಮ್ಮೆಗೇ ಸ್ಫೋಟಗೊಡಂತೆ ಕಾಣುವ ಈ ಕೃತಿಗಳು ಕಲಾವಿದೆಯ ಗಾಢಾನುಭವದ ತೀಕ್ಷ್ಣ ಅಭಿವ್ಯಕ್ತಿಯಂತೆ ಕಾಣುತ್ತವೆ. ಆಂತೆಯೆ ಪ್ರತಿಯೊಂದು ವಿವರವೂ ಸಂಪೂರ್ಣ ಮಗ್ನತೆಯಿಂದ ಸಾಕ್ಷಾತ್ಕರಿಸಿಕೊಂಡಂತಿದ್ದು ಒಟ್ಟಾರೆ ಕಲಾಕೃತಿ ನೋಡುಗನಲ್ಲಿ ಬಹುಕಾಲದವರೆಗೆ ಪ್ರತಿಧ್ವನಿಯ ತರಂಗಗಳನ್ನು ಹೊಮ್ಮಿಸುವಷ್ಟು ಶಕ್ತವಾಗಿವೆ.

   ಪೌರಾಣಿಕ, ಸಾಹಿತ್ಯಿಕ ಪಾತ್ರಗಳಲ್ಲದೆ ಮಾರ್ಷಲ್ ಕಾರ್ಯಪ್ಪ, ರಾಷ್ಟ್ರಪತಿ ಅಬ್ದುಲ್ ಕಲಾಂ ಮುಂತಾದ ತಮ್ಮ ನೆಚ್ಚಿನ ವ್ಯಕ್ತಿಗಳನ್ನೂ ರಚಿಸಿದ್ದಾರೆ ಜಯಮ್ಮ. ಗಾಯಕ ಜೇಸುದಾಸ್ ಕೂಡ ಹಾಡಲಿದ್ದಾರೆ ಇಲ್ಲಿ. ಸದ್ಯಕ್ಕೆ ಹಂಪಿಯ 'ಉಗ್ರನರಸಿಂಹ' ಇವರ ಸ್ಟುಡಿಯೊದಲ್ಲಿ ಅವತರಿಸುತ್ತಿದ್ದಾನೆ. ಮೂವತ್ತು ವರ್ಷಗಳ ಕಲಾನುಭವದಿಂದ ಸಾಕಷ್ಟು ಪರಿಪಕ್ವಗೊಂಡಂತೆ ಕಾಣುವ ಇವರ  ನರಸಿಂಹ ಒಮ್ಮೆ ಮನಸಾರೆ 'ಘರ್ಜಿಸಲು' ತವಕಿಸುತ್ತಿದ್ದಾನೆ!

  
'ಕೊಲ್ಲೂರು ಮೂಕಾಂಬಿಕೆ'

" ಎಷ್ಟ್ ಛೆನಾಗಿದೆ ನೋಡಮ್ಮ,... ಇದ್ ಹೆಂಗ್ ಬಂತು...ನಾನೇ ಮಾಡಿದ್ದಾ ಇದು? ಅಂತ ನಂಗೇ ಆಶ್ಚರ್ಯ ಆಗುತ್ತೆ ಕಣಮ್ಮ!" ಅನ್ನುತ್ತ ಕೆನ್ನೆಯ ಮೇಲೆ ಕೈಯಿಟ್ಟು ಪುಟ್ಟ ಮಗುವಿನಂತೆ ಬೆರಗುಗಣ್ಣು ಬಿಡುತ್ತ ಉದ್ಗರಿಸುತ್ತಾರೆ ಜಯಮ್ಮ. ಕೃತಿರಚನೆಯ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಂಡು ಮಲಗಿದ್ದಾಗ ಕನಸಿನಲ್ಲಿ ಒಂದು ಬಿಳೀಕೈ ತಾನಾಗೇ ಚಿಪ್ಪುಗಳನ್ನು ಜೋಡಿಸಿ ತೋರಿಸಿತಂತೆ. ತಕ್ಷಣ ಎದ್ದು, ಕನಸಿನಲ್ಲಿ ಕಂಡಂತೆಯೆ ಜೋಡಿಸಿ ಅಂಟಿಸಿಟ್ಟರಂತೆ. ಅದು ಅವರ ಮೊದಲ ಮಾಸ್ಟರ್ ಪೀಸ್- 'ಬೆರಳ್ಗೆ ಕೊರಳ್'(ಕುವೆಂಪುರವರಿಂದ ಪ್ರೇರಿತ).

   ಎಪ್ಪತ್ತೆರಡರ ಹರೆಯದ ಜಯಮ್ಮ ತಾವು ಅವಿವಾಹಿತರಾಗಿಯೆ ಉಳಿದುದಕ್ಕೆ ತಮ್ಮ ಹತ್ತಿಕ್ಕಲಾಗದ ಕಲಾಪ್ರೇಮವೇ ಕಾರಣ ಎನ್ನುತ್ತಾರೆ. ತಮ್ಮ ಜೀವನಶೈಲಿಗೆ, ಕಲೆಯ ತುಡಿತಕ್ಕೆ ಹೊಂದುವಾತ ಸಿಗದಿದ್ದರಿಂದ ಹೀಗೆಯೆ ಉಳಿದೆ ಎನ್ನುವ  ಇವರು, ಮದುವೆಯ ಬಂಧನಕ್ಕೆ ಸಿಲುಕದಿರುವುದು ತಮ್ಮ ಅದೃಷ್ಟ ಎಂದು ನಿಟ್ಟುಸಿರುಬಿಡುತ್ತಾರೆ. ಅಕ್ಕ ಸರೋಜಾರವರ ಸಂಸಾರದೊಂದಿಗೆ ತಾವೂ ನೆಲೆಸಿದ್ದಾರೆ. ಸರೋಜಕ್ಕನೇ ಅಮ್ಮ, ಗೆಳತಿ, ತಂಗಿಯ ಕಲಾಕೃತಿಯ ಮೊದಲ ವೀಕ್ಷಕಿ, ವಿಮರ್ಶಕಿ. ಈ ಲೋಕದ ಸಿಹಿಪಾಲೊಂದು ಇವರೊಂದಿಗೇ ನಿರಂತರ ವಾಗಿ ಹೆಪ್ಪುಗಟ್ಟಿರುವುದೇನೋ ಎಂಬಂತೆ ಈ ಅಕ್ಕತಂಗಿಯರು ತಮ್ಮಷ್ಟಕ್ಕೆ ತಾವು ತಮ್ಮದೇ ಭಾವಲಹರಿಯಲ್ಲಿ ಹರಟುತ್ತಾರೆ. ಜಯಮ್ಮನವರ ಕಲಾಕೃತಿಗಳಿಗೆ ಶಾಶ್ವತ ನೆಲೆ ಕಲ್ಪಿಸುವ ಬಗೆಗಿನ ತಳಮಳವೂ ಇವರಲ್ಲಿದೆ.ಕೆಲವು ಕೃತಿಗಳನ್ನು ತಮ್ಮ ಸಂಗ್ರಹಕ್ಕೆ ಪಡೆಯುವುದಾಗಿ ಹೇಳಿದ್ದ ಧರ್ಮಸ್ಥಳದ ವೀರೇಂದ್ರ ಹೆಗಡೆಯವರನ್ನು ಸಾಕಷ್ಟು ಬಾರಿ ಸಂಪರ್ಕಿಸಿದರೂ ಯಾವುದೆ ಪ್ರತಿಕ್ರಿಯೆ ದೊರೆತಿಲ್ಲ. ಇನ್ನು ಮೈಸೂರಿನಲ್ಲೆ ಶಾಶ್ವತ ನೆಲೆ ಕಲ್ಪಿಸುವುದು ಕಲಾಸಕ್ತರ ನೆರವಿನಿಂದ ಮಾತ್ರ ಸಾಧ್ಯವಾಗಬಲ್ಲದು.



ಸರೋಜಕ್ಕನೊಂದಿಗೆ ಜಯಮ್ಮನವರು

ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಬಹುಮಾನ ಗಳಿಸಿರುವ ಇವರ ಕೆಲವು ಕಲಾಕೃತಿಗಳು ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರದರ್ಶನಗೊಂಡು ಮೆಚ್ಚುಗೆಗಳಿಸಿವೆ. ಅಲ್ಲದೆ, ಇವರ 'ಸಿಂಹಿಕೆ' ಮತ್ತು 'ಪೂತನಾ ಸಂಹಾರ'  ಲಂಡನ್ ಮತ್ತು ಚೆನ್ನೈ ಪ್ರದರ್ಶನಕ್ಕೆ ಪ್ರಯಾಣ ಬೆಳೆಸಿವೆ.

".. ಕಾಳಿ,..ಶಿರ್ಸಿ ಕಾಳಿ ಮಾಡ್ಬೇಕು, ತುಂಬ ಚೆನಾಗಿದಾಳೆ ಅವ್ಳು..." ಅನ್ನುವಾಗ ಮೈಮೇಲೆ ಕಾಳಿಯನ್ನೇ ಆವಾಹಿಸಿಕೊಂಡಂತೆ ಒಂದುಕ್ಷಣ ಆವೇಶಗೊಳ್ಳುತ್ತಾರೆ. "ಇನ್ನೂ ಎಷ್ಟೆಲ್ಲಾ ಮಾಡ್ಬೇಕು ಕಣಮ್ಮ,.. ನಂಗೆ ಇನ್ನೂ ಜಾಸ್ತಿ ಆಯಸ್ಸು ಬೇಕಿತ್ತು, ಇದನ್ನೆಲ್ಲ ತುಂಬ ಲೇಟಾಗ್ ಶುರುಮಾಡ್ದೆ.." ಎನ್ನುತ್ತ ಕೈಕೈ ಹೊಸಕಿಕೊಳ್ಳುತ್ತ ತಮ್ಮಷ್ಟಕ್ಕೆ ಗೊಣಗಿಕೊಳ್ಳುವಾಗ ನನಗೆ ನಿಜಕ್ಕು ಸಮಾಧಾನ ಮಾಡುವ ವಿಧಾನ ತಿಳಿಯಲಿಲ್ಲ. ಸ್ವಗತದ ಲಹರಿಯಲ್ಲಿದ್ದ ಅವರ ತಣಿಯದ ಹಸಿವಿಗೆ, ದಣಿಯದ ಚೇತನಕ್ಕೆ, ಅಗಾಧ ಬೆರಗು ಮತ್ತು ಶುದ್ಧ ಸಂಭ್ರಮಕ್ಕೆ ಶಿರಬಾಗುವುದಷ್ಟೆ ನನಗೆ ಸಾಧ್ಯವಾದುದು.

    ನೂರು ವರ್ಷ ಹಳೆಯದಾದ ಇವರ ದೊಡ್ಡ ಮನೆಯ ಮಹಡಿಯ ಹಜಾರದಲ್ಲಿ ಅಷ್ಟೂ ಕೃತಿಪಾತ್ರಗಳು ಒಮ್ಮೆಗೆ ಮಾತಾಡತೊಡಗುತ್ತವೆ. ಕೆಳಗಿನ  ತಮ್ಮ ಸ್ಟುಡಿಯೊದಲ್ಲೆ  ಜಯಮ್ಮನವರ ಎಂದಿನ ವಾಸ್ತವ್ಯ. ನೆಚ್ಚಿನ ಕಲಾಕೃತಿಗಳ ನಡುವೆ ಸಂಭ್ರಮ, ತಳಮಳ, ಉತ್ಸಾಹ, ಕನಸುಗಳನ್ನು ಹೊದ್ದ ಜಯಮ್ಮ ಒಮ್ಮೆ ಮಹಾಯೋಗಿನಿಯಂತೆ, ಮತ್ತೊಮ್ಮೆ ಶುಧ್ಧ ಬೆರಗಿನ ಕೂಸಿನಂತೆ, ಮಗದೊಮ್ಮೆ ಯಾವುದೋ ಅಲೌಕಿಕ ರುಚಿ ಚಪ್ಪರಿಸುವ ಸಂತೃಪ್ತಿಯ ಭಾವದಲ್ಲಿ ತಲೆಯಾಡಿಸುತ್ತ ಪುಳಕಗೊಂಡಂತೆ ಕಣ್ಮುಚ್ಚಿ ಕುಳಿತುಬಿಡುತ್ತಾರೆ.




ಜಯಮ್ಮನವರ ವಿಳಾಸ :

1397, 'ಜಯಾ ಶಂಖು-ಶುಕ್ತಿ ಕಲಾಕೇಂದ್ರ'
ಎಸ್.ಬಿ.ಎಂ. ಎದುರು, ನೆಹರು ವೃತ್ತ
ಇರ್ವಿನ್ ರಸ್ತೆ, ಮೈಸೂರು.

ದೂರವಾಣಿ : 0821-2447181

Thursday, 19 April 2012

..ಒಂದು ಅಗಲಿಕೆಯ ಆಜುಬಾಜು..



      ತುಂಬ ದಿನಗಳ ನಂತರ ನನ್ನನ್ನು ಗಾಢವಾಗಿ ಆವರಿಕೊಂಡ ಸಿನಿಮಾ ಇದು. ಇದೇ ನನಗಾಗಿ ಕಾಯುತ್ತಿತ್ತೊ ಅಥವಾ ನಾನೇ ಇಂಥ ಭಾವುಕತೆಗಾಗಿ ಕಾದಿದ್ದೆನೊ ಗೊತ್ತಿಲ್ಲ! ಆ ಪಾತ್ರಗಳ ಜೊತೆಗೆ ನಾನೂ ಒಂದು ಪಾತ್ರವಾಗಿ ಅವರೊಂದಿಗೇ ಪ್ರಯಾಣ ಹೊರಟುಬಿಟ್ಟ ಅನುಭವ! ಇವರೆಲ್ಲರಿಂದ ತಪ್ಪಿಸಿಕೊಳ್ಳಲೋ ಎಂಬಂತೆ ಹೀಗೆ ಬರೆಯುತ್ತಾ ಕೂತಿದ್ದೀನಿ! ಆದರೂ ಇವರೆಲ್ಲ ನನ್ನ ಸುತ್ತಲೇ ಗಿರಕಿ ಹೊಡೆಯುತ್ತ, ಇವರೇ ನನ್ನ ಹಿಂದೆ ಬಿದ್ದಹಾಗೆ ಕಾಣುತ್ತಿದ್ದಾರೆ! ಹೀಗೆ ನನ್ನ ಬಿಟ್ಟೂಬಿಡದೆ ಬೆನ್ನಟ್ಟಿರುವ ಚಿತ್ರ - 'ಎ ಸೆಪರೇಶನ್'. ಆಸ್ಕರ್ ಒಳಗೊಂಡಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ, ಅಸ್ಗರ್ ಫರ್ಹಾದಿಯ ಇರಾನಿ ಚಿತ್ರ ಇದು. ಇರಾನಿ ಸಿನಿಮಾಗಳ ಬಗ್ಗೆ ನನಗಿದ್ದ ಒಂದು ಬಗೆಯ ಆಪ್ತತೆಯನ್ನು ಇಮ್ಮಡಿಗೊಳಿಸಿದ ಚಿತ್ರ. ಇದರ ಬಗ್ಗೆ ನಾಲ್ಕು 'ಒಳ್ಳೆಯ' ಮಾತುಗಳನ್ನು ಕೇಳಿದ್ದೆನಾದ್ದರಿಂದ, ಅದು ಎಷ್ಟು ನಿಜ ನೋಡೇಬಿಡೋಣ ಎನಿಸಿ, ಕುತೂಹಲದಿಂದ ಚಿತ್ರ 'ತೆರೆದು' ಕೂತೆ. ಅದ್ಯಾವಾಗ, ಯಾವ ಮಾಯದಲ್ಲಿ ನನ್ನ ನಾ ಮರೆತೆನೋ ಗೊತ್ತಿಲ್ಲ.. ಯಾರು ನನ್ನನ್ನು ಪರದೆಯ ಒಳಗೆಳೆದು ಪಕ್ಕ ನಿಲ್ಲಿಸಿಕೊಂಡರೋ ಆ ಪಾತ್ರಗಳನ್ನೇ ಕೇಳಬೇಕು!


 
   
   ಆಕೆ, ಉಪೇಕ್ಷಿಸಿಬಿಡಬಹುದಾದಷ್ಟು ಸಣ್ಣ ಸಣ್ಣ ಕಾರಣ ಮುಂದೊಡ್ಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಹೆಂಡತಿ. ಅಲ್ಝೈಮರ್ ಖಾಯಿಲೆಗೆ ತುತ್ತಾಗಿರುವ ತನ್ನ ವಯಸ್ಸಾದ ತಂದೆಯನ್ನು ಬಿಟ್ಟು ಹೆಂಡತಿ-ಮಗಳೊಂದಿಗೆ ವಿದೇಶಕ್ಕೆ ಹೊರಡಲು ಸಿದ್ಧನಿಲ್ಲದ ಗಂಡ. ಆತ ಬಾಯ್ಬಿಟ್ಟು "ನೀನಿಲ್ಲದೆ ಹೇಗಿರಲಿ ನಾನು?" ಅಂತಲೋ, "ನನ್ನ ಬಿಟ್ಟು ಹೋಗಬೇಡ, ಪ್ಲೀಸ್" ಅಂತಲೋ ದೈನ್ಯದಿಂದ ಹೇಳದೆ, ನಿರ್ಲಿಪ್ತನಾಗಿ "ನಿನ್ನಿಷ್ಟದ ಹಾಗೆ ಮಾಡು" ಅಂದದ್ದು ಅವಳ ಗಾಯಕ್ಕೆ ಉಪ್ಪು ಮೆತ್ತಿದ ಹಾಗಾಗಿದೆ. ಇನ್ನು ನಲವತ್ತು ದಿನಗಳು ಮಾತ್ರ ವ್ಯಾಲಿಡಿಟಿ ಇರುವ ವೀಸಾವನ್ನು 'ಸರಿಯಾಗಿ' ಬಳಸಿಕೊಂಡುಬಿಡುವುದು ಆಕೆಯ ಮುಂದಿರುವ ಸಧ್ಯದ ಗುರಿ. 'ಸರಿಯಾದ' ಕಾರಣ ಇಲ್ಲದ್ದರಿಂದಾಗಿ ಕೋರ್ಟ್ ನಿಂದ ಸಿಗದ ವಿಚ್ಛೇದನ...
 
      ಹಟಮಾರಿತನವನ್ನೇ ಅಚ್ಚು ತೆಗೆದು ಮುಖ ಮಾಡಿಕೊಂಡಂಥ ಆಕೆಯ ಚಹರೆ,..ಇವತ್ತೋ, ನಾಳೆಯೋ ತನ್ನ ಸಭ್ಯತನದ ಮುಖವಾಡ ಕಳಚಿಟ್ಟು 'ಹುಚ್ಚ'ನಾಗಿಯೇಬಿಡಬಹುದು ಎಂಬಂತಿರುವ ಅವನು,..ದೊಡ್ಡ ಶರೀರದೊಳಗೆ ಪುಟ್ಟ ಮಗುವನ್ನು ಹುದುಗಿಸಿಟ್ಟಂತೆ ಮುದ್ದು ಹುಟ್ಟಿಸುವ ಆತನ ವಯಸ್ಸಾದ ತಂದೆ,..ಎಲ್ಲವನ್ನು ಕಂಡೂ, ಯಾವುದಕ್ಕೂ ಪ್ರತಿಕ್ರಿಯಿಸಲಾಗದ, ಮೌನವನ್ನೇ ಹೊದ್ದುಕೂತಿರುವ ಈ ವೃದ್ಧ, ಪುಟ್ಟ ಮಗುವಿನಂತೆ ಸಂಪೂರ್ಣ ಪರಾವಲಂಬಿ. (..ನಾನಾದರೂ ಹೋಗಿ ಅಜ್ಜನಿಗೆ ಸಹಾಯ ಮಾಡೋಹಾಗಿದ್ದಿದ್ದರೆ..ಅಂತ ಕೈ ಕೈ ಹೊಸಕಿಕೊಳ್ಳುವುದೊಂದೇ ನನಗೆ ಸಾಧ್ಯವಾಗಿದ್ದು!)


   

     ಇನ್ನು, ಇಡೀ ಚಿತ್ರದ ಪ್ರತ್ಯಕ್ಷ ಮತ್ತು ಪರೋಕ್ಷ ಪ್ರತಿನಿಧಿ - 'ತೆರ್ಮೆಹ್'. ಈ ಗಲಾಟೆ ಗಂಡಹೆಂಡಿರ ಒಬ್ಬಳೇ ಮುದ್ದು ಮಗಳು. ಆರನೇ ಇಯತ್ತೆಯಲ್ಲಿ ಕಲಿಯುತ್ತಿರುವ ಸೂಕ್ಷ್ಮ ಮನಸ್ಸಿನ ಪುಟ್ಟ ಹುಡುಗಿ. ಇನ್ನೇನು ಉಕ್ಕಿಯೇಬಿಡುವಂತಿರುವ ದುಗುಡವನ್ನು ತನ್ನ ಗಲ್ಲದಲ್ಲಿ ಹೆಪ್ಪಗಟ್ಟಿಸಿಕೊಂಡಿರುವ ತೆರ್ಮೆಹ್ ತನ್ನ ಅಪ್ಪ-ಅಮ್ಮನ ಅವಿವೇಕತನ, ಹಟಮಾರಿ ಧೋರಣೆ, ಸ್ವಕೇಂದ್ರಿತ ನಿಲುವುಗಳ ಒಟ್ಟು ಸಂಕಟದ ಮೊತ್ತ! ಬಾಲ್ಯಸಹಜವಾದ ತುಂಟಾಟ, ಚಂಚಲತೆಗೆ ತನ್ನ ಬಳಿ ಪ್ರವೇಶ ನಿಷಿದ್ಧ ಅನ್ನುತ್ತಿವೆಯೇನೊ ಅನಿಸುವ, ದುಃಖಕ್ಕಷ್ಟೇ ಬೇಲಿ ಹಾಕಿಕೊಂಡಿರುವ ಹುಬ್ಬುಗಳು,..ಶೂನ್ಯವನ್ನೋ ಅಥವಾ ಕೊನೆಯಿರದ ಯಾವುದನ್ನೋ ಎಡೆಬಿಡದೆ ದಿಟ್ಟಿಸುವಂತಿರುವ ಇವಳ ನೋಟ ಈಗಲೂ ನನ್ನ ಬಿಡದೆ ಇಡಿಯಾಗಿ ನುಂಗಿಬಿಟ್ಟ ಹಾಗಿದೆ! 

   
 
     ತನ್ನನ್ನು ಬಿಟ್ಟು ಅಮ್ಮ ವಿದೇಶಕ್ಕೆ ಹೋಗಲಾರಳು ಎಂಬುದು ಗೊತ್ತಿರುವ ಮಗಳು ಅಪ್ಪ-ಅಜ್ಜನೊಂದಿಗೆ ಉಳಿಯುತ್ತಾಳೆ. ಅಪ್ಪ-ಮಗಳು-ಅಜ್ಜನ ನಡುವಿನ ಸಹಜ ಪ್ರೀತಿ, ಹೊಂದಾಣಿಕೆ ಕಂಡಾಗ 'ಅಮ್ಮ'ನ ಬಗ್ಗೆ ಪ್ರೇಕ್ಷಕರಿಗೆ ಅಸಹನೆಯುಂಟಾದರೆ ಆಶ್ಚರ್ಯವಿಲ್ಲ. ಮಗಳಿಗೆ ಗುರುವಿನಂತೆ ಪಾಠ ಹೇಳುತ್ತ, ಗೆಳೆಯನಂತೆ ಆಟವಾಡುತ್ತ, ಅಪ್ಪನನ್ನು ತಾಯಿಯಂತೆ ನೋಡಿಕೊಳ್ಳುತ್ತ, ಹೆಂಡತಿಯ ಹಟಮಾರಿತನಕ್ಕೆ ನಿರ್ಲಿಪ್ತತೆಯೇ ಉತ್ತರವೆಂಬಂತಿರುವ ಅವನ ತಣ್ಣಗಿನ ತಲ್ಲಣ ನಿಮ್ಮನ್ನೂ ತಣ್ಣಗೆ ಮಾಡದಿರದು!

    ಬೇಡಿಕೆಯಂತಹ ಒಂದು ಮಾತೂ ಗಂಡನಿಂದ ಬರದಿದ್ದಾಗ ಅಮ್ಮನ ಮನೆಗೆ ಹೊರಟುನಿಲ್ಲುವ ಆಕೆ, ಮನೆಗೆಲಸಕ್ಕೆಂದು ಒಬ್ಬ ಹೆಂಗಸನ್ನು ಗೊತ್ತುಮಾಡುತ್ತಾಳೆ. ಇವಳು ಧಾರ್ಮಿಕ ಶ್ರದ್ಧೆಯ ಮುಗ್ಧ ಹೆಂಗಸು. ಕರುಣೆ ಉಕ್ಕಿಸುವಂತಿರುವ ದೈನ್ಯ, ನಿಸ್ಸಹಾಯಕ ಭಾವದ ಇವಳು ಐದಾರು ವರ್ಷದ ತನ್ನ ಪುಟ್ಟ ಮಗಳೊಂದಿಗೆ ಹಲವು ದೂರ ಕ್ರಮಿಸಿ ಇವರ ಮನೆಗೆಲಸಕ್ಕೆ ಬರಬೇಕು - ಬಸುರಿ ಬೇರೆ. ತನ್ನ ನಿರುದ್ಯೋಗಿ ಗಂಡನಿಗೂ ತಿಳಿಸದೆ, ಈ ಕೆಲಸ ಒಪ್ಪಿಕೊಂಡಿದ್ದಾಳೆ. ಮೊದಲ ದಿನವೇ ಉಚ್ಚೆಯಿಂದ ನೆನೆದ ಅಜ್ಜನ ಬಟ್ಟೆ ಬದಲಿಸುವುದು ಆಕೆಗೆ ದೊಡ್ಡ ಸವಾಲಿನಂತೆ ಕಾಣುತ್ತದೆ. ಆಕೆಯ ಮುಂದಿರುವ ಪ್ರಶ್ನೆ- ತಾನೊಬ್ಬ ಹೆಂಗಸಾಗಿ ಪರಪುರುಷನ ಬಟ್ಟೆಬದಲಿಸುವುದು -ಅದೂ ಎಂಬತ್ತರ ಆಜುಬಾಜಿನ, ಅಸಹಾಯಕ ಮುದುಕನಾದರೂ- ಪಾಪದ ಕೆಲಸವಲ್ಲವೇ? ಎಂಬುದು. ಧರ್ಮದ ಹೆಸರಿನ ನಂಬಿಕೆಗಳು ಮಾನವೀಯತೆಯನ್ನೂ ಮರೆಸಿಬಿಡುವಷ್ಟು ಪ್ರಬಲವಾಗಿರಬೇಕೆ? ಮಾನವ ಧರ್ಮವನ್ನೂ ಮೀರಿ ನಿಲ್ಲುವ ಇಂತಹ ದಿಕ್ಕೆಡಿಸುವ ದ್ವಂದ್ವಗಳಿಗೆ ಅರ್ಥವಿದೆಯೇ? ಎಂಬ ಪ್ರಶ್ನೆಗಳ  ಆ ಕ್ಷಣ ನಿಮ್ಮ ಮನಸ್ಸಿನ ಪರದೆಯ ಮೇಲೆ ಎದ್ದು ನಿಲ್ಲುತ್ತವೆ.

        ಇಲ್ಲಿ ನಿಧಾನವಾಗಿ ಒಂದೊಂದು 'ಸಣ್ಣ' ವಿಷಯವೂ ದೊಡ್ಡ ಸಮಸ್ಯೆಯಾಗಿಬಿಡಬಲ್ಲ ಯಾವುದೋ ವಿಕ್ಷಿಪ್ತ ಮನಸ್ಥಿತಿ ಆವರಿಸಿಕೊಳ್ಳುತ್ತಿದೆ..ಗಾಢವಾದ ಸ್ತಬ್ಧತೆಯೊಂದು ಚಿಕ್ಕ ಅಲುಗಾಟಕ್ಕೂ ಸ್ಫೋಟಗೊಳ್ಳಲು ಸನ್ನದ್ಧವಾಗಿರುವಂಥ ಸೂಕ್ಷ್ಮವೇದಿಕೆ ಸಿದ್ಧವಾಗಿದೆ... ಈ ಹೊಸ ವ್ಯವಸ್ಥೆಯೊಂದಿಗೆ ಅನಿವಾರ್ಯವಾಗಿ ಸಖ್ಯ ಬೆಳೆಸಿಕೊಳ್ಳಬೇಕಾದ ಅಜ್ಜ, ಅಜ್ಜನ ಮಗ, ಆತನ ಮಗಳು, ಕೆಲಸದಾಕೆ, ಆಕೆಯ ಪುಟ್ಟ ಮಗು - ಈ ಎಲ್ಲರ ಒಳಗೂ ಈ ದಾರುಣ ಸ್ತಬ್ಧತೆ ಸ್ಫೋಟಗೊಳ್ಳಲು ಕಾದಿರುವಂತೆ... ಸಣ್ಣ ಸಣ್ಣ ಭಯ, ಆತಂಕ, ದುಃಖ, ಹತಾಶೆ ಎಲ್ಲವೂ ನಿಧಾನವಾಗಿ ಸಂಗ್ರಹಗೊಳ್ಳುತ್ತ ಕಡೆಗೊಮ್ಮೆ ಜ್ವಾಲಾಮುಖಿಯಂಥ ಕೋಪದ ರೂಪದಲ್ಲಿ ಸಿಡಿಯುವ ದಿನವೂ ಬಂದೇಬರುತ್ತದೆ! ...'ಮನೆಯ ಯಜಮಾನ, ಕೆಲಸದಾಕೆಯ ಮೇಲೆ ಕಳ್ಳತನದ ಆರೋಪ ಹೊರಿಸಿ ಮನೆಯಿಂದ ಬಲವಂತವಾಗಿ ಹೊರದಬ್ಬಿದ್ದರಿಂದ ಜಾರಿಬಿದ್ದ ಆಕೆಗೆ ಗರ್ಭಪಾತವಾಯಿತು, ಇದು ಕೊಲೆಗೆ ಸಮನಾದ ಅಪರಾಧ'... ಎಂಬ ಘಂಟಾಘೋಷದ ಹೇಳಿಕೆ ಆ ಸ್ಫೋಟದ ಕೊನೆಯ ನಿಲ್ದಾಣದಂತೆ ಕೇಳಿಸುತ್ತದೆ. ಇನ್ನು ಎಂಥ ಬರ್ಬರ ಯುದ್ಧಗಳಾಗುವುದಕ್ಕೂ ಸೂಕ್ತ ಮನೋಭೂಮಿಕೆ ಸಿದ್ಧ! ಈ ಎಲ್ಲ ಪಾತ್ರಗಳ ಒಳಗೂ-ಹೊರಗೂ ನಡೆಯುವ ತುಮುಲಗಳ ನಡುವೆ ನಿಮಗೆ ನಿಮ್ಮನ್ನೆ ಕಾಣಿಸುತ್ತ ಸಾಗುತ್ತದೆ ಈ ಚಿತ್ರ.


      ಕೋರ್ಟ್ ವಿಚಾರಣೆಯ ಪಡಸಾಲೆಯಲ್ಲಿ ನಿಂತಿರುವ ಈ ಎಲ್ಲ ಪಾತ್ರಗಳಿಗೂ ಮಾತಾಡಲು, ಯೋಚಿಸಲು, ಕೋಪಗೊಳ್ಳಲು, ಸಿಡಿದುಬೀಳಲು ಈಗ ಸ್ಪಷ್ಟವಾದ ಕಾರಣ ಮತ್ತು ಗುರಿಯಿದೆ! ಮತ್ತೆ ತಮ್ಮ ತಮ್ಮ ದೈನಂದಿನ ಸ್ತಬ್ಧತೆಯಲ್ಲಿ ಅನಾಮಿಕರಂತೆ ಕಳೆದುಹೋಗುವುದು ಎಂಥ ನೆಮ್ಮದಿಯ ವಿಷಯ ಎಂಬುದು ಹೀಗೆ ಪರಸ್ಪರ ವಿಷಕಾರುತ್ತ ಅಬ್ಬರಿಸುತ್ತಿರುವ ಈ ಎಲ್ಲರಿಗೂ ಅನಿಸಿರಬಹುದಾದ ಸನ್ನಿವೇಶ ಅದು. ಈ ಸಮಸ್ಯೆಗೆ ಮೂಲವಾದರೂ ಯಾವುದು ಎಂಬ ಪ್ರಶ್ನೆಗೆ ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ಕಾರಣ ಹುಡುಕಿಕೊಂಡು, ತಮ್ಮ ತಮ್ಮ ಪರವಾಗಿಯೇ ಫಮರ್ಾನು ಹೊರಡಿಸುವ ಶೂರರು! ಪ್ರಙ್ಞಪೂರ್ವಕವಾಗಿ ತಮ್ಮ ತಪ್ಪುಗಳನ್ನು ಮುಚ್ಚಿಟ್ಟು ಮತ್ತೊಬ್ಬನೆಡೆಗೆ ಬೆರಳು ತೋರಿಸುತ್ತಿರುವ ಇವರುಗಳಿಗೆ ಮಾತ್ರ ತಾವು ಹೇಳುತ್ತಿರುವ ಸುಳ್ಳುಗಳು, ತಮ್ಮ ತಮ್ಮ ತಪ್ಪುಗಳು ನಿಚ್ಚಳವಾಗಿ ಗೊತ್ತು!

     ಕಾನೂನಿನ ದೃಷ್ಟಿಯಲ್ಲಿನ 'ಸತ್ಯ' ಮತ್ತು ಸಂಬಂಧಗಳ ದೃಷ್ಟಿಯಲ್ಲಿನ 'ಸತ್ಯ' - ಇವೆರಡರಲ್ಲಿ ಯಾವುದು ಹೆಚ್ಚು 'ತೂಕದ್ದು'?! 'ಸತ್ಯ' ಎಂಬುದಕ್ಕೆ ಎಷ್ಟೊಂದು ಮುಖಗಳು, ಮುಖವಾಡಗಳು ಇರುವುದು ಸಾಧ್ಯ! ಎನಿಸಿ ಬೆಚ್ಚಿಬೀಳುವ ಸರದಿ ನಿಮ್ಮದಾಗುತ್ತದೆ! ಇನ್ನು ಈ ಸಮಸ್ಯೆ ಹೇಗೆ ಕೊನೆಗೊಳ್ಳುತ್ತೆ ಅನ್ನೋದನ್ನು ಮಾತ್ರ ನೀವೇ ಕಂಡು ತಿಳಿಯಬೇಕು.


 

     ಕಳ್ಳಿ ಎಂಬ ಆರೋಪ ಹೊತ್ತು, ಗರ್ಭಪಾತಕ್ಕೊಳಗಾಗಿ, ದಣಿವು, ಮುಗುಜರ, ರೇಜಿಗೆ, ದುಃಖ ಎಲ್ಲವೂ ಒಟ್ಟಿಗೆ ಆಗಿರಬಹುದಾದ ಕೆಲಸದಾಕೆ, ಆಕೆಯ ನಿರುದ್ಯೋಗಿ - ಮುಂಗೋಪಿ ಗಂಡ, ತಮ್ಮ ತಮ್ಮ ನಿತ್ಯದ ಜಂಜಡಗಳಲ್ಲೇ ಬಳಲಿ ಬೆಂಡಾಗಿರುವ ಈ ಮನೆಯ ಯಜಮಾನ-ಆತನ ಹೆಂಡತಿ, ಎಲ್ಲವನ್ನೂ ಕಂಡೂ ಮರುಮಾತಾಡಲಾರದ ಅಸಹಾಯಕ ಅಜ್ಜ, ಈ ಎಲ್ಲಾ 'ದೊಡ್ಡವರ' ಜಂಜಾಟಗಳ ನಡುವೆ ತಮ್ಮ ಸಹಜ ನಗು ಮರೆತು, ಆತಂಕ-ದುಗುಡಗಳನ್ನೇ ಉಸಿರಾಡುತ್ತಿರುವ ಆ ಪುಟ್ಟ ಮಕ್ಕಳು - ಎಲ್ಲರೂ ಒಂದೊಂದು ಪ್ರತ್ಯೇಕ ಕಾದಂಬರಿಗಳಂತೆ ಕಾಣುತ್ತಾರೆ! ಈ ಕಾದಂಬರಿಗಳಂಥ ಎಲ್ಲಾ ಪಾತ್ರಗಳಿಂದ ಮತ್ತೊಂದು ಕಥೆ ನಿಮ್ಮ ಮುಂದೆ ಬಿಚ್ಚಿಕೊಳ್ಳುತ್ತದೆ. ಈ ಕಥೆಯೊಳಗಿನ ಉಪಕಥೆಗಳು ನಿಮ್ಮ ಗ್ರಹಿಕೆ, ನೋಟಕ್ಕೆ ಅನುಗುಣವಾಗಿ ಹೆಣೆದುಕೊಳ್ಳುತ್ತಾ ಸಾಗುತ್ತವೆ. ಈ ಹೆಣಿಗೆಗೆ ಕೊನೆಯೆಂಬುದೇ ಇಲ್ಲವೇನೋ ಎನಿಸಿ ಗಾಬರಿಯೂ ಆಗುತ್ತೆ! ನೀವು ಈ ಪಾತ್ರಗಳಲ್ಲಿ ಯಾವ ಪಾತ್ರದ ಎಷ್ಟು ಸನಿಹ ನಿಲ್ಲುತ್ತೀರಿ? ಯಾವ ಕೋನಗಳಿಂದ ಹೇಗೆ ಕಾಣುತ್ತೀರಿ? ಯಾವ ಪಾತ್ರದೊಂದಿಗೆ ಎಷ್ಟು ಮಾತನಾಡುತ್ತೀರಿ? ಎಂಬುದೆಲ್ಲ ನಿಮಗೇ ಬಿಟ್ಟದ್ದು, ನಿರ್ದೇಶಕ ಎಂಬ ಸೂತ್ರಧಾರ ನಿಮಗೆ ನೆನಪಾಗುವುದೇ ಸಿನಿಮಾ ಮುಗಿದ ಮೇಲೆ! ಅಷ್ಟು ಸಹಜವಾದ ಸಾತತ್ಯ ಸಾಧ್ಯವಾಗುವುದೇ ಈ ಚಿತ್ರದ ಹೆಗ್ಗಳಿಕೆ.


 


     'ಸಣ್ಣ'ದೆಂಬುದು ಸಣ್ಣದಲ್ಲದ, ದೊಡ್ಡದೆಂಬುದು 'ದೊಡ್ಡ'ದಲ್ಲದ, ನಿಜ-ಸುಳ್ಳು, ಸರಿ-ತಪ್ಪು, ನೋವು-ನಗು ಎಲ್ಲವೂ ವಿಚಾರಣೆಯ ಯಾವ 'ನೋಟೀಸೂ' ಕೊಡದೆ ಸ್ಥಾನಪಲ್ಲಟಗೊಳ್ಳಬಹುದಾದ ಈ ಅಸಾಧಾರಣ, ದಾರುಣ ಬದುಕು! ಈ ಬದುಕಿನ ತೀವ್ರತೆಯ ತೆಕ್ಕೆಯಲ್ಲಿ ನಾವು-ನೀವು-ಯಾರೂ 'ಸ್ವಂತ' ಚಲನೆಯ ಪಥವನ್ನು ಆಯ್ದಕೊಳ್ಳುವ ಹಕ್ಕುದಾರರಲ್ಲ! ಇಲ್ಲಿ ಕೇವಲ ನಮ್ಮ ಉಸಿರಾಟ ಒಂದೇ ನಮ್ಮ 'ಸ್ವಂತದ್ದು'! ..ಸಮಾಜ, ಸಂಬಂಧಗಳೇ ಹಾಗೇನೊ.. ಪೂರ್ಣವೆಂಬ ಅಪೂರ್ಣತೆ ಮತ್ತು ಅಪೂರ್ಣವೆಂಬ ಪೂರ್ಣತೆಯ ಹಾಗೆ! ಇದಕ್ಕೆ ನಗುವುದು ಅಥವಾ ಅಳುವುದು ಮಾತ್ರ ನಿಮ್ಮದೇ ಸ್ವಂತ ಆಯ್ಕೆ!

     ...ಕೊನೆಗೂ ಆ ದಂಪತಿಗಳಿಗೆ ಉಳಿಯುವುದು ವಿಚ್ಛೇದನದ ಆಯ್ಕೆಯೇ. ಕೋರ್ಟ್ ವಿಚಾರಣೆಯೊಂದಿಗೆ ಶುರುವಾಗುವ ಚಿತ್ರ ಮುಗಿಯುವುದೂ ಅಂಥದ್ದೇ ಸನ್ನಿವೇಶದೊಂದಿಗೆ. ಪುಟ್ಟ ತೆರ್ಮೆಹ್ ತಾನು ಮುಂದಿನ ಬದುಕನ್ನು ಕಳೆಯುವುದು ಅಪ್ಪನೊಂದಿಗೋ? ಅಮ್ಮನೊಂದಿಗೋ? ಎಂಬ ಅನಿವಾರ್ಯ ಆಯ್ಕೆ ಮಾಡಿಕೊಳ್ಳಬೇಕಿದೆ... ದುಗುಡವಲ್ಲದೆ ಮತ್ತೇನನ್ನೂ ಕಂಡಿರದ ಆ ಗಲ್ಲದ ಮೇಲಿನ ಬೆಚ್ಚನೆಯ ಕಣ್ಣೀರು ಅವಳದೋ?...ನಿಮ್ಮದೋ?...ಎಂಬುದು ಗೊತ್ತಾಗದ ಹಾಗೆ ಕೋರ್ಟ್ ಆವರಣದ ಮಬ್ಬುಗತ್ತಲು ನಿಮ್ಮ ಕಣ್ಣುಗಳಿಗೂ ಆವರಿಸಿಕೊಳ್ಳತ್ತದೆ....

 
 




 

Friday, 4 November 2011

ವ್ಯಾನ್ಗೋನ ಸೂರ್ಯಕಾಂತಿಗಳು


   ವಿನ್ಸೆಂಟ್ ವ್ಯಾನ್ಗೊ  -  ಸಾರ್ವಕಾಲಿಕ ಜನಪ್ರಿಯತೆ ಪಡೆದ, ಬಹುಚರ್ಚಿತ ಕಲಾವಿದರಲ್ಲಿ ಮೊದಲ ಹೆಸರು. ಕಿತ್ತು ತಿನ್ನುವ ಅಸ್ಥಿರತೆ, ತನ್ನನ್ನೇ ಮರೆಸುವ ಭಾವತೀವ್ರತೆಯ ಜೊತೆಗೆ ತಾನು ಕಂಡ ಎಲ್ಲವನ್ನೂ ಉತ್ಕಟವಾಗಿ ಬದುಕಿದವನು,  ಬದುಕಿಸಿದವನು ಈ  ಡಚ್ ಕಲಾವಿದ (1853-1890).
   ಅಂತೆಯೇ ಆತನ ಚಿತ್ರಗಳ ಕಣಕಣದಲ್ಲೂ ಅಸಾಧಾರಣ ಜೀವಂತಿಕೆ ನಿರಂತರವಾಗಿ ಸ್ಫೋಟಗೊಳ್ಳುತ್ತದೆ...ಚಿತ್ರಗಳ ಸುರುಳಿಗಳು ನಮ್ಮನ್ನು ಮತ್ತೆ ಬಿಡದಂತೆ ಸೆಳೆದುಕೊಳ್ಳುತ್ತವೆ....ಕ್ಯಾನ್ವಾಸಿನ ಶುದ್ಧ ಹಳದಿ, ನೀಲಿ, ಕಪ್ಪು, ಕೆಂಪುಗಳು ನಮ್ಮ ಕಣ್ಣುಗಳಲ್ಲಿ ನಿಲ್ಲಲಾರದೆ ಮುಖ, ಮೈಗೆ ಮೆತ್ತಿಕೊಳ್ಳುತ್ತವೆ...

   ಫ್ರಾನ್ಸಿನ  ಆರ್ಲ್ಸ್ ನಲ್ಲಿ ಕಳೆದ ಕೊನೆದಿನಗಳಲ್ಲಿ ವ್ಯಾನ್ಗೋನಿಂದ ರಚಿತವಾದ ಅದ್ಭುತ ಸರಣಿ ಚಿತ್ರ - 'ಸೂರ್ಯಕಾಂತಿಗಳು'    (1887-89). ಲೋಕದ ಅಷ್ಟೂ ಚೈತನ್ಯ ಈ ಹೂಗಳಲ್ಲೇ ಅಡಗಿ ಚಿಮ್ಮುತ್ತಿವೆ!  ತನ್ನನ್ನೂ, ಜನರನ್ನೂ, ಗಿಡ, ಮರ, ಹೂವು, ಸೂರ್ಯ,...ಲೋಕದ ಪ್ರತಿಯೊಂದನ್ನೂ ಒಂದೇ ತೀವ್ರತೆಯಲ್ಲಿ ಕಂಡು, ಉತ್ಕಂಠತೆಯಲ್ಲಿ ಅನುಭವಿಸಿದ ವ್ಯಾನ್ಗೊ,  ತನ್ನ ನೋವು, ಅಸ್ಥಿರತೆ, ಒಂಟಿತನ, ತೀವ್ರ ಪ್ರೀತಿ, ನಿಷ್ಠುರತೆ, ನಿರಾಸೆ...ಎಲ್ಲವುಗಳಲ್ಲಿ ಅದ್ದಿ ತೆಗೆದ ಬಣ್ಣಗಳಲ್ಲಿ ಜೀವಂತೆಕೆಗೆ ಹೊಸ ಪರಿಭಾಷೆ ಒದಗಿಸಿದ ಅದ್ಭುತ ಕಲಾವಿದ .

ವ್ಯಾನ್ಗೋನ 'ಸೂರ್ಯಕಾಂತಿಗಳು' ನಮ್ಮ ಕವಿ ಎಸ್. ಮಂಜುನಾಥ್ ಅವರಿಗೆ ಕಂಡಿದ್ದು ಹೀಗೆ...


ವ್ಯಾನ್ಗೋನ ಸೂರ್ಯಕಾಂತಿಗಳು

ಕಣ್ಣ ತುಂಬಿದ್ದ ಹಲವು ನೋಟಗಳ ಕಸ
ಉರಿದುಹೋದಂತಾಯಿತ್ತು
ಆ ಹೂವುಗಳ ಬಣ್ಣದ ಮಿಂಚು ತಾಗಿ
ಶ್ರೇಷ್ಠ ವ್ಯಾನ್ಗೋನ ಚಿತ್ರಗಳ ಸಂಪುಟದಲ್ಲಿದ್ದ ಸೂರ್ಯಕಾಂತಿಗಳ ಚಿತ್ರ
ಕಾಲದ ಹೃದಯದಂತೆ ಮಿಡಿಯುತ್ತಿತ್ತು ನಮ್ಮ ಕ್ಷಣಗಳನ್ನು
ಕಂಡಷ್ಟೂ ನಿಮಿಷಗಳ ನಮಗೆ ನೀಡುತ್ತಿತ್ತು
ಉಳಿಸಿಕೊಂಡವು ನನ್ನನ್ನು ಆ ಹೂವುಗಳು




ಉಕ್ಕಿ ಬರುವ ಲಾವಾರಸದ ಸುಳಿಗಳಂತೆ ಸುತ್ತಿದ್ದವು
ಎಲ್ಲ; ನಡೆದ ದಾರಿ ಬದಿಯ ಪೈನ್ ಮರ ಸಾಲು ಪೊದೆಗಳು
ನೆರಳು ಮತ್ತು ಆಕಾಶವೂ
ಘೋರ ವ್ಯಗ್ರತೆಯಲ್ಲಿ ನರಳಿದ ಉಗ್ರ ಆತ್ಮದ್ವೇಷಿಗೆ
ತನ್ನ ಕೋಣೆಯೊಳಗಡಿಯಿಟ್ಟದ್ದೇ ಬಡಿದಿತ್ತು
ಹೂದಾನಿಯೊಳಗಿದ್ದ ಜ್ವಾಲಾಮುಖಿಯ ಸ್ತಬ್ಧಸ್ಫೋಟ
ದಂಡಿಸಲು ಎರಗಲಿದ್ದ ಸಿಡಿಲುಗಳಂತೆ
ಡಿಕ್ಕಿ ಹೊಡೆದು ಉರಿದುಹೋಗಲಿದ್ದ ಸೂರ್ಯರುಗಳಂತೆ
ಬಿರಿದು ದಳವುದುರುವುದರಲ್ಲಿದ್ದ ಎದ್ದಿದ್ದ ಬಾಗಿದ್ದ
ಹೂವುಗಳು ದೇಟುಗಳೂ ಬೋಳಾಗಿದ್ದ ದಿಂಡುಗಳೂ
ಕಂಡ ವ್ಯಾನ್ಗೋ ಅವುಗಳನ್ನು
ಪ್ರಳಯವಾಗುವುದರಲ್ಲಿ ಇದ್ದ ತನ್ನನ್ನು



ಮೆಲುಗಾಳಿಯಲ್ಲೀಗ ಮೆಲ್ಲ ಹೊರಳಾಡುತ್ತದೆ ಅದೇ
ಹೊಲದ ನೆತ್ತಿ ಮೇಲೆ
ಬೆಳಗುವ ಹಳದೀ ಮೊಗಗಳ ತೂಗುತ್ತ ಮೂಡುತ್ತದೆ
ಸಂಜೆವಿಹಾರಕ್ಕೆ ಬಂದವನಿಗೆ
ಚಿರಂತನದ ಫಲವತ್ತಾದ ಮಣ್ಣು ಎತ್ತಿ ತೋರಿದ ಒಂದು
ಮೊಗವಷ್ಟೇ-ಮಹಾನ್ ವ್ಯಾನ್ಗೋ
ಭಾವಿಸುತ್ತಿರುವೆ ಕೃತಙ್ಞತೆಯೊಂದಿಗೆ ಇಲ್ಲಿ
ಈ ಹೊಲದ ಅಸಂಖ್ಯ ಸಂಗಾತಿಗಳ ನಡುವೆ ನೀನೊಬ್ಬನಾಗಿ
ಶೂನ್ಯದ ಒಳತಿರುಳ ದೀರ್ಘಸುಶುಪ್ತಿಯಲಿ ಮುಳುಗಿರುವಂತೆ ನಿನ್ನನ್ನೂ


                                                           - ಎಸ್. ಮಂಜುನಾಥ್



Monday, 31 October 2011

"ಚಿತ್ರಕಲೆಯ ಹುಟ್ಟು, ಬೆಳವಣಿಗೆಯ ಇತಿಹಾಸ - ಒಂದು ಸಂಕ್ಷಿಪ್ತ ಪರಿಚಯ"





  
   "ಬಾಲ್ಯದಲ್ಲಿ ಪ್ರತಿಯೊಬ್ಬನೂ ಚಿತ್ರಕಲಾವಿದನೇ, ಆದರೆ ಬೆಳೆದು ದೊಡ್ಡವನಾದಮೇಲೂ ಶುದ್ಧ ಗ್ರಹಿಕೆ ಮತ್ತು ಅಪ್ಪಟ ಸೃಜನಶೀಲತೆಯನ್ನು ಉಳಿಸಿಕೊಳ್ಳುವುದೇ ಕಲಾವಿದನಿಗಿರುವ ದೊಡ್ಡ ಸವಾಲು!"- ಹೀಗೆಂದವರು ಖ್ಯಾತ ಫ್ರೆಂಚ್ ಕಲಾವಿದ ಪಿಕಾಸೊ.

    ನಾವೆಲ್ಲ ಕಂಡಂತೆ ಮಕ್ಕಳ ಮೊದಲ ಸೃಜನಶೀಲ ಮಾಧ್ಯಮ ಬಹುಷಃ ಚಿತ್ರಕಲೆಯೇ. ಪುಸ್ತಕದ ಬಿಳಿಹಾಳೆಯಿಂದ ಹೊರಗೆ ಮನೆಯ ಗೋಡೆ, ನೆಲ, ಟೇಬಲ್, ನಿಲುವುಗನ್ನಡಿ,..ಹೀಗೆ ಸಪಾಟಾದ ಎಲ್ಲವೂ ಮಕ್ಕಳ ಚಿತ್ರಪ್ರಪಂಚದ ಕ್ಯಾನ್ವಾಸ್ಗಳಾಗಿಬಿಟ್ಟಿರುತ್ತವೆ!  ಪ್ರಾಯಶಃ ನಿಮ್ಮ ಬಾಲ್ಯ ಕೂಡ ಇದಕ್ಕೆ ಹೊರತಾಗಿರಲಿಕ್ಕಿಲ್ಲ! ಅಂದರೆ, ಮಗುವಿನ ಗ್ರಹಿಕೆ, ಅಭಿವ್ಯಕ್ತಿ ಮೊದಲು ರೂಪುಗೊಳ್ಳುವುದು 'ನೋಟ'ದ ಮೂಲಕ. ತನ್ನ ಸುತ್ತಲ ಪ್ರಪಂಚವನ್ನು ಗ್ರಹಿಸುವುದು, ಅರಿಯುವುದು ಮತ್ತು ಅಭಿಪ್ರಾಯ ರೂಪಿಸಿಕೊಳ್ಳುವುದು ದೃಶ್ಯಗ್ರಹಿಕೆಯಿಂದಲೇ. ಅಂತೆಯೇ ದೃಶ್ಯಮಾಧ್ಯಮ ಮನುಷ್ಯನ ಮೂಲ ಸಂವೇದನೆಯ ಸಹಜ ಅಭಿವ್ಯಕ್ತಿ ಮಾಧ್ಯಮ. ಇದಕ್ಕೆ ಸರಿಸುಮಾರು  35,000 ದಿಂದ 50,000 ವರ್ಷಗಳ ಇತಿಹಾಸವಿದೆ !


       'ಚಿತ್ರಕಲೆ' ಎಂಬುದು ಕೇವಲ ಬಣ್ಣ, ಮೈವಳಿಕೆ ಮುಂತಾದ ಬಾಹ್ಯರೂಪಕ್ಕೆ ಮಾತ್ರ ಸೀಮಿತವಾದುದಲ್ಲ. ಇದು ಮನುಷ್ಯನ ಮನಸ್ಸನ್ನು ಬಿಂಬಿಸುವ ಕನ್ನಡಿಯೂ ಹೌದು. ತನ್ನ ಸುತ್ತಲಿನ ದೃಶ್ಯಜಗತ್ತನ್ನು ಪರಿವೀಕ್ಷಿಸುತ್ತ, ಅವುಗಳ ಮೂಲಕ ತನ್ನನ್ನು ತಾನು ಅರಿತುಕೊಳ್ಳುವ ಸಂವೇದನಾಶೀಲ ಮಾನವನ ಸಹಜ ಅಭಿವ್ಯಕ್ತಿ ಮಾಧ್ಯಮ - 'ಚಿತ್ರಕಲೆ.' ಮನಸ್ಸಿನ ಭಾವಸ್ವರೂಪವನ್ನು ದೃಶ್ಯರೂಪದಲ್ಲಿ  ಕಟ್ಟಿಕೊಡುವ ಈ ವಿಶಿಷ್ಟ ಮಾಧ್ಯಮದ ಹುಟ್ಟು-ಬೆಳವಣಿಗೆಯ ಇತಿಹಾಸವನ್ನು ಸಂಕ್ಷಿಪ್ತರೂಪದಲ್ಲಿ ಇಲ್ಲಿ ಚರ್ಚಿಸಲಾಗಿದೆ. ಚಿತ್ರಕಲೆಯ ಹುಟ್ಟು -ಬೆಳವಣಿಗೆ-ಇಂದಿನ ಸ್ವರೂಪ ಇವುಗಳನ್ನು ನಾಲ್ಕು ಪುಟಗಳಲ್ಲಿ ಚರ್ಚಿಸುವುದು ಕಷ್ಟಸಾಧ್ಯವಾದುದು. ಈ ನಿಟ್ಟಿನಲ್ಲಿ ಭಾರತೀಯ ಚಿತ್ರಕಲಾ ಇತಿಹಾಸವನ್ನು ಮುಂದಿರಿಸಿ, ಅದಕ್ಕೆ ಪೂರಕವಾಗಿ ಜಾಗತಿಕ ಚಿತ್ರಕಲೆಯನ್ನು ಪರಿಚಯಿಸುತ್ತ, ಒಟ್ಟಾರೆ ಸಂಕ್ಷಿಪ್ತನೋಟವನ್ನು ಕೊಡುವ ಪ್ರಯತ್ನ ಇದಾಗಿದೆ. ಓದುಗರನ್ನು ಚಿತ್ರಕಲೆಯ ಕುರಿತು ಮತ್ತಷ್ಟು ಸವಿವರ ಅಧ್ಯಯನದೆಡೆಗೆ ಒಯ್ಯಲು ಈ ಪ್ರಬಂಧ ಸಹಕಾರಿಯಾಗಬಲ್ಲದೆಂಬ ಆಶಯ ನನ್ನದು.


       ಹಳೆ ಶಿಲಾಯುಗದ ಕೊನೆಯ ಹಂತದಲ್ಲಿ, ಅಂದರೆ ಸುಮಾರು 35,000 ವರ್ಷಗಳಷ್ಟು ಹಿಂದೆ ರಚಿಸಲ್ಪಟ್ಟ ಕಲಾಕೃತಿಗಳು ಮೊಟ್ಟಮೊದಲಿಗೆ ದೊರೆತಂಥವು. ಆದರೆ, ಇವೇ ಮೊದಲು ರಚಿಸಲ್ಪಟ್ಟಿವೆ ಎನ್ನಲಾಗದು. ಸಾವಿರಾರು ವರ್ಷಗಳಿಂದ ಹಂತಹಂತವಾಗಿ ರೂಪಾಂತರಗೊಂಡು ರಚಿತವಾದವುಗಳು ಇವು. 19 ನೇ ಶತಮಾನದ ಕೊನೆಯಲ್ಲಿ ಯುರೋಪ್ನ ಪಶ್ಚಿಮ ಭಾಗಗಳಲ್ಲಿ ಗುಹಾಚಿತ್ರಗಳು ಶೋಧಿಸಲ್ಪಟ್ಟವು. ಸ್ಪೇನಿನ ಅಲ್ತಾಮಿರ ಗುಹೆಗಳಲ್ಲಿ ಮೊಟ್ಟಮೊದಲಿಗೆ ಇಂಥ ಚಿತ್ರಗಳು ಕಂಡುಬಂದವು.
ಲಾಸ್ಕಾಕ್ಸ್ ಗುಹಾಚಿತ್ರಗಳು

ಚರಿತ್ರೆಯ ಮೊಟ್ಟಮೊದಲ ಕಲಾಕೃತಿ ಎಂದು ನಂಬಲಾಗಿರುವ ಮತ್ತೊಂದು ಚಿತ್ರವೆಂದರೆ, ಅದು ಮಾನವನ ಮುಂಗೈಯ ಛಾಪು. ಅಂಗೈಯನ್ನು ಕಲ್ಲಿನ ಗೋಡೆಯ ಮೇಲಿರಿಸಿ, ಕೊಳವೆಯ ಮೂಲಕ ಕಡುಹಳದಿ ಬಣ್ಣವನ್ನು ಊದಿ, ಕೈಯನ್ನು ಹೊರತೆಗೆದಾಗ ಕಾಣುವ ಮುಂಗೈಯ ಆಕಾರದ ಚಿತ್ರಗಳಿವು. ಆಗ್ನೇಯ ಫ್ರಾನ್ಸಿನ  ಪೆಕ್-ಮರ್ಲ್ ಎಂಬಲ್ಲಿ 30,000 ವರ್ಷಗಳಷ್ಟು ಹಳೆಯದೆನ್ನಬಹುದಾದ ಇಂಥ ಚಿತ್ರಗಳು ಸಿಕ್ಕಿವೆ.

    ಮಾನವ ಚಿತ್ರಬರೆಯುವುದನ್ನು ಪ್ರಾರಂಭಿಸಿದ್ದು ಅಲಂಕರಣ ಅಥವಾ ಮನರಂಜನೆಗಾಗಿ ಅಲ್ಲ, ಬದಲಿಗೆ ತನ್ನ ಮನೋಬಲ ವೃಧ್ಧಿಸಿಕೊಳ್ಳಲು! ಆದಿಮಾನವನ ಬದುಕಿನ ಅಸ್ತಿತ್ವ ಭಾಗಶಃ ತನ್ನ ಬೇಟೆಯ ಮೇಲೆ ಅವಲಂಬಿಸಿತ್ತು. ಗುಹೆಗಳಲ್ಲಿ ವಾಸಿಸುತ್ತಿದ್ದ ಆತನ ಆಯುಧಗಳೂ ಸೀಮಿತವಾಗಿದ್ದವು. ಸಣ್ಣಪುಟ್ಟ ಹಕ್ಕಿ, ಮೀನುಗಳಿಗಿಂತ ಜಿಂಕೆ, ಕಡವೆ, ಕೋಣಗಳಂಥ ದೊಡ್ಡ ಮಿಕಗಳ ಬೇಟೆ, ಗುಂಪಿನಲ್ಲಿ ವಾಸಿಸುತ್ತಿದ್ದ ಆತನ ಬಹುಮಟ್ಟಿನ ಆಹಾರವನ್ನು ಪೂರೈಸುತ್ತಿತ್ತು. ಸಹಜವಾಗಿ ಆತ ಇಂಥ ಬೇಟೆಗಳ ಕುರಿತು ಹೆಚ್ಚು ಯೋಚಿಸುತ್ತಿದ್ದಿರಬೇಕು. ಹಾಗಾಗಿ ಬಹುಷಃ ಗುಹೆಯ ಗೋಡೆಯ ಮೇಲ್ಮೈಯಲ್ಲಿ ಪ್ರಾಣಿಗಳ ಅಸ್ಪಷ್ಟ ಆಕಾರ ಕಂಡು, ಸುಟ್ಟ ಇದ್ದಲಿನಿಂದ ಹೊರರೇಖೆಗಳನ್ನು ರಚಿಸಿರಬಹುದು. ನಂತರ ಈ ಅಭ್ಯಾಸ ಮುಂದುವರೆದಂತೆ, ಕೊನೆಗೆ ತಾನೇ ಸ್ವತಂತ್ರವಾಗಿ ಚಿತ್ರರಚಿಸಲು ಸಮರ್ಥನಾಗಿರಬಹುದು ಎಂದು ಊಹಿಸಲಾಗಿದೆ. ಬೇಟೆಗಾಗಿ ಗುಂಪಿನಲ್ಲೇ ಹೋಗುತ್ತಿದ್ದನಾದರೂ ಸಾಕಷ್ಟು ಪ್ರಬಲ ಆಯುಧಗಳಿಲ್ಲದಿದ್ದರಿಂದ ಬಲಿಷ್ಠ ಪ್ರಾಣಿಗಳ ಜೊತೆ ಸೆಣಸುವುದೆಂದರೆ ಜೀವನ್ಮರಣದ ಘಟನೆಯೇ ಆಗಿರುತ್ತಿತ್ತು. ಬೇಟೆಯ ಪ್ರಸಂಗಗಳು ಆತನ ಪಾಲಿಗೆ ಅತ್ಯಂತ ಕಠಿಣ ಸವಾಲಿನದ್ದಾಗಿತ್ತು. ಇಂಥ ಸಂದರ್ಭಗಳಲ್ಲಿ ತನ್ನ ಮನೋಬಲವನ್ನು ವೃಧ್ಧಿಸಿಕೊಳ್ಳುವ ಸಲುವಾಗಿ ಅವನು ಮೊರೆಹೋಗಿದ್ದು ಚಿತ್ರಗಳಿಗೆ!


    ತಾನು ಬೇಟೆಯಾಡಬೇಕಾದ ಪ್ರಾಣಿಯ ಚಿತ್ರವನ್ನು ಬರೆಯುತ್ತಿದ್ದ ಆತ, ಬೇಟೆಗೆ ಹೋಗುವ ಮುನ್ನ ಸಾಂಕೇತಿಕವಾಗಿ ಚಿತ್ರದ ಪ್ರಾಣಿಯನ್ನು ಬೇಟೆಯಾಡುತ್ತಿದ್ದ! ಅಂದರೆ, ಚಿತ್ರಿತ ಪ್ರಾಣಿಯನ್ನು ತನ್ನ ಆಯುಧಗಳಿಂದ ಗಾಯಗೊಳಿಸಿ ಕೊಂದರೆ, ಅದನ್ನು ತನ್ನ ವಶಗೊಳಿಸಿಕೊಂಡ ಅನುಭವ ಪಡೆಯುತ್ತಿದ್ದ. ಇದರಿಂದ ಮಾನಸಿಕ ಸ್ಥೈರ್ಯ, ಸ್ಫೂರ್ತಿ ದೊರೆಯುತ್ತಿದ್ದುದರಿಂದ ನಿಜವಾದ ಬೇಟೆ ಆತನಿಗೆ ಸಲೀಸಾಗುತ್ತಿತ್ತು! ಹೀಗೆ ಪ್ರತೀಸಲ ಬೇಟೆಗೆ ಹೊರಡುವ ಮುನ್ನ ಪ್ರಾಣಿಗಳ ಚಿತ್ರರಚನೆ ಮತ್ತು ಅವುಗಳನ್ನು ಚಿತ್ರದಲ್ಲೇ ಕೊಲ್ಲುವ ಪರಿಪಾಠ ರೂಢಿಸಿಕೊಂಡಿರಬೇಕು. ಮನುಷ್ಯಾಕೃತಿಗಿಂತಲೂ ಎತ್ತರವಾದ, ಬೃಹದ್ಗಾತ್ರದ ಕಾಡೆಮ್ಮೆ, ಕಾಡುಕೋಣ, ಕಡವೆ, ಜಿಂಕೆ, ಕಾಡುಹಂದಿ, ಸಾರಂಗ,... ಹೀಗೆ ಹತ್ತುಹಲವು ಪ್ರಾಣಿಗಳ ಚಿತ್ರಗಳು ಅಚ್ಚರಿಹುಟ್ಟಿಸುವಷ್ಟು ಸಹಜವಾಗಿವೆ! ಅಷ್ಟು ಪುರಾತನ ಮಾನವನಿಂದ ಸಾಧ್ಯವಾದ ಅಸಾಧಾರಣ ರಚನೆ ನಿಜಕ್ಕೂ ಅದ್ಭುತವಾದುದು!
ಅಲ್ತಾಮಿರ ಗುಹಾಚಿತ್ರ

   ಚಿತ್ರರಚನೆ ಎಂಬುದು 'ಕಲೆ'ಯಾಗಿ ರೂಪುಗೊಂಡು, ಅಲಂಕಾರಿಕ ಮಾಧ್ಯಮವಾಗಿ ಮಾರ್ಪಡುವ ಮೊದಲು ಚಾಲ್ತಿಯಲ್ಲಿದ್ದುದು ಇಂಥ, ಮನೋಬಲವೃಧ್ಧಿಗೆ ಪೂರಕವಾದ ಆಚರಣೆಗಳಲ್ಲಿ. ಈ ಹಿನ್ನೆಲೆಯಲ್ಲಿ ಇವನ್ನು 'ಮಾಂತ್ರಿಕ ಚಿತ್ರಗಳು' ಎಂದೂ ಕರೆಯಬಹುದು. ಇಂದಿಗೂ ಭಾರತದಲ್ಲಿ 'ತಾಂತ್ರಿಕ ಕಲೆ' ಎಂದು ಕರೆಯಲ್ಪಡುವ ಕಲಾಪ್ರಕಾರವೂ ಇಂಥ ಆಚರಣೆಗಳಿಗೆ ಪೂರಕವಾಗಿಯೇ ಉಳಿದುಬಂದಿದೆ. ಪೂಜೆ ಪುನಸ್ಕಾರಗಳಲ್ಲಿ ಅಥವಾ ಸಾಂಪ್ರದಾಯಿಕ ಆಚರಣೆಗಳಲ್ಲಿ ರಚಿಸಲ್ಪಡುವ ಕೆಲವು ರಂಗೋಲಿಗಳು, ರೇಖಾಚಿತ್ರಗಳೂ ಕೂಡ ಸಾಂಕೇತಿಕ ಚಿತ್ರಗಳಾಗಿ ಇಂದಿಗೂ ಚಾಲ್ತಿಯಲ್ಲಿರುವುದನ್ನು ನೀವು ಕಂಡಿರಬಹುದು.

    ಆದಿಮಾನವನು ಚಿತ್ರರಚನೆಗೆ ಭೂಮಿಯಲ್ಲಿ ಸಿಗುವ ಹಳದಿ, ಕೆಂಪು ಮಣ್ಣಿನ ಗಟ್ಟಿ, ಕಲ್ಲಿದ್ದಲಿನ ಕಪ್ಪು, ಹಸಿರು ಕಲ್ಲು - ಇವುಗಳಿಂದ ಬಣ್ಣ ತಯಾರಿಸಿಕೊಂಡಿರಬಹುದು.  ಇವುಗಳೊಂದಿಗೆ ಪ್ರಾಣಿಗಳ ರಕ್ತವನ್ನೊ, ಕೊಬ್ಬನ್ನೊ ಬೆರೆಸಿ ಬಳಸಿರಬಹುದು. ರಕ್ತದ ಬಳಕೆ ಮಾಡಿದ್ದರೆ ಅದು ಕಾಡುಹಂದಿಯದ್ದೇ ಆಗಿರಬಹುದು (ಇದು ಇತರೆ ಪ್ರಾಣಿಗಳ ರಕ್ತದಂತೆ ಬೇಗ ಹೆಪ್ಪುಗಟ್ಟದಿರುವುದರಿಂದ) ಎಂದು ಇತಿಹಾಸಕಾರರು ಊಹಿಸುತ್ತಾರೆ. ಹಾಗೆಯೇ ಗಿಡದ ರೆಂಬೆಯ ತುದಿಯನ್ನು ಜಜ್ಜಿ, ಬ್ರಷ್ನಂತೆ ಬಳಸಿರಬಹುದೆಂದು ಅಂದಾಜಿಸಲಾಗಿದೆ. ಅಲ್ಲದೆ, ಕೆಲವು ಚಿತ್ರಗಳಲ್ಲಿ ಬೆರಳುಗಳ ಅಚ್ಚಿನ ಗುರುತೂ ಸಿಗುವುದರಿಂದ, ಬೆರಳುಗಳಿಂದಲೂ ಬಣ್ಣತುಂಬಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

   ಭಾರತದಲ್ಲಿ ಮೆದಲಬಾರಿಗೆ ಇತಿಹಾಸಪೂರ್ವಕಾಲದ ಚಿತ್ರಗಳು ಮಧ್ಯಪ್ರದೇಶದ ಭೀಂಬೆಟ್ಕಾ ಗುಹೆಗಳಲ್ಲಿ ಕಾಣಸಿಕ್ಕಿವೆ. ಅವುಗಳನ್ನು ಸುಮಾರು 20,000 ದಿಂದ 50,000 ವರ್ಷಗಳಷ್ಟು ಹಳೆಯದೆಂದು ಗುರ್ತಿಸಲಾಗಿದೆ. ಉತ್ತರಪ್ರದೇಶ, ಗುಜರಾತ್, ರಾಜಸ್ಥಾನ, ಕರ್ನಾಟಕ, ಆಂಧ್ರ, ತಮಿಳ್ನಾಡು, ಕೇರಳದಲ್ಲಿ ಇಂಥ ನೂರಾರು ಚಿತ್ರಗಳು ಬೆಳಕಿಗೆ ಬಂದಿವೆ.


    ಮಾನವ ನಾಗರಿಕನಾಗುತ್ತಾ ಹೋದಂತೆಲ್ಲ, ಆತನ ಜೀವನಶೈಲಿ, ರೂಢಿಗಳಿಗೆ ತಕ್ಕಂತೆ ಚಿತ್ರಕಲೆಯೂ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತ ಸಾಗಿತು. ಮಾನವನ ಮನೋಲ್ಲಾಸ, ಆಕಾಂಕ್ಷೆ, ಸುಪ್ತ ಭಾವನೆಗಳನ್ನು ಬಿಂಬಿಸುವ ಸಾಂಕೇತಿಕ ಪ್ರತಿನಿಧಿಯಾಗಿ, ಮಹತ್ವದ ಮಾಧ್ಯಮವಾಗಿ ಚಿತ್ರಕಲೆ ಬೆಳೆಯುತ್ತ ಬಂದಿದೆ. ಸಿಂಧೂ ನಾಗರಿಕತೆಯ ಸಂಸ್ಕೃತಿಯಲ್ಲಿ ಕಂಡುಬರುವ ಚಿತ್ರಗಳಲ್ಲಿ ಅಲಂಕಾರಿಕ ಅಂಶಗಳು ಕಾಣಸಿಗುತ್ತವೆ. ನಾಗರಿಕತೆ ಬೆಳೆದಂತೆಲ್ಲಾ ಮನುಷ್ಯನ ಸೌಂದರ್ಯಪ್ರಙ್ಙೆಯೂ ಬೆಳೆದದ್ದನ್ನು ಚಿತ್ರಗಳ ಮೂಲಕ ಕಾಣಬಹುದು.  ಚಿತ್ರಕಲೆಯು ಆಯಾ ನಾಗರೀಕತೆಯ ಹುಟ್ಟು, ಬೆಳವಣಿಗೆ, ಆಚಾರ-ವಿಚಾರ, ಉಡುಗೆ-ತೊಡುಗೆ ಮುಂತಾದ ಪ್ರಮುಖ ವಿಷಯಗಳನ್ನು ಬಿಂಬಿಸುವ ಮಾಧ್ಯಮವಾಗಿರುವುದರಿಂದಲೇ ಇತಿಹಾಸ ರಚನೆಯಲ್ಲಿ ಮತ್ತು ಸಮಾಜಶಾಸ್ತ್ರದ ಅಧ್ಯಯನದಲ್ಲಿ ಪ್ರಮುಖ ಆಕರವಾಗಿದೆ. ಜಗತ್ತಿನ ಎಲ್ಲ್ಲಾ ಪ್ರಮುಖ ನಾಗರೀಕತೆಯ ಹುಟ್ಟು-ಬೆಳವಣಿಗೆಗಳ ಸಾಧಾರ ಅಧ್ಯಯನಕ್ಕೆ ಸಹಕಾರಿಯಾಗುವ ಅಂಶಗಳಲ್ಲಿ ಚಿತ್ರಕಲೆ ಪ್ರಮುಖವಾದುದು.

    ಸಾಮಾಜಿಕ ಶಿಷ್ಟತೆಯ ಪರಿಧಿಯಲ್ಲಿ 'ಚಿತ್ರಕಲೆ' ಒಂದು ಅಸಾಮಾನ್ಯ, ಚಮತ್ಕಾರಿಕ ವಿದ್ಯೆಯಾಗಿ ಪರಿಗಣಿಸಲ್ಪಟ್ಟಂಥದ್ದು.  ಭಾರತೀಯ ಸಾಂಪ್ರದಾಯಿಕ ಸಮಾಜದಲ್ಲಿ,  ಚಿತ್ರಕಲೆ ಎಂಬುದು ಆದರ್ಶ ನಾಗರೀಕತೆಯ ಲಕ್ಷಣಗಳಲ್ಲಿ ಒಂದೆನಿಸಿತ್ತು. 64 ರಾಜವಿದ್ಯೆಗಳಲ್ಲಿ ಇದೂ ಒಂದು. ಚಿತ್ರಕಲೆಯ ಅರಿವಿಲ್ಲದವನು ಪರಿಪೂರ್ಣ 'ಸುಸಂಸ್ಕೃತ' ನಾಗರೀಕನೆನಿಸುತ್ತಿರಲಿಲ್ಲ. ಚಿತ್ರಕಲೆಗೆ ಭಾರತೀಯ ಸಂಸ್ಕೃತಿಯಲ್ಲಿ ಸಿಕ್ಕ ಪ್ರಾಶಸ್ತ್ಯ ಅನನ್ಯವಾದುದು. 'ಸೌಂದರ್ಯ'ಕ್ಕೆ ಪರ್ಯಾಯ ಎಂಬಷ್ಟರ ಮಟ್ಟಿಗೆ ಭಾರತೀಯ ಸೌಂದರ್ಯೋಪಾಸನೆಯ ಅವಿಭಾಜ್ಯ ಮಾಧ್ಯಮವಾಗಿ 'ಚಿತ್ರಕಲೆ' ಸ್ಥಾನಪಡೆದಿದೆ. ಅಷ್ಟೇ ಅಲ್ಲದೆ ಕಲಾವಿದನ ಆಧ್ಯಾತ್ಮದ ಸಾಧನೆಯ ಮಾರ್ಗವಾಗಿಯೂ ಚಿತ್ರಕಲೆ ಗೌರವಿಸಲ್ಪಟ್ಟಿದೆ. 'ಚಿತ್ರ' ಎಂಬುದಕ್ಕೆ ಆಕೃತಿ, ಶುಭ, ಚಮತ್ಕಾರ, ಆಶ್ಚರ್ಯ, ಸೋಜಿಗ, ಅದ್ಭುತ, ವಿಸ್ಮಯ ಎಂಬ ಹಲವು ಅರ್ಥಗಳಿವೆ. ಒಟ್ಟಾರೆ - ಅದ್ಭುತವಾದ, ಸುಂದರವಾದ, ಹಲವು ವರ್ಣಗಳಿಂದ ಕೂಡಿದ ರಚನೆಯೇ 'ಚಿತ್ರ' ಎಂಬುದು ಭಾರತೀಯ ಚಿತ್ರಕಲೆಗಿರುವ ಶಿಷ್ಟ - ಸಾಂಪ್ರದಾಯಿಕ ವ್ಯಾಖ್ಯಾನ.
ರಾಜಸ್ಥಾನಿ ಚಿಕಣಿಚಿತ್ರಣ

'ಕಲಾನಾಂ ಪ್ರವರಂ ಚಿತ್ರಂ
ಧರ್ಮ ಕಾಮಾರ್ಥ ಮೋಕ್ಷದಂ'

(ಚಿತ್ರವು ಕಲೆಗಳಲ್ಲಿ ಶ್ರೇಷ್ಠ. ಧರ್ಮ, ಅರ್ಥ, ಕಾಮ, ಮೋಕ್ಷ ಚತುರ್ವಿಧ ಪುರುಷಾರ್ಥಗಳನ್ನೂ ಕೊಡಬಲ್ಲದು) ಎನ್ನುತ್ತದೆ ವಿಷ್ಣುಧರ್ಮೋತ್ತರ ಪುರಾಣ. ವಾತ್ಸ್ಯಾಯನನ ಕಾಮಸೂತ್ರ, ವಿಷ್ಣುಧರ್ಮೋತ್ತರ ಪುರಾಣ, ವಿನಯಪಿಟಕ, ಬೃಹತ್ ಸಂಹಿತೆ ಮುಂತಾದ ಗ್ರಂಥಗಳಲ್ಲಿ ಚಿತ್ರಕಲೆಯ ಮಹತ್ವ, ಶಾಸ್ತ್ರಬದ್ಧ ನಿಯಮಗಳು, ಪ್ರಮಾಣ, ಚಿತ್ರ ಪರಿಕರಗಳ ತಯಾರಿಕೆ ಇತ್ಯಾದಿ ವಿಷಯಗಳನ್ನು ಸವಿವರವಾಗಿ ಹೇಳಲಾಗಿದೆ.( ಇವು ಕ್ರಿ.ಶ. ಎರಡನೇ ಶತಮಾನದಿಂದ ಕ್ರಿ.ಶ. ಸುಮಾರು ಹದಿನೈದನೆ ಶತಮಾನದ ನಡುವೆ ರಚಿತವಾದ ಗ್ರಂಥಗಳು).

    ಸಮಾಜದ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಜೀವನದೊಂದಿಗೆ ಚಿತ್ರಕಲೆಯ ಅವಿನಾಭಾವ ಸಂಬಂಧವಿರುವುದನ್ನು ಕಾಣಬಹುದು. ವೇದಗಳ ಕಾಲದಲ್ಲಿ(ಕ್ರಿ.ಪೂ. 1500 ರಿಂದ ಕ್ರಿ.ಪೂ. 500) ಭಾರತದ ಚಿತ್ರಕಲೆ ಧಾರ್ಮಿಕ ಸ್ವರೂಪ ಪಡೆದುಕೊಂಡಿತು. ಶಿಷ್ಟ ಸಂಪ್ರದಾಯದ ಪರಿಧಿಯಲ್ಲಿ ರೂಪುಗೊಳ್ಳುತ್ತ ಬೆಳೆದ ಚಿತ್ರಕಲೆಯನ್ನು ಧಾರ್ಮಿಕ ತತ್ವಗಳ ಪ್ರಚಾರಪ್ರಕ್ರಿಯೆಯಲ್ಲಿ ತೀವ್ರವಾಗಿ ಬಳಸಿಕೊಳ್ಳಲಾಯಿತು. ಧರ್ಮಪ್ರಚಾರ ಎಂಬುದು ಸಾಮ್ರಾಜ್ಯವಿಸ್ತರಣೆ ಮತ್ತು ಸುಧಾರಣೆಯಲ್ಲಿ ಪ್ರಮುಖಪಾತ್ರವಹಿಸಿತ್ತಾದ್ದರಿಂದ ಧಾರ್ಮಿಕ ವಕ್ತಾರರು ತಮ್ಮ ಧರ್ಮದ ಸಾರವನ್ನು, ತತ್ವ-ವಿಚಾರಗಳನ್ನು ಸಶಕ್ತ ಮಾಧ್ಯಮವಾದ ಚಿತ್ರಗಳ ಮೂಲಕ ಅನಕ್ಷರಸ್ಥರಿಗೂ ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ತೊಡಗಿಸಿಕೊಂಡರು. ಹಾಗೆ ನೋಡಿದಲ್ಲಿ ಚಿತ್ರಕಲೆ ಎಂಬುದು ಸಾಹಿತ್ಯ ಅಥವಾ ಧಾರ್ಮಿಕ ತತ್ವಗಳನ್ನು ನಿರೂಪಿಸುವ 'ನಿರೂಪಣಾ ಮಾಧ್ಯಮ' ವಾಗಿದ್ದುದು (Illustration)  ವ್ಯಾಪಕವಾಗಿ ಕಂಡುಬರುತ್ತದೆ.
  ಪದ್ಮಪಾಣಿ ಬುದ್ಧ - ಅಜಂತಾ ಭಿತ್ತಿಚಿತ್ರ

    ಭಾರತದಲ್ಲಿ ಕ್ರಿ.ಶ. 12ನೇ ಶತಮಾನದಲ್ಲೇ ಕಾಗದದ ಬಳಕೆಯಿತ್ತಾದರೂ 15 ನೇ ಶತಮಾನದವರೆಗೆ ಹೆಚ್ಚಾಗಿ ಕಂಡುಬರುವುದು ಭಿತ್ತಿಚಿತ್ರಗಳು. ನಂತರದ ಕಾಲದಲ್ಲಿ ಭಿತ್ತಿಚಿತ್ರಗಳೊಂದಿಗೆ ಬಟ್ಟೆ, ಮರದ ಹಲಗೆ, ಕಾಗದ ಮುಂತಾದ ಹಿನ್ನೆಲೆಯಲ್ಲಿ ರಚಿತವಾದ ಚಿಕಣಿಚಿತ್ರಗಳೂ (Miniature Paintings) ಕಂಡುಬರುತ್ತವೆ. ಶಾತವಾಹನ, ವಾಕಾಟಕ, ಗುಪ್ತ, ಚಾಲುಕ್ಯ, ರಾಷ್ಟ್ರಕೂಟ, ಪಲ್ಲವ, ಚೋಳ, ವಿಜಯನಗರ ಮತ್ತು ನಾಯಕ ದೊರೆಗಳ ಆಡಳಿತಾವಧಿಯಲ್ಲಿ ಚಿತ್ರಕಲೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು ಮತ್ತು ಹಲವಾರು ಭಿತ್ತಿಚಿತ್ರಗಳು, ಪ್ರತಿಚಿತ್ರಗಳ ರಚನೆಯಾಯಿತು. ಧರ್ಮದೊಂದಿಗಿನ ಚಿತ್ರಕಲೆಯ ನಂಟು ಕೇವಲ ಭಾರತಕ್ಕಷ್ಟೇ ಸೀಮಿತವಾದುದಲ್ಲ. ಜಾಗತಿಕ ನೆಲೆಯಲ್ಲೂ ಚಿತ್ರಕಲೆಯು ಧಾರ್ಮಿಕ ನಿರೂಪಣೆಯ ಮಾಧ್ಯಮವಾಗಿ ತನ್ನ ವ್ಯಾಪಕತೆಯನ್ನು, ಮಹತ್ವವನ್ನು ಕಂಡುಕೊಂಡಿತ್ತು. ಭಾರತದಲ್ಲಿ ಬೌದ್ಧ, ಹಿಂದೂ, ಜೈನ ಧರ್ಮಗಳು ಚಿತ್ರಕಲೆಯನ್ನು ಪ್ರಚಾರ ಮಾಧ್ಯಮವಾಗಿಯೂ, ಧರ್ಮತತ್ವಗಳ ಸಂರಕ್ಷಣಾ ಮಾಧ್ಯಮವಾಗಿಯೂ ಬಳಸಿಕೊಂಡವು. ಅಜಂತಾದ ಗುಹೆಗಳಲ್ಲಿ ರಚಿಸಲಾದ ಬುದ್ಧನ ಜಾತಕ ಕಥೆಗಳು ( ಕ್ರಿ. ಪೂ. 2ನೇ ಶತಮಾನದಿಂದ ಕ್ರಿ.ಶ. 4ನೇ ಶತಮಾನ), ಕನರ್ಾಟಕದ ಬಾದಾಮಿಯ ಗುಹಾಚಿತ್ರಗಳು, ಲೇಪಾಕ್ಷಿ, ಹಂಪಿ, ತಂಜಾವೂರು ಇತ್ಯಾದಿ ಪ್ರದೇಶಗಳಲ್ಲಿ ರಚಿತವಾದ ಭಿತ್ತಿಚಿತ್ರಗಳೆಲ್ಲವೂ ಧಾರ್ಮಿಕ ಶಾಸ್ತ್ರ/ಗ್ರಂಥ/ಪುರಾಣಗಳ ನಿರೂಪಣಾ ಚಿತ್ರಗಳು. ಯುರೋಪಿನ ರಾಷ್ಟ್ರಗಳಲ್ಲಿಯೂ ಚಿತ್ರಕಲೆ ಧರ್ಮಪ್ರಚಾರಕ ಸಾಧನವಾಗಿ/ ಮಾಧ್ಯಮವಾಗಿ ವ್ಯಾಪಕವಾಗಿ ಬಳಕೆಯಾಯಿತು. ಮುಖ್ಯವಾಗಿ ಇಟಲಿಯ ಸಿಸ್ಟೈನ್ ಛಾಪೆಲ್ನಲ್ಲಿ  ಮೈಕೆಲಾಂಜಲೋನಿಂದ ರಚಿತವಾದ ಅದ್ಭುತಚಿತ್ರಗಳನ್ನು ಉದಾಹರಿಸಬಹುದು (ಕ್ರಿ.ಶ. 15-16ನೇ ಶತಮಾನ). 
  ಮೈಕೆಲಾಂಜಲೋನಿಂದ ರಚಿತ, ಸಿಸ್ಟೈನ್ ಚಾಪೆಲ್ ನಲ್ಲಿರುವ ಭಿತ್ತಿಚಿತ್ರ

    ಯುರೋಪಿನ ರೆನೆಸಾನ್ಸ್ (ಪುನರುಜ್ಜೀವನ ಯುಗ) ನಂತರದ ಕ್ಲಾಸಿಸಿಂ, ನಿಯೋ ಕ್ಲಾಸಿಸಿಂ, ರೋಮ್ಯಾಂಟಿಸಿಸಂ ಚಿತ್ರಣ ಶೈಲಿಗಳ ಏಕತಾನತೆ, ಕ್ಲೀಷೆ ಮತ್ತು ನಿಯಮಬದ್ಧತೆಯನ್ನು ಕಟುವಾಗಿ ಟೀಕಿಸುವ ಆಧುನಿಕ ಅವಧಿ 19ನೇ ಶತಮಾನದ ಪೂರ್ವಾರ್ಧದ ಮೊದಲ ದಶಕಗಳಲ್ಲಿ ರೂಪುಗೊಂಡಿತು. ಈ ಅವಧಿಯಲ್ಲಿ ಉಂಟಾದ ಸಾಮಾಜಿಕ, ವೈಜ್ಞಾನಿಕ ಕ್ರಾಂತಿಗಳ ಜೊತೆಜೊತೆಗೆ ಚಿತ್ರಕಲಾಕ್ಷೇತ್ರದಲ್ಲೂ ಬದಲಾವಣೆಯ ಬಿರುಗಾಳಿ ಬೀಸಿತು.
ಸ್ಯೂರನ ( Suerat ) ಪಾಯಿಂಟಲಿಸಂ ಶೈಲಿಯ ಚಿತ್ರ

ಎಡ್ಗರ್ ದೆಗಾ ರಚಿಸಿರುವ 'ಬ್ಯಾಲೆ ನರ್ತಕಿಯರು' ಸರಣಿ ಚಿತ್ರ ( ಇಂಪ್ರೆಷನಿಸಂ)
ಕಲಾವಿದರು ಚಿತ್ರಮಾಧ್ಯಮದ ಮೂಲಕ ವೈಜ್ಞಾನಿಕ, ಮನೋವಿಶ್ಲೇಷಣಾತ್ಮಕ ನೆಲೆಯಲ್ಲಿ 'ಸತ್ಯ'ದ ಹುಡುಕಾಟಕ್ಕೆ ತೊಡಗಿದರು. ಈ ಮನಸ್ಥಿತಿಯ ಕಲಾವಿದನು ಜಗತ್ತನ್ನು ತನ್ನದೇ ವಿಶಿಷ್ಟ 'ದೃಷ್ಟಿ'ಯಿಂದ ನೋಡಿ, ಗ್ರಹಿಸಿದ ಒಳನೋಟವನ್ನು ಚಿತ್ರಮಾಧ್ಯಮದ ಮೂಲಕ ಅಭಿವ್ಯಕ್ತಿಸಿ ಒಟ್ಟಾರೆ ದೃಶ್ಯಗ್ರಹಿಕೆ ಮತ್ತು ದೃಶ್ಯಮಾಧ್ಯಮದ ಅಗಾಧ ಸಾಧ್ಯತೆಗಳನ್ನು ತೆರೆದಿಡುವ ಮಹತ್ವದ ಅವಧಿ ಇದಾಯಿತು. ರಿಯಲಿಸಂ, ಇಂಪ್ರೆಷನಿಸಂ, ಎಕ್ಸ್ಪ್ರೆಷನಿಸಂ, ಫಾವಿಸಂ, ಪಾಯಿಂಟಲಿಸಂ, ದಾದಾಯಿಸಂ, ಸರ್ರಿಯಲಿಸಂ, ಕ್ಯೂಬಿಸಂ, ಅಮೂರ್ತತೆ( Abstraction) ಇತ್ಯಾದಿ ಹತ್ತುಹಲವು ಪಂಥಗಳು ಚಾಲ್ತಿಗೆ ಬಂದವು. ಇವುಗಳಲ್ಲದೆ ಎರಡನೇ ಜಾಗತಿಕ ಮಹಾಯುದ್ಧದ ನಂತರದ ಕಾಲದಲ್ಲಿ ರೂಪುಗೊಂಡ ಆಧುನಿಕೋತ್ತರ ಕಲಾಪಂಥಗಳು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಭಾವ ಮೂಡಿಸಿದವು.
ಪ್ಯಾಬ್ಲೊ ಪಿಕಾಸೋನ 'ವೀಪಿಂಗ್ ವುಮನ್' ( ಅಮೂರ್ತ ಚಿತ್ರಣ)
ಎಡ್ವರ್ಡ್ ಮುಂಕ್ ನ ಚಿತ್ರ - 'ದ ಸ್ಕ್ರೀಮ್' (Expressionism)


   



















ಪಹಾಡಿ - ಗುಲೇರ್ ಶೈಲಿ


ಭಾರತೀಯ ಚಿತ್ರಕಲೆ ಮೂಲತಃ ಸಾಂಪ್ರದಾಯಿಕ ನೆಲೆಗಟ್ಟಿನ ಮೇಲೆ ರೂಪುಗೊಂಡಿತಾದರೂ ಕಾಲಕ್ಕನುಗುಣವಾಗಿ ತನ್ನ ಸ್ವರೂಪದಲ್ಲಿ ಅನಿವಾರ್ಯ ಬದಲಾವಣೆಗಳನ್ನೊಳಗೊಳ್ಳತ್ತ ಸಾಗಿಬಂದಿದೆ.
ಮೊಗಲ್ ಶೈಲಿಯ ಚಿತ್ರ







ವಿದೇಶೀಯರ ಅತಿಕ್ರಮಣ, ಆಡಳಿತದಿಂದಾಗಿ ಸಾಮಾಜಿಕ, ಸಾಂಸ್ಕೃತಿಕ ಜೀವನದ ಮೇಲೆ ಆದ ಕೊಡುಕೊಳ್ಳುವಿಕೆ, ಪ್ರಭಾವಗಳು  ಸಹಜವಾಗಿಯೇ ಚಿತ್ರಕಲಾ ಪರಿಕರ, ವಿಷಯ, ಶೈಲಿಗಳ ಮೇಲೂ ಆಯಿತು. ಪರ್ಷಿಯನ್, ಮೊಗಲ್ ಶೈಲಿ ಭಾರತೀಯ ಚಿತ್ರಕಲೆಯ ಮೇಲೆ ಗಾಢವಾದ ಪ್ರಭಾವ ಬೀರಿದವು. ಪಹಾಡಿ, ರಾಜಸ್ಥಾನಿ, ಗುಲೇರ್, ಕಾಂಗ್ರಾ, ಬಸೋಲಿ, ದಖನಿ ಚಿತ್ರಶೈಲಿಗಳಲ್ಲಿ ಈ ಪ್ರಭಾವ ಕಾಣಬಹುದು. ಭಾರತೀಯ ರಾಜ-ಮಹಾರಾಜರೂ ಕೂಡ ಇಂಥ ಸಾಂಸ್ಕೃತಿಕ ಸಂಕ್ರಮಣ ಅಥವಾ ಕೊಡುಕೊಳ್ಳುವಿಕೆಗೆ ಸಾಕಷ್ಟು ಪ್ರೋತ್ಸಾಹವಿತ್ತುದರಿಂದಾಗಿ ಹೊರಗಿನ ಪ್ರಭಾವಗಳನ್ನು ಅರಗಿಸಿಕೊಂಡು ಅವುಗಳನ್ನು 'ಭಾರತೀಯ'ಗೊಳಿಸಿಕೊಳ್ಳುವುದು ಇಲ್ಲಿನ ಕಲಾವಿದರಿಗೆ ಸಾಧ್ಯವಾಯಿತು.
ದಖನಿ ಶೈಲಿಯ ಚಿತ್ರ






   ಕ್ರಿ.ಶ. 1850 ರಿಂದ 1950ರವರೆಗಿನ ಅವಧಿಯಲ್ಲಿ ಭಾರತೀಯ ಚಿತ್ರಕಲಾಕ್ಷೇತ್ರ ಮತ್ತೊಂದು ಮಹತ್ತರ ಬದಲಾವಣೆ/ ಪ್ರಭಾವವನ್ನು ಕಂಡಿತು. ಬ್ರಿಟಿಷರಿಂದ ಮದ್ರಾಸ್, ಕಲ್ಕತ್ತಾ, ಮುಂಬೈ ಮತ್ತು ಮೈಸೂರಿನಲ್ಲಿ ಪ್ರಾರಂಭಗೊಂಡ ಕೈಗಾರಿಕಾ ತರಬೇತಿ ಶಾಲೆಗಳ ಮೂಲಕ ಇಲ್ಲಿನ ಕಲಾಸಂಸ್ಕೃತಿಯನ್ನು ಪಾಶ್ಚಾತ್ಯೀಕರಣಗೊಳಿಸುವ ಪ್ರಯತ್ನ ನಡೆಯಿತು. ಭಾರತೀಯ ರೇಖಾಪ್ರಧಾನ ಚಿತ್ರಗಳನ್ನು ಅನರ್ಥ ರೇಖಾವಿಲಾಸ ಎಂದು ಜರೆದ ಬ್ರಿಟಿಷ್ ಆಡಳಿತ ಗ್ರೀಕೋರೋಮನ್ ಶೈಲಿಯ 'ರಿಯಲಿಸ್ಟಿಕ್' ಅಥವಾ 'ವಿಕ್ಟೋರಿಯನ್ ಅಕಾಡೆಮಿಕ್' ಎನ್ನಬಹುದಾದ ಚಿತ್ರಣವನ್ನು ಈ ಶಾಲೆಗಳ ಮುಖಾಂತರ ಭಾರತೀಯರಿಗೆ ಪರಿಚಯಿಸಿ, ಇಲ್ಲಿನ ಕುಶಲಕಲಾವಿದರನ್ನು 'ಉತ್ತಮ'ಗೊಳಿಸುವ ಉದ್ದೇಶ ಹೊಂದಿತ್ತು! ಅಲ್ಲದೆ ಇಲ್ಲಿನ ಕುಶಲಕರ್ಮಿಗಳನ್ನು ತಮಗೆ ಬೇಕಾದಂತೆ ಪಳಗಿಸಿ, ಕರಕುಶಲ ವಸ್ತುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟದ ಸರಕನ್ನಾಗಿಸುವ ವ್ಯಾಪಾರೀ ಉದ್ದೇಶವೂ ಇದರ ಹಿಂದೆ ಇತ್ತು. ಮೊದಲಿಗೆ ಕೇವಲ ಕೈಗಾರಿಕಾ ತರಬೇತಿ ಶಾಲೆಗಳಾಗಿದ್ದ ಇವು, ನಂತರದ ಕಾಲದಲ್ಲಿ ಲಲಿತಕಲೆಗಳ ಪಠ್ಯವನ್ನೂ ಅಳವಡಿಸಿಕೊಂಡವು.  ಅಲ್ಲದೆ, ಈ ಕಲಾಶಾಲೆಗಳಿಂದಾಗಿ, ಕೇವಲ ಸಾಂಪ್ರದಾಯಿಕ ಅಥವಾ ನಿರ್ದಿಷ್ಟ ಮನೆತನಗಳಿಗೆ ಮಾತ್ರ ಸೀಮಿತವಾಗಿದ್ದ ಚಿತ್ರಕಲಾಭ್ಯಾಸ ಎಲ್ಲಾ ವರ್ಗದ ಕಲಾಸಕ್ತರಿಗೂ ತೆರೆದುಕೊಂಡದ್ದು ಚಿತ್ರಕಲಾಕ್ಷೇತ್ರ ಕಂಡ ಮಹತ್ತರ ಬದಲಾವಣೆ.
  ಅಬನೀಂದ್ರನಾಥ ಟಾಗೋರರ  'ಭಾರತ ಮಾತಾ'

  






ಭಾರತೀಯ ಕಲೆಯನ್ನು ಪಾಶ್ಚಾತ್ಯೀಕರಿಸುವ ಹುನ್ನಾರದ ಸಾಂಸ್ಕೃತಿಕ ದಬ್ಬಾಳಿಕೆಯನ್ನು ತೀವ್ರವಾಗಿ ವಿರೋಧಿಸಿ, ಬಂಡಾಯವೆದ್ದದ್ದು ಕಲ್ಕತ್ತಾದ ಬೆಂಗಾಲ್ ಕಲಾಶಾಲೆ. ಅಬನೀಂದ್ರನಾಥ ಟ್ಯಾಗೋರರ ನೇತೃತ್ವದಲ್ಲಿ ಅವರ ಶಿಷ್ಯಬಳಗ ಭಾರತೀಯ ಕಲೆಯನ್ನು 'ಪುನರುಜ್ಜೀವನ'ಗೊಳಿಸುವ ಪ್ರಯತ್ನವನ್ನು ಬಂಡಾಯದೋಪಾದಿಯಲ್ಲಿ ಮಾಡಿತು. ಇದು ಸ್ವಾತಂತ್ರ್ಯಸಂಗ್ರಾಮಕ್ಕೆ ಪೂರಕವಾದ ಚಳುವಳಿಯಾಗಿಯೂ ರೂಪಪಡೆಯಿತು.






'ಗ್ಯಾಲಕ್ಸಿ ಆಫ್ ಮ್ಯುಸಿಷಿಯನ್ಸ್' - ರವಿವರ್ಮ
ದಕ್ಷಿಣದಲ್ಲಿ ರವಿವರ್ಮ ಪಾಶ್ಚಾತ್ಯರ ತೈಲವರ್ಣವನ್ನು ಅಭ್ಯಸಿಸಿ, 'ರಿಯಲಿಸ್ಟಿಕ್' ಶೈಲಿಯಲ್ಲಿ ಭಾರತೀಯ ಪುರಾಣಕಥನಗಳನ್ನು ಚಿತ್ರಿಸುವುದರ ಮೂಲಕ ಭಾರತೀಯತೆಯ ಸಮಗ್ರತೆಯನ್ನು ವಿಶಿಷ್ಟರೀತಿಯಲ್ಲಿ ಪ್ರತಿಪಾದಿಸಿದರು. ಪಾಶ್ಚಾತ್ಯ ಕಲಾಶಿಕ್ಷಣ, ರವಿವರ್ಮರ ಪ್ರಭಾವ, ಸ್ವದೇಶೀ ಚಳುವಳಿಯ ಉತ್ಕರ್ಷ - ಈ ಎಲ್ಲದರ ಪರಿಣಾಮವಾಗಿ ಭಾರತೀಯ ಚಿತ್ರಕಲೆ ತನ್ನ ಸ್ವರೂಪದಲ್ಲಿ ತೀವ್ರತರ ಬದಲಾವಣೆಗಳನ್ನು ಕಂಡಿತು.

ಸ್ವಾತಂತ್ರ್ಯೋತ್ತರ ಭಾರತದ ಕಲಾವಿದರು ಈ ಎಲ್ಲಾ ಪ್ರಭಾವಗಳನ್ನೂ ಮೀರಿ ಮತ್ತೆ ತಮ್ಮತನದ, ಪ್ರಾದೇಶಿಕ ಸೊಗಡಿನ, ಮಣ್ಣಿನ ವಾಸನೆಯ ಅಂತಃಸತ್ವವನ್ನು ತಮ್ಮ ಚಿತ್ರಗಳ ಮೂಲಕ ಹುಡುಕತೊಡಗಿದರು. ಬಾಂಬೆ, ಮದ್ರಾಸ್, ಕಲ್ಕತ್ತಾಗಳಲ್ಲಿ ಸಮಾನಮನಸ್ಕ ಕಲಾವಿದರು ಜೊತೆಗೂಡಿ ತಮ್ಮದೇ ಕಲಾಸಂಘಟನೆಗಳ ಮೂಲಕ ಮತ್ತೆ 'ತಮ್ಮತನದ' ಹುಡುಕಾಟದಲ್ಲಿ ತೊಡಗಿದರು. ಕರ್ನಾಟಕದಲ್ಲಿಯೂ ಇಂತಹ ಸಂಘಟನೆಗಳು ನಡೆದವು.
ಕೆ.ಟಿ. ಶಿವಪ್ರಸಾದ್ ರವರ ಒಂದು ಆಯಿಲ್ ಪೇಂಟಿಂಗ್

    ಇಂದು ಯಾವ ಕ್ಷೇತ್ರವೂ ಜಾಗತೀಕರಣದ ಪ್ರಭಾವದಿಂದ ಹೊರತಾಗಿಲ್ಲ. ಕಲಾಕ್ಷೇತ್ರ ಕೇವಲ ಚಿತ್ರ, ಶಿಲ್ಪ, ಮುದ್ರಣಕಲೆ ಇತ್ಯಾದಿ 'ಅಕಾಡೆಮಿಕ್' ಮಾಧ್ಯಮಗಳಿಗೆ ಮಾತ್ರ ಸೀಮಿತವಾಗಿ ಉಳಿದಿಲ್ಲ. ಇನ್ಸ್ಟಲೇಷನ್, ವಿಡಿಯೋ ಆರ್ಟ್, ಪರ್ಫಾರ್ಮೆನ್ಸ್, ಸೈಟ್ ಸ್ಪೆಸಿಫಿಕ್ ಆರ್ಟ್ - ಹೀಗೆ ಹಲವಾರು ಹೊಸ ಮಾಧ್ಯಮಗಳ ಅಗಾಧ ಸಾಧ್ಯತೆಗಳು ತೆರೆದುಕೊಂಡಿವೆ. ಸಪಾಟು ಮೇಲ್ಮೈಮೇಲೆ ರಚಿಸಲಾಗುವ ಟು ಡೈಮೆನ್ಷನಲ್ (Two Dimensional ) ಚಿತ್ರಮಾಧ್ಯಮ ಇಂದು ಆಧುನಿಕೋತ್ತರ ಮನಸ್ಥಿತಿಯ ಭರಾಟೆಯ ನಡುವೆ 'ಸಾಂಪ್ರದಾಯಿಕ' ಎನಿಸಿಬಿಡುವ ಹಂತದಲ್ಲಿದೆ.
ಅರ್ಥ್ ಆರ್ಟ್ - 'ಸ್ಪೈರಲ್ ಜೆಟ್ಟಿ'


ಶೀಲಾ ಗೌಡ ಅವರ ಇನ್ಸ್ಟಲೇಷನ್
















       
















(ಕೊಡಗಿನ ಒಂದು ಸ್ಮರಣ ಸಂಚಿಕೆಗಾಗಿ ಬರೆದ ಲೇಖನ)